Kalaburagi Breaking: ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು
ಸರಾಫ್ ಬಜಾರ್‌ನ ಪಡಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಬಂಗಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಮತಾಜಲ್‌ನ ಚಟುವಟಿಕೆಗಳ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಅ.17ರಂದು ನೋಟಿಸ್ ನೀಡಲಾಗಿದ್ದು, ಮರುದಿನ ಮಮತಾಜಲ್ ಹಾಗೂ ಆತನೊಂದಿಗೆ ಕೆಲಸ ಮಾಡುತ್ತಿದ್ದ ಮೆಹ್ರಾಜಿ ಮಲ್ಲಿಕ್ ಠಾಣೆಗೆ ಹಾಜರಾಗಿದ್ದರು.
-
ಕಲಬುರಗಿ: ‘I love Pakistan, I love Kashmir’ ಎಂಬ ಬರಹವಿರುವ ಸಾಮಾಜಿಕ ಜಾಲತಾಣ (Social Media) ಖಾತೆಗಳ ಸಂಪರ್ಕ, ಲಷ್ಕರ್-ಎ-ತಯ್ಯಬಾ(LeT) ಕಮಾಂಡರ್ ಎಂದು ಉಲ್ಲೇಖಿಸಿರುವ ಖಾತೆಗಳಿಗೆ ಫಾಲೋ, ಲೈಕ್ ಹಾಗೂ ಫಾಲೋ ಮಾಡಿರುವ ಆರೋಪ, ಪಾಕಿಸ್ತಾನದ +92 ಕೋಡ್‌ನ ಸಂಖ್ಯೆ ಗಳಿರುವ ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯತ್ವ… ಪಶ್ಚಿಮ ಬಂಗಾಳ ಮೂಲದ *ಮಮತಾಜಲ್ ಮಲ್ಲಿಕ್ (18)ನ ಮೊಬೈಲ್ ಪರಿಶೀಲನೆ ಬಳಿಕ ಪೊಲೀಸರ ಮುಂದೆ ಹಲವು ಪ್ರಶ್ನೆಗಳು ಮೂಡಿವೆ.
ಈ ಚಟುವಟಿಕೆಗಳ ಆಧಾರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತಪಡಿಸಿ ಮಮತಾಜಲ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆ(Brahmapura Police Station)ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಆತನ ಸಂಪರ್ಕದ ವ್ಯಾಪ್ತಿ ಎಲ್ಲಿಯವರೆಗೆ ಇದೆ ಎಂಬುದರತ್ತ ತನಿಖೆ ಕೇಂದ್ರೀಕೃತ ವಾಗಿದೆ.
ಸರಾಫ್ ಬಜಾರ್‌ನ ಪಡಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಬಂಗಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಮತಾಜಲ್‌ನ ಚಟುವಟಿಕೆಗಳ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಅ.17ರಂದು ನೋಟಿಸ್ ನೀಡಲಾಗಿದ್ದು, ಮರುದಿನ ಮಮತಾಜಲ್ ಹಾಗೂ ಆತನೊಂದಿಗೆ ಕೆಲಸ ಮಾಡುತ್ತಿದ್ದ ಮೆಹ್ರಾಜಿ ಮಲ್ಲಿಕ್ ಠಾಣೆಗೆ ಹಾಜರಾಗಿದ್ದರು.
ವಿಚಾರಣೆ ವೇಳೆ ಮಮತಾಜಲ್‌ನ ಮೊಬೈಲ್ ಪರಿಶೀಲಿಸಿದಾಗ ‘ansari_ikhwan’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಬಳಕೆಯಲ್ಲಿರುವುದು ಕಂಡುಬಂದಿದೆ ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ. ‘kashmiritiger.313’ ಖಾತೆಯಲ್ಲಿ ‘I love Pakistan I love Kashmir’ ಎಂಬ ಬರಹ ವಿದ್ದು, ‘major_iqbal._ini’ ಖಾತೆಯಲ್ಲಿ ಲಷ್ಕರ್-ಎ-ತಯ್ಯಬಾ ಕಮಾಂಡರ್ ಎಂಬ ಉಲ್ಲೇಖವಿದೆ ಎಂದು ಪೊಲೀಸರು ದಾಖಲಿಸಿದ್ದಾರೆ. ಈ ಖಾತೆಗಳ ಪೋಸ್ಟ್‌ಗಳಿಗೆ ಮಮತಾಜಲ್ ಲೈಕ್ ಹಾಗೂ ಪಾರೋ ಮಾಡಿರುವುದು ಕಂಡುಬಂದಿದೆ ಎಂಬುದು ಪೊಲೀಸರ ಆರೋಪ.
