ಹಾವೇರಿಯಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ; ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡಲು ರೈತ ಸಂಘ ಆಗ್ರಹ
Haveri News: ಬೆಳೆ ವೈಫಲ್ಯ ಮತ್ತು ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ತಮ್ಮ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಜರುಗಿದೆ. ಮೃತ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಮೃತ ರೈತ ಸೋಮನಗೌಡ ನಿಂಗನಗೌಡ ಮುದಿಗೌಡ್ರ. -
ಹಾವೇರಿ, ಜು.22: ಬೆಳೆ ವೈಫಲ್ಯ ಮತ್ತು ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ತಮ್ಮ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ (Haveri News) ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಜರುಗಿದೆ. ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ರೈತ ಸೋಮನಗೌಡ ನಿಂಗನಗೌಡ ಮುದಿಗೌಡ್ರ (42) ಮೃತ ರೈತ. ಇವರಿಗೆ ಸುಮಾರು 11.5 ಎಕರೆ ಕೃಷಿ ಜಮೀನು ಇದ್ದು, ಕೃಷಿ ಚಟುವಟಿಕೆಗಾಗಿ ಗ್ರಾಮೀಣ ಬ್ಯಾಂಕ್‌ನಲ್ಲಿ ₹6 ಲಕ್ಷ ಹಾಗೂ ಖಾಸಗಿ ಮೂಲಗಳಿಂದ ಸಾಲ ಸೇರಿ ₹8 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಬಾರಿ ಮಳೆಯ ಕೊರತೆಯಿಂದ ಬೆಳೆ ಕೈಕೊಟ್ಟ ಪರಿಣಾಮ ಸಾಲ ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಅವರು ಮೃತ ರೈತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರ ರೈತನ ಸಾವನ್ನು ಗಂಭೀರವಾಗಿ ಪರಿಗಣಿಸಿ, ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಎಲ್ಲಾ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಬರಪೀಡಿತ ಪ್ರದೇಶಗಳ ರೈತರಿಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಪತಿ ಸಾವು: ಅನಾಥರಾದ ಮಕ್ಕಳು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಡಿ. ಬಸವರಾಜ, ಜಿಲ್ಲಾ ಅಧ್ಯಕ್ಷ ಅನೀಲ್ ಡೊಳ್ಳಿನ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.