ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ್ ಬಳಿಯ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ ಯಂತ್ರೋಪಕರಣ ಅವಘಡದಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಬಿಹಾರ ಮೂಲದ ಅಜಿತಕುಮಾರ್ (32) ಎಂದು ಗುರುತಿಸಲಾಗಿದೆ. ಕಾರ್ಖಾನೆಯ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಪ್ಲಿಂಗ್ ಒಡೆದು ಯಂತ್ರದ ಭಾಗಗಳು ಸಿಡಿದು ಕಾರ್ಮಿಕರಿಗೆ ಬಡಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Kalaburagi Breaking: ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು
ಗಂಭೀರವಾಗಿ ಗಾಯಗೊಂಡಿದ್ದ ಅಜಿತಕುಮಾರ್ ಅವರನ್ನು ತಕ್ಷಣ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸೇಡಂ ಮೂಲದ ಎಂಜಿನಿಯರ್ ಮಹೀಪಾಲರೆಡ್ಡಿ ಹಾಗೂ ಬಿಹಾರ ಮೂಲದ ಕಾರ್ಮಿಕ ಮನುಕುಮಾರ್ ರಾಮಗಣೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದು ಮಿರಿಯಾಣ ಠಾಣೆಯ ಸಿಪಿಐ ಕಪಿಲದೇವ ಗಡಾದ್ ಹಾಗೂ ಪಿಎಸ್‌ಐ ಶಿವಶಂಕರ ಸುಬೇದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.