ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Share Market: ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡುವುದು ನಿರ್ಣಾಯಕ: ಕೆ.ಜಿ. ಕೃಪಾಲ್‌

KG Krupal: ಬೆಂಗಳೂರಿನಲ್ಲಿ ಷೇರುಪೇಟೆ ವಿಚಾರ ಮಂಟಪದಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಅರ್ಥೋತ್ಸವ ಕಾರ್ಯಕ್ರಮದಲ್ಲಿ ಷೇರು ಮಾರುಕಟ್ಟೆ ತಜ್ಞ ಕೆ.ಜಿ. ಕೃಪಾಲ್‌ ಮಾತನಾಡಿದ್ದು, ಷೇರು ಮಾರುಕಟ್ಟೆಯಲ್ಲಿ ನಮ್ಮ ದುರ್ಬಲತೆಯನ್ನು ಅರಿತುಕೊಂಡರೆ ಸಬಲರಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡುವುದು ನಿರ್ಣಾಯಕ: ಕೆ.ಜಿ. ಕೃಪಾಲ್‌

ಷೇರು ಮಾರುಕಟ್ಟೆ ತಜ್ಞ ಕೆ.ಜಿ. ಕೃಪಾಲ್‌ -

Prabhakara R
Prabhakara R Nov 23, 2025 7:18 PM

ಬೆಂಗಳೂರು, ನ.23: ಷೇರು ಮಾರುಕಟ್ಟೆಯಲ್ಲಿ (Share Market) ರಿಟೇಲ್‌ ಹೂಡಿಕೆದಾರರು ಲಾಭ ಮಾಡಿಕೊಳ್ಳುವುದು ನಿರ್ಣಾಯಕವಾಗಿರುತ್ತದೆ. ದೀರ್ಘಕಾಲೀನ ಹೂಡಿಕೆಯ ಆಯ್ಕೆ ಮಾಡಿದರೂ, ಸಕಾಲದಲ್ಲಿ ಭಾಗಶಃ ಲಾಭವನ್ನಾದರೂ ಮಾಡಿಕೊಳ್ಳುವುದು ಜಾಣ್ಮೆಯ ನಡೆಯಾಗುತ್ತದೆ ಎಂದು ಷೇರು ಮಾರುಕಟ್ಟೆ ತಜ್ಞರು ಮತ್ತು ಷೇರುಪೇಟೆ ವಿಚಾರ ಮಂಟಪದ ಸ್ಥಾಪಕರಾದ ಕೆ.ಜಿ. ಕೃಪಾಲ್‌ (KG Krupal) ಅವರು ಹೇಳಿದರು.

ಬೆಂಗಳೂರಿನ ಬಿಜಿಎಸ್‌ಇ ಫೈನಾನ್ಷಿಯಲ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಷೇರುಪೇಟೆ ವಿಚಾರ ಮಂಟಪ ಆಯೋಜಿಸಿದ್ದ ನಾಲ್ಕನೇ ವರ್ಷದ ಅರ್ಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಷೇರು ಮಾರುಕಟ್ಟೆಯಲ್ಲಿ ನಮ್ಮ ದುರ್ಬಲತೆಯನ್ನು ಅರಿತುಕೊಂಡರೆ ಸಬಲರಾಗಲು ಸಾಧ್ಯವಿದೆ. ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದನ್ನು ಮೌಲ್ಯೀಕರಣಗೊಳಿಸುವ ಕೇಂದ್ರವೇ ಷೇರು ಮಾರುಕಟ್ಟೆಯಾಗಿದೆ. ಕಂಪನಿಯ ಆಂತರಿಕ ಸಾಮರ್ಥ್ಯವನ್ನು ಮಾಪನ ಮಾಡಿಕೊಂಡು, ಸ್ವತ್ತು ಅಧರಿತ ಕಂಪನಿಗಳಾದರೆ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಬಹುದು ಎಂದು ಕೆ.ಜಿ ಕೃಪಾಲ್‌ ಹೇಳಿದರು.

ಜಾಗತೀಕರಣಕ್ಕೆ ಮೊದಲು ದೀರ್ಘಾವಧಿಯ ಹೂಡಿಕೆಯು ತೆರಿಗೆ ಉಳಿತಾಯದ ದೃಷ್ಟಿಯಿಂದ ಪರಿಣಾಮಕಾರಿಯಾಗಿತ್ತು. ಆದರೆ ಈಗ ಷೇರು ವ್ಯವಹಾರ ಸುಗಮವಾಗಿದೆ. ಆದ್ದರಿಂದ ಆಗಿನ ದೀರ್ಘಾವಧಿ ಹೂಡಿಕೆ ಈಗ ಸೂಕ್ತವಲ್ಲ ಎನ್ನಬಹುದು. ಆದರೆ ಮೌಲ್ಯಯುತ ಹೂಡಿಕೆ ಉಪಯುಕ್ತ ಎಂದು ತಿಳಿಸಿದರು.

