Havyaka Special Award: ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ; ನಾಳೆ ಸಂಸ್ಥಾಪನೋತ್ಸವದಲ್ಲಿ ಪ್ರಶಸ್ತಿ ಪ್ರದಾನ
Havyaka Special Award: ಏಪ್ರಿಲ್ 27 ಭಾನುವಾರದಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಆಯೋಜಿಸಿರುವ 82ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆ ತಿಳಿಸಿದೆ.


ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ (Havyaka Special Award) ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 27 ಭಾನುವಾರದಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯುವ 82ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹವ್ಯಕ ವಿಶೇಷ ಪ್ರಶಸ್ತಿ-2024-25ಕ್ಕೆ ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ.
ಹವ್ಯಕ ವಿಭೂಷಣ
- ಜಿ. ವಿ. ಭಟ್ ಗೋರೆ, ಉದ್ಯಮಿಗಳು ಮತ್ತು ಸಮಾಜ ಸೇವಕರು
ಹವ್ಯಕ ಭೂಷಣ
- ಪಾದೇಕಲ್ಲು ವಿಷ್ಣು ಭಟ್ಟ, ವಿದ್ವಾಂಸರು ಮತ್ತು ಭಾಷಾ ತಜ್ಞರು
- ಎಸ್. ಎನ್. ಹೆಗಡೆ, ಶಿಕ್ಷಣ ಮತ್ತು ಸಂಶೋಧನಾ ತಜ್ಞರು
- ಪರಮೇಶ್ವರ ಹೆಗಡೆ ಶಿರಸಿ, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (SP)
ಹವ್ಯಕ ಶ್ರೀ
- ಸಂಜಯ ಬೆಳೆಯೂರು, ಯಕ್ಷಗಾನ ಕಲಾವಿದರು
2. ಕಾವ್ಯ ಜಿ. ರಾವ್, ನೃತ್ಯ ಕಲಾವಿದರು
3. ಕೆ. ಜೆ. ದಿಲೀಪ್, ಸಂಗೀತ ಕಲಾವಿದರು
ಹವ್ಯಕ ಸೇವಾಶ್ರೀ
- ಶ್ರೀ ನಾರಾಯಣ ಭಟ್ ಹುಳೇಗಾರು, ನಿರ್ದೇಶಕರು, ಸಂಚಾಲಕರು - ಹವ್ಯಕ ಮಾಸ ಪತ್ರಿಕೆ
ಪ್ರಶಸ್ತಿ ಆಯ್ಕೆ ಹೇಗೆ?
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ, ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೆಯೇ ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ 'ಪಲ್ಲವ' ಪ್ರಶಸ್ತಿಯನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂದೇಶ ತಲಕಾಲಕೊಪ್ಪ : 8970228945 ಅವರನ್ನು ಸಂಪರ್ಕಿಸಬಹುದು.
ಪ್ರಶಸ್ತಿ ಪುರಸ್ಕೃತರ ಪರಿಚಯ
ಗಣಪತಿ ವೆಂಕಟ್ರಮಣ ಭಟ್ಟ - ಹವ್ಯಕ ವಿಭೂಷಣ

ಗೋರೆಭಟ್ಟರು ಎಂದೇ ಸಮಾಜಕ್ಕೆ ಆಪ್ತರಾಗಿರುವ ಜಿ.ವಿ.ಭಟ್ ಗೋರೆ ಅವರು ಕುಮಟಾ ಮೂಲದ ಬೆಂಗಳೂರು ನಿವಾಸಿ. ಆ ಕಾಲದಲ್ಲಿಯೇ ಬಿ.ಇ, ಎಂ.