Basavaraj Bommai: ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಬಸವರಾಜ ಬೊಮ್ಮಾಯಿ
Mysuru Sri Ramakrishna Ashram Centenary: ನಮ್ಮ ಮನಸ್ಸಿನಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಬುದ್ಧಿ ಒಂದು ಹೇಳಿದರೆ ಮನಸ್ಸು ಇನ್ನೊಂದು ಹೇಳುತ್ತದೆ. ಬುದ್ದಿ ಮತ್ತು ಮನಸ್ಸನ್ನು ಯಾವಾಗ ಒಂದುಗೂಡಿಸುತ್ತೇವೆಯೇ ಅದೇ ಅಮೃತಗಳಿಗೆ. ಮನಸ್ಸು ಮತ್ತು ಹೃದಯ ಒಂದಾದಾಗ ಅಮೃತ ಘಳಿಗೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವದಲ್ಲಿ ಬಸವರಾಜ ಬೊಮ್ಮಾಯಿ. -
ಮೈಸೂರು, ನ.24: ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ. ಭಾರತದ ಮೇಲೆ ಕೇವಲ ಭೂಮಿ ಮತ್ತು ಸಂಪತ್ತಿಗಾಗಿ ದಾಳಿ ನಡೆಯಲಿಲ್ಲ. ಇಲ್ಲಿನ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಆದರೆ, ಸ್ವಾಮಿ ವಿವೇಕಾನಂದರಂತಹ ನೂರಾರು ಸಂತರು ಈ ದೇಶವನ್ನು ಉಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಎರಡು ವಿಚಾರ ಹೇಳಿದ್ದಾರೆ. ಜ್ಞಾನ ಮತ್ತು ಧ್ಯಾನದಲ್ಲಿ ಯಾರು ಪರಿಪೂರ್ಣತೆ ಕಾಣುತ್ತಾರೆ ಅವರು ದೇವರನ್ನು ಕಾಣುವ ಸನ್ಮಾರ್ಗ ಕಾಣುತ್ತಾರೆ. ಸನ್ಮಾರ್ಗಕ್ಕೆ ಹೋಗುವ ವಾಹನ ಧರ್ಮ. ಧರ್ಮ ಸತ್ಯದಿಂದ ಕೂಡಿದೆ ಮತ್ತು ಮಾನವೀಯತೆಯಿಂದ ಕೂಡಿದೆ. ಇವೆರಡೂ ಕೂಡ ಭಗವಂತ ನಮ್ಮನ್ನು ಸೃಷ್ಟಿ ಮಾಡಿರುವ ಉದ್ದೇಶ, ಆದ್ದರಿಂದ ಇವತ್ತು ಧರ್ಮದಿಂದ ಸತ್ಕಾರ್ಯ ಮಾಡಿ, ಬುದ್ಧಿಯಿಂದ ಸನ್ಮಾರ್ಗದಲ್ಲಿ ಕಂಡುಕೊಂಡರೆ ನಾವು ಭಗವಂತನನ್ನು ಕಾಣಬಹುದು. ದೇವರು ಎಲ್ಲ ಕಡೆ ಇದ್ದಾನೆ. ಆದರೆ, ನೋಡುವಂತ ಕಣ್ಣು ನಮ್ಮಲ್ಲಿ ಇಲ್ಲ. ಕಣ್ಣಿದ್ದು ಕುರುಡರಿದ್ದೇವೆ. ಒಳಗಣ್ಣು ತೆರೆದಾಗ ಭಗವಂತ ಎಲ್ಲರಿಗೂ ಕಾಣಿಸುತ್ತಾರೆ. ಯಾರು ಮಹಾತ್ಮರು ಎಂದರೆ ಎಲ್ಲ ಮನುಷ್ಯರಲ್ಲಿ ಪರಮಾತ್ಮನನ್ನು ಕಾಣುವವನೇ ಮಹಾತ್ಮ ಎಂದು ವಿವೇಕಾನಂದರು ಹೇಳಿದ್ದಾರೆ. ಹಾಗಂತ ಕೃತಕರಾಗಿ ಮಹಾತ್ಮರಾಗಲು ಬಯಸಬಾರದು. ನೈಜವಾಗಿ ಎಲ್ಲದರಲ್ಲಿಯೂ ಪರಮಾತ್ಮರನ್ನು ಕಂಡರೆ ನಮ್ಮಷ್ಟಕ್ಕೆ ನಾವೇ ಎತ್ತರಕ್ಕೆ ಹೋಗಲು ಸಾಧ್ಯ ಇದೆ ಎಂದು ತಿಳಿಸಿದರು.
