G Parameshwara: ನಾನು ಕೂಡ ರೇಸ್‌ನಲ್ಲಿರ್ತೀನಿ: ಸಿಎಂ ರೇಸ್‌ಗೆ ಪರಮೇಶ್ವರ್ ಎಂಟ್ರಿ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಒಳಗುದಿಗಳಿಗೆ ಸಂಬಂಧಿಸಿದಂತೆ, ಹಲವರು ಹಲವು ರೀತಿಯ ಹೇಳಿಕೆ ನೀಡಿದ್ದಾರೆ. ಒಂದೆಡೆ ಸ್ವತಃ ಹೈಕಮಾಂಡ್ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದರೆ, ಇನ್ನೊಂದೆಡೆ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರು, ನಾನು ಕೂಡ ಯಾವಾಗ್ಲು ಸಿಎಂ ರೇಸ್‌ನಲ್ಲಿರ್ತೀನಿ ಎಂದಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ -
ಬೆಂಗಳೂರು : ನಾನು ಯಾವಾಗ್ಲೂ ಮುಖ್ಯಮಂತ್ರಿ (Chief minister) ರೇಸ್‌ನಲ್ಲಿ ಇರ್ತೀನಿ. 2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದಾಗ, ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆವು. ಆದರೆ ನಾನು ಸೋತೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (Home Minister G Parameshwara) ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಒಳಗುದಿಗಳಿಗೆ ಸಂಬಂಧಿಸಿದಂತೆ, ಇಂದು ಹಲವರು ಹಲವು ರೀತಿಯ ಹೇಳಿಕೆ ನೀಡಿದ್ದು, ಅವುಗಳಲ್ಲಿ ಗೃಹ ಸಚಿವರ ಹೇಳಿಕೆಯೂ ಒಂದಾಗಿದೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಕುರ್ಚಿ ರೇಸ್ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಯ ಕುರಿತು ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿರು.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ನಾನು ಕೂಡ ಸಿಎಂ ಆಕಾಂಕ್ಷಿ. ನನಗೂ ಸಿಎಂ ಆಗುವ ಆಸೆ ಇದೆ. ಆದರೆ ಈ ಸಂದರ್ಭ ಆ ರೀತಿ ಇಲ್ಲ. ಸಿಎಂ ಬದಲಾವಣೆಯ ವಿಚಾರ ಬಂದಾಗ ಆ ಕುರಿತು ವಿಚಾರ ಮಾಡೋಣ ಎಂದು ಹೇಳಿದರು.
ಇದನ್ನೂ ಓದಿ: Mallikarjun Kharge: ನಾನೇನೂ ಹೇಳೊಲ್ಲ: ಸಿಎಂ ಗೊಂದಲ ಬಗ್ಗೆ ಮೌನ ಮುರಿದ ಮಲ್ಲಿಕಾರ್ಜುನ ಖರ್ಗೆ
ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ದಲಿತ ನಾಯಕರು ಸಿಎಂ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ? ನಾವೆಲ್ಲ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಆಯ್ತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಬಾರದೇ ಎಂದು ಅವರು ಮರುಪ್ರಶ್ನಿಸಿದರು.
ಹೈಕಮಾಂಡ್ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ (Karnataka congress) ಸಿಎಂ (Chief minister) ಸ್ಥಾನಮಾನದ ಬಗ್ಗೆ ನಡೆಯುತ್ತಿರುವ ಹೇಳಿಕೆ- ಪ್ರತಿಹೇಳಿಕೆಗಳ ಗೊಂದಲದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಕೊನೆಗೂ ಮೌನ ಮುರಿದು ಮೊಟ್ಟಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ನನ್ನ ಹತ್ತಿರ ಹೇಳೋಕೆ ಏನೂ ಇಲ್ಲ ಎಂದಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ರಾತ್ರಿ 8 ಗಂಟೆಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಹಲವು ವಿಚಾರಗಳ ಕುರಿತು ಚರ್ಚೆ ಮಾಡಿದ್ದರು. ಇಂದು ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಖರ್ಗೆ ಈ ಚುಟುಕು ಉತ್ತರ ನೀಡಿ ಕಾರು ಹತ್ತಿದ್ದಾರೆ. ಯಾವ ವಿಚಾರದಲ್ಲೂ ನನಗೆ ಹೇಳೋಕೆ ಈಗ ಏನೂ ಇಲ್ಲ. ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: ತಂದೆ ಪರ ಯತೀಂದ್ರ ಮತ್ತೆ ಬ್ಯಾಟಿಂಗ್
ಆ ಮೂಲಕ, ಚೆಂಡನ್ನು ರಾಹುಲ್ ಗಾಂಧಿ ಅವರ ಕೋರ್ಟ್‌ಗೆ ಎಸೆಯಲಾಗಿದೆ ಎಂದು ಪರೋಕ್ಷವಾಗಿ ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕವೇ ಈ ಬಣ ಕಿತ್ತಾಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.