ಇನ್‌ಸ್ಟಾಗ್ರಾಂ ಬಳಿಕ ವಾಟ್ಸ್‌ಆ್ಯಪ್ ಜಾಡು
ಸಾಮಾಜಿಕ ಜಾಲತಾಣಗಳ ಪರಿಶೀಲನೆ ಅಲ್ಲಿಗೆ ನಿಲ್ಲಲಿಲ್ಲ. ಮಮತಾಜಲ್ ಬಳಸುತ್ತಿದ್ದ ವಾಟ್ಸ್‌ಆ್ಯಪ್(Whatsapp)ನಲ್ಲೂ ಕೆಲವು ಗ್ರೂಪ್‌ಗಳ ಸದಸ್ಯತ್ವ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಇಮಾಮು ಮೊಹಿದಿ’ ಸೇರಿದಂತೆ ಉರ್ದು ಭಾಷೆಯ ಗ್ರೂಪ್‌ಗಳಲ್ಲಿ ಆತ ಸದಸ್ಯನಾಗಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪೈಕಿ ಒಂದು ಗ್ರೂಪ್‌ನಲ್ಲಿ +92 ಕೋಡ್‌ನ ಹಲವು ಮೊಬೈಲ್ ಸಂಖ್ಯೆಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. +92 ಪಾಕಿಸ್ತಾನದ ಅಂತರರಾಷ್ಟ್ರೀಯ ದೂರವಾಣಿ ಕೋಡ್. ಈ ಸಂಖ್ಯೆ ಗಳ ಹಿಂದಿರುವ ವ್ಯಕ್ತಿಗಳು ಯಾರು? ಮಮತಾಜಲ್ ಅವರೊಂದಿಗೆ ಯಾವ ರೀತಿಯ ಸಂಪರ್ಕ ಹೊಂದಿದ್ದ? ಗ್ರೂಪ್‌ನಲ್ಲಿ ಯಾವ ರೀತಿಯ ಸಂವಹನ ನಡೆದಿತ್ತು? ಎಂಬ ಪ್ರಶ್ನೆಗಳು ತನಿಖೆಯ ವ್ಯಾಪ್ತಿಗೆ ಬಂದಿವೆ.
‘Zainul Abidin’ ಸಂಪರ್ಕದ ತನಿಖೆ
ವಿಚಾರಣೆ ವೇಳೆ ‘Zainul Abidin’ ಎಂಬ ವ್ಯಕ್ತಿ ತನ್ನನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾನೆ ಎಂದು ಮಮತಾಜಲ್ ತಿಳಿಸಿದ್ದಾಗಿ ಪೊಲೀಸರು ದಾಖಲಿಸಿದ್ದಾರೆ. ಈ ವ್ಯಕ್ತಿಯ ನಿಜವಾದ ಗುರುತು, ಸ್ಥಳ, ಮಮತಾಜಲ್‌ನೊಂದಿಗೆ ಸಂಪರ್ಕ ಮತ್ತು ಗ್ರೂಪ್‌ಗೆ ಸೇರ್ಪಡೆಗೊಂಡ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ಪೊಲೀಸರು ಪರಿಶೀಲಿಸಬೇಕಿದೆ.
ಮಮತಾಜಲ್ ನೀಡಿರುವ ಹೇಳಿಕೆಯಲ್ಲಿ ಈ ವ್ಯಕ್ತಿಯನ್ನು ಲಷ್ಕರ್-ಎ-ತಯ್ಯಬಾ ಸಂಘಟನೆಯ ಕಮಾಂಡರ್ ಎಂದು ಉಲ್ಲೇಖಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಆದರೆ ಈ ಹೇಳಿಕೆಯ ಸತ್ಯಾಸತ್ಯತೆ ಹಾಗೂ ಉಲ್ಲೇಖಿತ ವ್ಯಕ್ತಿಯ ನೈಜ ಹಿನ್ನೆಲೆ ತನಿಖೆಯಿಂದ ದೃಢಪಡ ಬೇಕಿದೆ.
ಲಿಂಕ್ ಎಷ್ಟು ಆಳ?
ಸಾಮಾಜಿಕ ಜಾಲತಾಣದ ಖಾತೆಗಳಿಂದ ಆರಂಭವಾಗಿ ವಾಟ್ಸ್‌ಆ್ಯಪ್ ಗ್ರೂಪ್, ವಿದೇಶಿ ಕೋಡ್‌ನ ಮೊಬೈಲ್ ಸಂಖ್ಯೆಗಳು ಹಾಗೂ ‘Zainul Abidin’ ಎಂಬ ವ್ಯಕ್ತಿಯವರೆಗೆ ತಲುಪಿರುವ ಮಾಹಿತಿಯ ಹಿನ್ನೆಲೆಯಲ್ಲಿ ಮಮತಾಜಲ್‌ನ ಸಂಪರ್ಕ ಜಾಲದ ಕುರಿತು ಪೊಲೀಸರು ತನಿಖೆ ನಡೆಸಬೇಕಿದೆ.