ಬುದ್ಧಿ ಮತ್ತು ಮನಸ್ಸು ಒಂದಾದಾಗ ಅಮೃತ ಘಳಿಗೆ
ನಮ್ಮ ಮನಸ್ಸಿನಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಬುದ್ದಿ ಒಂದು ಹೇಳಿದರೆ ಮನಸ್ಸು ಇನ್ನೊಂದು ಹೇಳುತ್ತದೆ. ಬುದ್ದಿ ಮತ್ತು ಮನಸ್ಸನ್ನು ಯಾವಾಗ ಒಂದುಗೂಡಿಸುತ್ತೇವೆಯೇ ಅದೇ ಅಮೃತಗಳಿಗೆ. ಮನಸ್ಸು ಮತ್ತು ಹೃದಯ ಒಂದಾದಾಗ ಅಮೃತ ಘಳಿಗೆಯಾಗುತ್ತದೆ ಎಂದು ಹೇಳಿದರು.
ನ.28ರಂದು ಉಡುಪಿಗೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋ ರದ್ದು
ಸಂಸ್ಕೃತಿ ಮೇಲೆ ದಾಳಿ
ಇವತ್ತು ಸಮಾಜದಲ್ಲಿ ಬಹಳಷ್ಟು ಗೊಂದಲ ಸೃಷ್ಟಿಯಾಗಿದೆ. ಇಡೀ ಜಗತ್ತಿನಲ್ಲಿ ಗೊಂದಲ ಸೃಷ್ಟಿಯಾಗಿದೆ. ಮಾನವನ ಮನಸ್ಸು ಬಹಳ ಕಲುಷಿತವಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಧರ್ಮ ಎಲ್ಲರನ್ನು ಕೂಡಿಸಬೇಕು. ಆದರೆ, ಧರ್ಮ ಎಲ್ಲರನ್ನು ಬೇರ್ಪಡಿಸುತ್ತಿದೆ. ಸ್ವಾಮಿ ವಿವೇಕಾನಂದರು ಧರ್ಮದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ನೀನು ಬದುಕಿರುವ ಭೂಮಿಯನ್ನು ಪ್ರೀತಿಸು ಅಂತ ಹೇಳಿದ್ದಾರೆ. ಧರ್ಮ ಮತ್ತು ದೇಶದ ಬಗ್ಗೆ ಸಂಬಂಧ ಅಲ್ಲಿಂದ ಶುರುವಾಗುತ್ತದೆ. ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೆ. ನಮ್ಮ ಭಾರತ ದೇಶದ ಪರಿಸ್ಥಿತಿ ನೋಡಿದಾಗ ವೈಯಕ್ತಿಕವಾಗಿ ಎಲ್ಲರೂ ಬುದ್ಧಿವಂತರಿದ್ದೇವೆ. ನಮಗೆ ಬಹಳ ಗೊಂದಲದ ಚರಿತ್ರೆ ಇದೆ. ಬೇರೆ ದೇಶದಲ್ಲಿ ದೊಡ್ಡ ಯುದ್ಧಗಳಾದರೂ ಯಾವುದೇ ಸಂಸ್ಕೃತಿ, ಧರ್ಮ ಬದಲಾಗಲಿಲ್ಲ. ಆದರೆ, ಇಲ್ಲಿ ಕೇವಲ ಭೂಮಿಗಾಗಿ, ಸಂಪತ್ತಿಗಾಗಿ ದಾಳಿ ನಡೆಯಲಿಲ್ಲ. ಇಲ್ಲಿ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಏಕೆಂದರೆ ಈ ಧರ್ಮದ ಬೇರುಗಳು ಅಷ್ಟು ಆಳವಾಗಿರುವುದರಿಂದ ಎಲ್ಲೆಡೆ ಪಸರಿಸುತ್ತವೆ ಎಂದು ದಾಳಿ ಮಾಡಿದರು.
ಆದರೆ, ಸ್ವಾಮಿ ವಿವೇಕಾನಂದನಂತಹ ನೂರಾರು ಸಂತರು ಈ ದೇಶವನು ಉಳಿಸಿದ್ದಾರೆ. ಆ ಅಸ್ತಿತ್ವ ಉಳಿಸುವ ಕೆಲಸ ಸ್ವಾಮೀಜಿಗಳು ಮಾಡುತ್ತಿದ್ದಾರೆ. ಸಾವಿರಾರು ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಚರಿತ್ರೆ ಕೊಟ್ಟಿದ್ದಾರೆ. ಅದನ್ನು ಪರಿಪೂರ್ಣವಾಗಲು ಈ ಮಠ ಕೊಟ್ಟಿದೆ. ದೇಶ ಕಟ್ಟುವ ಕೆಲಸ ಏನೆಂದು ತೋರಿಸಿದ್ದೀರಿ. ನಿಮಗೆ ಕೋಟಿ ಕೋಟಿ ನಮನ, ಇದು ಭದ್ರ ಬುನಾದಿಯಾಗಲಿ ಎಂದು ಬೊಮ್ಮಾಯಿ ತಿಳಿಸಿದರು.
ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ಗ್ಯಾರಂಟಿ ಯೋಜನೆ: ಬೊಮ್ಮಾಯಿ
ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಮುಕ್ತಿನಂದಾ ಸ್ವಾಮೀಜಿ, ಸುತ್ತೂರು ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಅನೇಕ ಗಣ್ಯರು ಹಾಜರಿದರು.