Hindi Third Language: ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ನಿರ್ಧಾರ ಹೀಗೆ: ಕರಡು ಅಧಿಸೂಚನೆ
ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ A, B ಮತ್ತು C ಗ್ರೇಡ್‌ಗಳನ್ನು ನೀಡಲಾಗುತ್ತದೆ. ಅಧಿಸೂಚನೆಯಂತೆ, 80ರಿಂದ 100 ಅಂಕ ಗಳಿಸಿದವರಿಗೆ A ಗ್ರೇಡ್, 50ರಿಂದ 79 ಅಂಕಗಳಿಗೆ B ಗ್ರೇಡ್ ಮತ್ತು 49ರವರೆಗೆ ಅಂಕ ಪಡೆದವರಿಗೆ C ಗ್ರೇಡ್ ಸಿಗಲಿದೆ. ಹೀಗಿದ್ದರೂ ಈ ಗ್ರೇಡ್‌ಗಳು ವಿದ್ಯಾರ್ಥಿಗಳ ಪಾಸ್ ಅಥವಾ ಫೇಲ್ ಬಗ್ಗೆ ಸೂಚಿಸುವುದಿಲ್ಲ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ. 12: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLE exam) ತೃತೀಯ ಭಾಷೆಗೆ, ಮುಖ್ಯವಾಗಿ ಹಿಂದಿಗೆ (hindi) ಅಂಕಗಳನ್ನು ನೀಡುವ ಬದಲು ಗ್ರೇಡ್ (Hindi Third Language) ನೀಡುವ ನಿರ್ಧಾರ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಇದೇ ವಿಚಾರ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ ಮೌಲ್ಯಮಾಪನ ಕುರಿತ ಕರಡು ಅಧಿಸೂಚನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ ಹಾಗೂ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಪರಿಗಣಿಸಲಲು ನಿರ್ಧರಿಸಿರುವ ಬಗ್ಗೆ ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದರು.
ಕರಡು ಅಧಿಸೂಚನೆಯ ಪ್ರಕಾರ, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ A, B ಮತ್ತು C ಗ್ರೇಡ್‌ಗಳನ್ನು ನೀಡಲಾಗುತ್ತದೆ. ಅಧಿಸೂಚನೆಯಂತೆ, 80ರಿಂದ 100 ಅಂಕ ಗಳಿಸಿದವರಿಗೆ A ಗ್ರೇಡ್, 50ರಿಂದ 79 ಅಂಕಗಳಿಗೆ B ಗ್ರೇಡ್ ಮತ್ತು 49ರವರೆಗೆ ಅಂಕ ಪಡೆದವರಿಗೆ C ಗ್ರೇಡ್ ಸಿಗಲಿದೆ. ಹೀಗಿದ್ದರೂ ಈ ಗ್ರೇಡ್‌ಗಳು ವಿದ್ಯಾರ್ಥಿಗಳ ಪಾಸ್ ಅಥವಾ ಫೇಲ್ ಬಗ್ಗೆ ಸೂಚಿಸುವುದಿಲ್ಲ. ಈಗಾಗಲೇ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದ್ದು, ಫಲಿತಾಂಶವನ್ನು ಏಪ್ರಿಲ್ 24ರಂದು ಪ್ರಕಟಿಸುವ ಸಾಧ್ಯತೆ ಇದೆ. ಕರಡು ಅಧಿಸೂಚನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ತಮ್ಮ ಆಕ್ಷೇಪಣೆಗಳನ್ನು ಏಳು ದಿನಗಳೊಳಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ವಜಾಗೊಂಡಿದ್ದ ಪಿಐಎಲ್
ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿತ್ತು. ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್ ಸಲ್ಲಿಕೆ ಮಾಡಿರುವವರು, ಸರ್ಕಾರದ ಆದೇಶದ ವಿವರ ಒದಗಿಸದೇ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್, ಪಿಐಎಲ್ ವಜಾಗೊಳಿಸಿ ಆದೇಶಿಸಿತ್ತು.
Sharad Deshpande Column: ತೃತೀಯ ಭಾಷೆಯ ಮೇಲಿನ ಅಸಡ್ಡೆ, ಭಾಷೆ ಕಲಿಕೆಗೆ ವಿರೋಧ ಯಾಕೆ?