ಹಾವೇರಿ (ಬ್ಯಾಡಗಿ), ಡಿ.22: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಸರ್ಕಾರದ ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಬಸವರಾಜ ಬಳ್ಳಾರಿ ಪೂರ್ವ ಪ್ರಾಥಮಿಕ ಶಾಲೆ, ಸಿದ್ದಮ್ಮ ಮೈಲಾರ ಹಿರಿಯ ಪ್ರಾಥಮಿಕ ಶಾಲೆ, ವೀರಯ್ಯ ಬ ಕಳಸೂರಮಠ ಪ್ರೌಢ ಶಾಲೆ, ಸುಶೀಲಮ್ಮ ಹಾವೇರಿ ಮಠ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ, ಅವರು ಮಾತನಾಡಿದರು.
ದಕ್ಷಿಣ ಕರ್ನಾಟಕದಲ್ಲಿ ಮಹಾರಾಜರ ಕಾಲದಿಂದ ಶಾಲೆ -ಕಾಲೇಜುಗಳಿವೆ. ಉತ್ತರ ಕರ್ನಾಟಕದಲ್ಲಿ ಐವತ್ತರಷ್ಟು ಸರ್ಕಾರಿ ಶಾಲೆ ಕಡಿಮೆ ಇವೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಪ್ರೇಮಿಗಳು, ದಾನಿಗಳು ಶಿಕ್ಷಣ ಪ್ರಾರಂಭಿಸಿದರು. ಧಾರವಾಡ ಮುರುಘಾ ಮಠ ನೂರು ವರ್ಷಗಳಿಂದ ಶಿಕ್ಷಣ ಮತ್ತು ದಾಸೋಹ ಮಾಡುತ್ತಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಬಿಎಲ್‌ಡಿಇ ಸಂಸ್ಥೆ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಬಸವೇಶ್ವರ ವಿದ್ಯಾವರ್ಧಕ ಸಂಘ ಎಲ್ಲ ಸಂಸ್ಥೆಗಳು ಶಿಕ್ಷಣ ನೀಡುತ್ತಾ ಬಂದಿವೆ. ಈಗ ದಕ್ಷಿಣ ಕರ್ನಾಟಕದಲ್ಲಿ ಇರುವಷ್ಟು ಶಾಲೆಗಳು ಉತ್ತರ ಕರ್ನಾಟಕದಲ್ಲಿ ಆಗಬೇಕು ಎಂದು ಹೇಳಿದರು.
ನಾನು ಹಾವೇರಿಗೆ ಯುನಿವರ್ಸಿಟಿ ಮಾಡಿದೆ. ಅದರಿಂದ ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್ ವಿದ್ಯಾರ್ಥಿಗಳು ಪಿಜಿ ಮಾಡುವಂತಾಯಿತು. ಅದರಲ್ಲೂ ಎಸ್ಸಿ, ಎಸ್ಟಿ ಮಕ್ಕಳು 50% ರಷ್ಟು ಇದ್ದಾರೆ. ಅವುಗಳನ್ನು ಬಂದ್ ಮಾಡಬೇಕು ಅಂತ ಸರ್ಕಾರ ಪ್ರಯತ್ನ ಮಾಡುತ್ತಿದೆ. ಸರ್ಕಾರ ನಯಾ ಪೈಸೆ ಕೊಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ನಾವು ಶಿಕ್ಷಣ ಕಲಿಸಲು ಮುಂದಾದರೆ, ಅದನ್ನು ಸರ್ಕಾರವೇ ನಿಲ್ಲಿಸಿದರೆ, ನಮ್ಮ ಬಡ ಮಕ್ಕಳು ಎಲ್ಲಿಗೆ ಹೋಗಬೇಕು. ನೂರಾರು ಎಕರೆ ಭೂಮಿ ತೆಗೆದುಕೊಂಡು ವಿಶ್ವವಿದ್ಯಾಲಯ ಮಾಡುವುದು ಹಳೆಯ ಕಾಲ. ಈಗ ಕಂಪ್ಯೂಟರ್ ಕಾಲ. ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯಲು ಅವಕಾಶ ಇದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು. ನಮ್ಮ ಅವಧಿಯಲ್ಲಿ ವಿವೇಕ ಯೋಜನೆಯಿಂದ 30 ಸಾವಿರ ಶಾಲಾ ಕೊಠಡಿ ಕಟ್ಟಲು ಪ್ರಾರಂಭಿಸಿದ್ದೆವು. 9 ಸಾವಿರ ಶಾಲಾ ಕೊಠಡಿ ನಿರ್ಮಾಣ ಪೂರ್ಣಗೊಳ್ಳುತ್ತಿದೆ. ಈ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಈಗ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಈಗ ಒಟ್ಟು ಮೂವತ್ತು ಅಂಕ ಬಿದ್ದರೆ ಸಾಕು. ಅದರಲ್ಲಿ 16 ಅಂಕ ಆಂತರಿಕ ಅಂಕ ಕೊಡ್ತಾರಂತೆ. ಇದರಿಂದ ಶಿಕ್ಷಣ ಗುಣಮಟ್ಟ ಹಾಳಾಗುತ್ತದೆ. ಇದನ್ನು ತಡೆಗಟ್ಟಿ, ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ಇನ್ನು ಗದಗ- ಯಲವಿಗೆ ರೈಲ್ವೆ ಯೋಜನೆ ಆರಂಭಕ್ಕೆ ಪತ್ರ ಬರೆದಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಯೋಜನೆ ಮಂಜೂರು ಮಾಡಲಿದ್ದಾರೆ. ಆಸ್ಪತ್ರೆ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿದೇಶಗಳಿಂದ ಮುಕ್ತ ವ್ಯಾಪಾರ ಒಪ್ಪಂದ: ಜೋಶಿ
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡರಾದ ಬಸವರಾಜ ಹಾವೇರಿಮಠ, ಶಿವಬಸಪ್ಪ ಕುಳೇನೂರ, ಅಭಿಷೇಕ ಗುಡಗೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.