ಟೆಕ್. ಪದವಿಯನ್ನು ಮುಂಬೈನ ಐಐಟಿಯಿಂದ ಪಡೆದ ಭಟ್ಟರು ಪ್ರಪಂಚದ ಹಲವಾರು ಹೆಸರಾಂತ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಸ್ವಂತ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿ, ಕೋಲಾರದ ಮಾಲೂರಿನಲ್ಲಿ ಕೋಟಿ ವಹಿವಾಟಿನ ಸಿ. ಇ. ಟಿ ಪ್ಲಾಂಟ್ ಪ್ರೈ. ಲಿ ಎಂಬ ಸಾಮಾನ್ಯ ತ್ಯಾಜ್ಯ ನಿರ್ವಹಣೆಯ ಬೃಹತ್ ಉದ್ಯಮವನ್ನು ನಡೆಸುತ್ತಿದ್ದಾರೆ. ಹಲವು ದಶಕಗಳಿಂದ ಮಹಾಸಭೆಯೊಂದಿಗೆ ನಿಕಟ ಸಂಪರ್ಕಹೊಂದಿದ್ದು, ಮಹಾಸಭೆಯ ದೊಡ್ಡಯೋಜನೆಗಳಲ್ಲಿ ಇವರ ಸೇವೆಯದ್ದೇ ಸಿಂಹಪಾಲು. ಅಲ್ಲದೇ ಪ್ರತೀವರ್ಷ ಲಕ್ಷಕ್ಕೂ ಮಿಕ್ಕಿ ವಿದ್ಯಾಪ್ರೋತ್ಸಾಹನಿಧಿಗೆ ದೇಣಿಗೆ ಸಮರ್ಪಸುತ್ತಿದ್ದಾರೆ. ಸಮಾಜಮುಖಿ ವ್ಯಕ್ತಿತ್ವ, ಮಹಾದಾನಿ, ಶ್ರೇಷ್ಠ ಉದ್ಯಮಿ ಜಿ. ವಿ. ಭಟ್ಟ ಗೋರೆಯವರಿಗೆ ಹವ್ಯಕ ಮಹಾಸಭಾವು ಹವ್ಯಕ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ನಾರಾಯಣ ಭಟ್ ಹುಳೇಗಾರು - ಹವ್ಯಕ ಸೇವಶ್ರೀ

ಹುಳೇಗಾರಿನವರಾದ ನಾರಾಯಣ ಭಟ್ ಅವರು, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ತಮ್ಮ ಇಷ್ಟದ ಉಪನ್ಯಾಸ ವೃತ್ತಿಯಲ್ಲಿ ತೊಡಗಿಸಿಕೊಂಡರು. ಪ್ರತಿಷ್ಠಿತ ಸೇಂಟ್ ಆನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ತೃಪ್ತಿಯಿಂದ ನಿವೃತ್ತರಾದರು. ವೃತ್ತಿ ನಿರತರಾಗಿದ್ದಾಗಲೇ ಹವ್ಯಕ ಮಹಾಸಭೆಯ ಸಂಪರ್ಕ ಹೊಂದಿ, ಎರಡು ಬಾರಿ ಹವ್ಯಕ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿದರು. 24 ವರ್ಷದಿಂದ ಹವ್ಯಕ ಪತ್ರಿಕೆಯ ಸಂಚಾಲಕರಾಗಿ, ಮಹಾಸಭೆಯ ನಿರ್ದೇಶಕರಾಗಿ, ಅನೇಕ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 35 ವರ್ಷಗಳಿಂದ ಯಾವ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವುದು ಇವರ ಸಮಾಜಮುಖಿ ವ್ಯಕ್ತಿತ್ವಕ್ಕೆ ತೆರೆದ ಮನಸ್ಸಾಗಿದೆ. ಒಬ್ಬ ಹವ್ಯಾಸಿ ಬರಹಗಾರರಾದ ಇವರು ರಚಿಸುತ್ತಿರುವ ಮಹಾಸಭೆಯ ಸಮಗ್ರ ಇತಿಹಾಸವನ್ನೊಳಗೊಂಡ `ಸಾಕ್ಷಾತ್ಕಾರ’ ಕೃತಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ತೃತೀಯ ವಿಶ್ವಹವ್ಯಕ ಸಮ್ಮೇಳನದ ಅಂಗವಾಗಿ ಹೊರ ಬರಲಿರುವ ಸಹಸ್ರ ಚಂದ್ರ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾಸಭೆಗೆ ಇವರು ಮಾಡುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಶ್ರೀಯುತರಿಗೆ 'ಹವ್ಯಕ ಸೇವಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಡಾ. ಪಾದೇಕಲ್ಲು ವಿಷ್ಣು ಭಟ್ಟ - ಹವ್ಯಕ ಭೂಷಣ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರಾದ ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯಲ್ಲಿ ಪ್ರಥಮ ಸ್ಥಾನಗಳಿಸಿ, ಭಾಗವತದ ಯಕ್ಷಗಾನ ಪ್ರಸಂಗಗಳು ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದು ಉಪನ್ಯಾಸಕರಾಗಿ, ಪ್ರವಚನಕಾರರಾಗಿ, ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ವಿವಿಧ ಕಾಲೇಜುಗಳಲ್ಲಿ ಸೇವೆಸಲ್ಲಿಸಿದವರು. ಕನ್ನಡ ಮತ್ತು ತುಳು ಲೇಖಕರಾಗಿ, ತುಳು ನಿಘಂಟು ರಚನೆ, ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಸ್ವಂತ ರಚಿತ ಕೃತಿಗಳು, ಸಂಪಾದಿತ ಕೃತಿಗಳು ಹಾಗೂ ಅನುವಾದಿತ ಕೃತಿಗಳು ಹಲವಾರು. ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸಾಧನೆಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಸಾಹಿತ್ಯ ಕ್ಷೇತ್ರ, ಭಾಷಾಧ್ಯಯನ, ಹಳೆಗನ್ನಡ ಸಾಹಿತ್ಯ, ಯಕ್ಷಗಾನ ಸಾಹಿತ್ಯ ಹೀಗೆ ಹಲವು ರಂಗಗಳಲ್ಲಿನ ಸೇವೆಯನ್ನು ಗುರುತಿಸಿ ಹವ್ಯಕ ಮಹಾಸಭಾವು ಶ್ರೀಯುತರಿಗೆ ಹವ್ಯಕ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಡಾ. ಎಸ್.ಎನ್. ಹೆಗಡೆ - ಹವ್ಯಕ ಭೂಷಣ

ಶ್ರೀಯುತರು ವಿಜ್ಞಾನ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೊಡುಗೆ ನೀಡಿದ ಹಿರಿಯ ವಿಜ್ಞಾನ ಲೇಖಕರು ಮತ್ತು ಶಿಕ್ಷಣತಜ್ಞರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಭೋಧಕ ಹುದ್ದೆಗಳನ್ನು ಅಲಂಕರಿಸಿ, ತಮ್ಮ ಸೇವಾ ಕಾಲದಲ್ಲಿ ಹಲವಾರು ಪುಸ್ತಕಗಳು ಹಾಗೂ ಸಂಶೋಧನಾ ಲೇಖನಗಳನ್ನು ರಚಿಸಿದ್ದಾರೆ. ರಾಷ್ಟ್ರದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ವಿವಿಧ ಸಮಿತಿಗಳ ಸದಸ್ಯರಾಗಿ ಕೆಲಸ ಮಾಡಿದ ಇವರಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಇವರು ರಚಿಸಿದ 'ತಳಿ ವಿಜ್ಞಾನದ ತತ್ವಗಳು' ಪುಸ್ತಕವು ಭಾರತ್ ಭಾಷಾ ಯೋಜನೆಯ ಅಡಿಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪಠ್ಯಪುಸ್ತಕವಾಗಿ ಆಯ್ಕೆ ಆಗಿದ್ದು, ಭಾರತದ ಎಲ್ಲಾ ಭಾಷೆಗಳಲ್ಲಿ ಭಾಷಾಂತರಗೊಂಡಿದೆ.
ಈ ಕೃತಿಯ ಕನ್ನಡ ಅವತರಣಿಕೆಯನ್ನು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ಶ್ರೀಯುತರ ಶಿಕ್ಷಣ ಕ್ಷೇತ್ರ ಹಾಗೂ ವಿಜ್ಞಾನ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹವ್ಯಕ ಮಹಾಸಭಾವು ಹವ್ಯಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಿದೆ.
ಪರಮೇಶ್ವರ ಅನಂತ ಹೆಗಡೆ - ಹವ್ಯಕ ಭೂಷಣ

ಶಿರಸಿಯ ಸೋಂದಾದ ಪರಮೇಶ್ವರ ಅನಂತ ಹೆಗಡೆಯವರು ಎಂ. ಎ ಪದವಿ ಪಡೆದು ಇಂಗ್ಲಿಷ್ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಸೇವಾ ಹಿ ಪರಮೋ ಧರ್ಮಃ ಎಂಬಂತೆ ರಾಜ್ಯದ ಜನತೆಯ ಸೇವೆಗೈಯುವ ಉದ್ದೇಶದಿಂದ 1994 ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾದರು. ಸಬ್ ಇನ್ಸ್ಪೆಕ್ಟರ್ ಹುದ್ದೆಯಿಂದ ಹೆಚ್ಚುವರಿ ಎಸ್‌ಪಿ ವರೆಗಿನ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ ಇವರು, ಪ್ರಸ್ತುತ ಉಡುಪಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಪಹರಣ, ಕೊಲೆ, ದರೋಡೆ, ನಕ್ಸಲ್ ಹಾಗೂ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿ, ಹಲವಾರು ಅಪರಾಧ ಪ್ರಕರಣಗಳನ್ನು ಭೇದಿಸಿದ ಖ್ಯಾತಿ ಇವರದ್ದು. ಸಿಐಡಿಯಲ್ಲಿ ಹಲವಾರು ಗಂಭೀರ ಪ್ರಕರಣಗಳನ್ನು ತನಿಖೆ ನಡೆಸಿ ಯಶಸ್ವಿಯಾಗಿರುವ ಇವರಿಗೆ ರಾಷ್ಟ್ರಪತಿ ಪದಕ, ಸಿಎಂ ಪದಕ, ಯೂನಿಯನ್ ಹೋಂ ಮಿನಿಸ್ಟರ್ ಪದಕ ಸೇರಿದಂತೆ ಹಲವಾರು ಗೌರವಗಳು ಲಭಿಸಿವೆ. ಇವರ ಸೇವೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭಾವು ‘ಹವ್ಯಕ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ವಿದ್ವಾನ್ ಕೆ.ಜೆ. ದಿಲೀಪ್ - ಹವ್ಯಕ ಶ್ರೀ

ಕಾಸರಗೋಡು ಜಿಲ್ಲೆಯ ನೀರ್ಚಾಲು ಮೂಲದವರಾದ ವಿದ್ವಾನ್ ಕೆ.ಜೆ. ದಿಲೀಪ್ ಅವರು ತಂದೆ ವಿದ್ವಾನ್ ಕೆ.ಜೆ. ಶ್ಯಾಮಶರ್ಮ ಅವರಿಂದ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದು, ಪದ್ಮಭೂಷಣ ಎಂ.ಎಸ್. ಗೋಪಾಲಕೃಷ್ಣನ್ ಅವರ ಶಿಷ್ಯರಾಗಿ ವಯೋಲಿನ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ಮುಂದೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ ಪದವಿ ಪಡೆದುಕೊಂಡರು. ಅನೇಕ ಹಿರಿಯ ವಿದ್ವಾಂಸರೊಂದಿಗೆ ವೇದಿಕೆ ಹಂಚಿಕೊಂಡಿರುವ ದಿಲೀಪ್ ಅವರು ಅತ್ಯುತ್ತಮ ವೈಯೋಲಿನ್ ಸಹವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಹಾಗೂ ವಿದೇಶಗಳ ಹಲವಾರು ಶ್ರೇಷ್ಠ ವೇದಿಕೆಗಳಲ್ಲಿ ಕಛೇರಿ ನೀಡಿರುವ ದಿಲೀಪ್ ಅವರು ಚಲನಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ತಾವು ನುಡಿಸಿರುವ ʼಮಾನ್‌ಸೂನ್ ರಾಗʼ ಚಿತ್ರವೊಂದರ ಸಂಗೀತ ಟ್ರ್ಯಾಕ್‌ಗೆ 3 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆ ದೊರಕಿದೆ. ತಾವು ಸ್ಥಾಪಿಸಿರುವ ʼಲಕ್ಷ್ಯ ಬ್ಯಾಂಡ್ʼ ನವೀನ ಸಂಗೀತ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದೆ. ಇವರಿಗೆ ಯುವಶ್ರೀ, ಎಂ.ಎಸ್. ಸುಬ್ಬಲಕ್ಷ್ಮಿ ಫೆಲೋಶಿಪ್, ಲಾಲ್ಗುಡಿ ಜಯರಾಮನ್ ಎಂಡೋವ್‌ಮೆಂಟ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಶ್ರೀಯುತರಿಗೆ ಹವ್ಯಕ ಮಹಾಸಭಾವು ಹವ್ಯಕ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಸಂಜಯ ಬೆಳೆಯೂರು - ಹವ್ಯಕ ಶ್ರೀ

ಸಂಜಯ ಬೆಳೆಯೂರು ಒಬ್ಬ ಅಪ್ರತಿಮ ಯಕ್ಷಗಾನ ಕಲಾವಿದರು. ಯಕ್ಷಋಷಿ ದಿವಂಗತ ಹೊಸ್ತೋಟ ಮಂಜುನಾಥ ಭಾಗವತರು ಹಾಗೂ ಬಿ.