ಹೂಡಿಕೆದಾರರ ದಟ್ಟಣೆಯನ್ನು ಈಗ ಕಾಣುತ್ತಿದ್ದೇವೆ. ಆದ್ದರಿಂದ ಷೇರುಗಳ ಆಯ್ಕೆಯೂ ಕಷ್ಟವಾದೀತು. ಜತೆಗೆ ಶೀಘ್ರವಾಗಿ ಷೇರುಗಳ ವಹಿವಾಟು ಸಾಧ್ಯವಾಗಿದೆ. ವ್ಯವಸ್ಥೆಅತ್ಯಂತ ಸುಲಲಿತವಾಗಿದೆ. ತಂತ್ರಜ್ಞಾನದ ನೆರವಿನಿಂದ ಇದು ಸಾಧ್ಯವಾಗಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಾಸ ನಿರ್ಣಾಯಕವಾಗುತ್ತಿದೆ. ಭಾರತದ ಜನಸಂಖ್ಯೆ ಈಗ ಬೆಳವಣಿಗೆಗೆ ಪೂರಕವಾಗಿದೆ. ಕಾರಣ ಇಷ್ಟೇ. ಇಲ್ಲಿ ಏನು ಬೇಕಾದರೂ ಮಾರಬಹುದು, ಖರೀದಿಸಬಹುದು ಎಂಬ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆ ಹರಿದು ಬರುತ್ತಿದೆ ಎಂದರು.

ಕಂಪನಿಗಳ ಪ್ರಚಾರಾತ್ಮಕ ಶೈಲಿಯ ಸೆಳೆತಕ್ಕೆ ಸಿಲುಕಿ ರಿಟೇಲ್‌ ಹೂಡಿಕೆದಾರರು ಷೇರುಗಳನ್ನು ಖರೀದಿಸುತ್ತಾರೆ. ಆದರೆ ಕಂಪನಿಯ ಬ್ಯುಸಿನೆಸ್‌, ಸಾಧನೆ, ಅಂತರಿಕ ಸಾಮರ್ಥ್ಯಕ್ಕೆ ಒತ್ತು ಕೊಡಬೇಕು ಎಂದು ಕಿವಿಮಾತು ಹೇಳಿದರು. ಕಂಪನಿಯ ಕೇವಲ ಪ್ರಚಾರ ಮಾತ್ರವಲ್ಲದೆ, ಅಂತರಿಕ ಸಾಮರ್ಥ್ಯ ಪರಿಗಣಿಸಬೇಕು, ಲಾರ್ಜ್‌ ಕ್ಯಾಪ್‌ ಷೇರುಗಳು ಸಾಮಾನ್ಯವಾಗಿ ಹೂಡಿಕೆಗೆ ಸುರಕ್ಷಿತ. ಇತ್ತೀಚಿನ ವರ್ಷಗಳಲ್ಲಿ ಸಾಕ್ಷರತೆಗೆ ಆದ್ಯತೆ ನೀಡುತ್ತಿದ್ದೇವೆ, ಆದರೆ ಹಣಕಾಸು ಸಾಕ್ಷರತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಎಂಸಿಎಕ್ಸ್‌ನ ಹಿರಿಯ ಬಿಸಿನೆಸ್‌ ಡೆವಲಪ್‌ಮೆಂಟ್‌ ಎಕ್ಸಿಕ್ಯುಟಿವ್‌ ಆಗಿರುವ ಅಂಜನ್‌ ಕುಮಾರ್‌ ಜಿ ಅವರು ಮಾತನಾಡಿ, ಎಂಸಿಎಕ್ಸ್‌ನ ಮೂಲಕ ಚಿನ್ನ, ಬೆಳ್ಳಿ, ತಾಮ್ರ, ಅಲ್ಯುಮಿನಿಯಂ ಸೇರಿದಂತೆ ಹಲವಾರು ಕಮಾಡಿಟೀಸ್‌ಗಳಲ್ಲಿ ಹೇಗೆ ಹೂಡಿಕೆ ಮಾಡಬಹುದು ಮತ್ತು ಅವುಗಳ ಪ್ರಯೋಜನವನ್ನು ವಿವರಿಸಿದರು.

ಇದನ್ನೂ ಓದಿ : PF Rule Change: ಉದ್ಯೋಗಿಗಳಿಗೆ ಗುಡ್‌ನ್ಯೂಸ್‌! EPFO ಗರಿಷ್ಠ ವೇತನ ಮಿತಿ ₹25,000ಗೆ ಏರಿಕೆ ಸಾಧ್ಯತೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಎಸ್‌ಇ ಫೈನಾನ್ಷಿಯಲ್‌ ಲಿಮಿಟೆಡ್‌ನ ಸಿಇಒ ಸಿಎ ರಾಘವೇಂದ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನ ಮ್ಯಾನೇಜ್‌ ಮೆಂಟ್‌ ಸ್ಟಡೀಸ್‌ನ ಪ್ರೊಫೆಸರ್‌ ಡಾ. ವಿನೋದ್‌ ಕೃಷ್ಣ, ಬಿಜಿಎಸ್‌ಇ ಫೈನಾನ್ಷಿಯಲ್‌ ಲಿಮಿಟೆಡ್‌ನ ನಿರ್ದೇಶಕ ಸಿಎ ಗೌತಮ್‌ ಮಾರ್ಲೇಚ, ವಿಶ್ಲೇಷಕ ಕೌಶಲ್‌ ಜೆ ಅವರು ಭಾಗವಹಿಸಿದ್ದರು.