ಪಿ. ಬಾಲಕೃಷ್ಣ ಬೆಳೆಯೂರು ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ ಮೊದಲಿಗೆ ಸಾಕೇತ ಕಲಾವಿದರೊಂದಿಗೆ ವೇಷ ಮಾಡಲು ಪ್ರಾರಂಭಿಸಿ ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೋಣನಕಟ್ಟೆ , ಕೆರೆಮನೆ ಮೇಳ, ಕೊಂಡದಕುಳಿ, ಸಾಲಿಗ್ರಾಮ, ಪೆರ್ಡೂರು ಮುಂತಾದ ಹೆಸರಾಂತ ಮೇಳಗಳಲ್ಲಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ. ಯಕ್ಷಗಾನದ ಮುಖವರ್ಣಿಕೆಯಲ್ಲಿ ಅತ್ಯಂತ ಪ್ರಭಾವ ಬೀರುವ ಮುಖವರ್ಣಿಕೆ ಇವರದ್ದು. ಸಂದರ್ಭಕ್ಕೆ ಉಚಿತವಾದ ಮಾತು, ಪದ್ಯಗಳ ಭಾವಾರ್ಥ ತಿಳಿದು ತಕ್ಕುದಾದ ಅಭಿನಯದಿಂದ ಪ್ರೇಕ್ಷಕವೃಂದದ ಪ್ರಶಂಸೆಗೆ ಭಾಜನರಾಗಿದ್ದಾರೆ. ಯಕ್ಷಭೂಷಣ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಎನ್ನುವ ಸಂಸ್ಥೆಯನ್ನು ಕಟ್ಟಿ, ತಾವೇ ಸ್ವತಃ ಯಕ್ಷಗಾನ ವೇಷಭೂಷಣಗಳನ್ನು ತಯಾರಿಸುತ್ತಿದ್ದಾರೆ. ತಮ್ಮ ಈ ಕಲಾ ಕೌಶಲದ ವೇಷ ಭೂಷಣಗಳು ದೇಶ ವಿದೇಶಗಳಲ್ಲಿ ಕಲಾವಿದರ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನವನ್ನು ವಿಶ್ವಗಾನವನ್ನಾಗಿಸಲು ಇವರ ಕೊಡುಗೆ ಅಪಾರ. ಕೊಂಡದಕುಳಿ ರಾಮ ಹೆಗಡೆ ಪ್ರಶಸ್ತಿ, ನಾಟ್ಯಶ್ರೀ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿರುವ ಶ್ರೀಯುತರಿಗೆ ಹವ್ಯಕ ಮಹಾಸಭಾವು ಹವ್ಯಕ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ವಿದುಷಿ ಕಾವ್ಯ ಜಿ ರಾವ್ - ಹವ್ಯಕ ಶ್ರೀ

ವಿದುಷಿ ಕಾವ್ಯ ಜಿ. ರಾವ್ ಒಬ್ಬ ಪ್ರಖ್ಯಾತ ಭರತನಾಟ್ಯ ಹಾಗೂ ನಾಟಕ ಕಲಾವಿದೆ. ತಮ್ಮ ನಾಲ್ಕನೇ ವಯಸ್ಸಿನಲ್ಲಿ ನೃತ್ಯಪ್ರಾರಂಭ ಮಾಡಿದ ಅವರು ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಏಕಪಾತ್ರಾಭಿನಯ, ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟನೆ ಅಲ್ಲದೇ ನೃತ್ಯ ಸಂಯೋಜನೆ ಮಾಡುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಕೇಂದ್ರೀಯ ಸಾಂಸ್ಕೃತಿಕ ಸಂಪನ್ಮೂಲ ಇಲಾಖೆಯಿಂದ ಪ್ರತೀ ತಿಂಗಳ ಶಿಷ್ಯ ವೇತನವನ್ನು ಪಡೆಯುತ್ತಿರುವ ಇವರು, ದೇಶಾದ್ಯಂತ ಅಲ್ಲದೇ, ಅಮೆರಿಕದ ಅಕ್ಕ ಸಮ್ಮೇಳನ, ದುಬೈ, ಕುವೈತ್, ಸಿಂಗಾಪುರ, ನೇಪಾಳ, ಮಲೇಷಿಯಾ ಮುಂತಾದ ದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಆರಕ್ಕೂ ಮಿಕ್ಕಿ ನಾಟಕಗಳು, ಸುಮಾರು ಹನ್ನೆರಡು ಧಾರಾವಾಹಿಗಳು, ನಾಲ್ಕು ಚಲನಚಿತ್ರಗಳು ಹಾಗೂ ಅನೇಕ ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸಿದ್ದಾರೆ. ಕಾವ್ಯ ನಾಟ್ಯ ಕಲಾನಿಕೇತನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಅನೇಕ ನೃತ್ಯಾಸಕ್ತರಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಆರ್ಯಭಟ, ನೃತ್ಯ ಮಂದಾರ, ಕೆಂಪೇಗೌಡ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿರುವ ಶ್ರೀಯುತರಿಗೆ ಹವ್ಯಕ ಮಹಾಸಭಾವು ಹವ್ಯಕ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಈ ಸುದ್ದಿಯನ್ನೂ ಓದಿ | Roopa Gururaj Column: ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