ಆತನ ಮೊಬೈಲ್‌ನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು ಅದರಲ್ಲಿರುವ ದೃಶ್ಯಗಳ ಛಾಯಾ ಚಿತ್ರಗಳನ್ನು ತೆಗೆದು ದಾಖಲಾತಿಗಳಾಗಿ ದೂರಿಗೆ ಲಗತ್ತಿಸಿದ್ದಾರೆ. ಮೊಬೈಲ್ ಡೇಟಾ, ಸಾಮಾಜಿಕ ಜಾಲತಾಣ ಚಟುವಟಿಕೆ, ಗ್ರೂಪ್ ಸದಸ್ಯರು ಮತ್ತು ಸಂವಹನದ ಸ್ವರೂಪದ ಪರಿಶೀಲನೆಯಿಂದಲೇ ಆರೋಪಗಳ ವ್ಯಾಪ್ತಿ ಸ್ಪಷ್ಟವಾಗಬೇಕಿದೆ. ಬ್ರಹ್ಮಪುರ ಠಾಣೆಯಲ್ಲಿ ಗುನ್ನೆ ನಂ.101/2026, ಬಿಎನ್‌ಎಸ್ ಕಲಂ 113(3), 197(1) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸರಾಫ್ ಬಜಾರ್‌ನಿಂದ ತನಿಖೆಯ ಕೇಂದ್ರಬಿಂದು
ಮಮತಾಜಲ್ ಮಲ್ಲಿಕ್ ಕಲಬುರಗಿಯ ಸರಾಫ್ ಬಜಾರ್‌ನ ಪಡಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಬಂಗಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಚಟುವಟಿಕೆಗಳ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ವಿಚಾರಣೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ನೋಟಿಸ್ ನೀಡಿ ಕಳುಹಿಸಿದ್ದರು. ಮರುದಿನ ಠಾಣೆಗೆ ಹಾಜರಾದ ಬಳಿಕ ಮೊಬೈಲ್ ಪರಿಶೀಲನೆ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಎರಡು ಮೊಬೈಲ್ ಸಂಖ್ಯೆಗಳ ಬಳಕೆ
ವಿಚಾರಣೆ ವೇಳೆ ಮಮತಾಜಲ್ 9339918277 ಹಾಗೂ 8348459770 ಸಂಖ್ಯೆಗಳು ತನ್ನ ಬಳಕೆ ಯಲ್ಲಿವೆ ಎಂದು ತಿಳಿಸಿದ್ದಾನೆ. ಎರಡೂ ಸಂಖ್ಯೆಗಳು ತಂದೆಯ ಹೆಸರಿನಲ್ಲಿ ಇರುವುದಾಗಿ ಆತ ಹೇಳಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಮೊಬೈಲ್‌ನ ಐಎಂಇಐ ವಿವರಗಳನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪಾಕ್ ನಂಬರ್‌ಗಳ ಜಾಲವೇ?
ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ +92 ಕೋಡ್‌ನ ಹಲವು ಸಂಖ್ಯೆಗಳು ಕಂಡುಬಂದಿರುವುದು ತನಿಖೆಯ ಪ್ರಮುಖ ಅಂಶವಾಗಿದೆ. ಈ ಸಂಖ್ಯೆಗಳು ಯಾರಿಗೆ ಸೇರಿವೆ, ಅವುಗಳೊಂದಿಗೆ ಮಮತಾಜಲ್‌ನ ನೇರ ಸಂಪರ್ಕವಿತ್ತೇ, ಸಂವಹನ ನಡೆದಿದ್ದರೆ ಅದರ ಸ್ವರೂಪವೇನು ಎಂಬುದನ್ನು ಪೊಲೀಸರು ಪರಿಶೀಲಿಸಬೇಕಿದೆ.
‘Zainul Abidin’ ಹಿಂದೆ ಯಾರಿದ್ದಾರೆ?
ಮಮತಾಜಲ್‌ನ ಹೇಳಿಕೆಯಂತೆ ‘Zainul Abidin’ ಎಂಬ ವ್ಯಕ್ತಿ ಆತನನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾನೆ. ಈ ವ್ಯಕ್ತಿಯ ಗುರುತು ಮತ್ತು ಹಿನ್ನೆಲೆ ಇನ್ನೂ ತನಿಖೆಯ ವಿಷಯವಾಗಿದೆ. ಆತ ನಿಜವಾಗಿಯೂ ಯಾರು, ಮಮತಾಜಲ್‌ನೊಂದಿಗೆ ಹೇಗೆ ಸಂಪರ್ಕ ಹೊಂದಿದ್ದ ಎಂಬುದು ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿದೆ.
ಮೆಹ್ರಾಜಿ ವಿಚಾರಣೆ ಬಳಿಕ ಹೊರಗೆ
ಮಮತಾಜಲ್ ಜತೆ ಕೆಲಸ ಮಾಡುತ್ತಿದ್ದ ಮೆಹ್ರಾಜಿ ಮಲ್ಲಿಕ್‌ನನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ಆತನ ಮೊಬೈಲ್ ಪರಿಶೀಲಿಸಿದ ಬಳಿಕ ದೇಶವಿರೋಧಿ ಚಟುವಟಿಕೆಗೆ ಸಂಬಂಧಿಸಿದ ಅಂಶ ಕಂಡುಬಂದಿಲ್ಲ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ವಿಚಾರಣೆ ಬಳಿಕ ಆತನನ್ನು ಕಳುಹಿಸಲಾಗಿದೆ.
ಮೇಲಿನ ಆರೋಪಗಳು ಪೊಲೀಸ್ ಎಫ್‌ಐಆರ್‌ನಲ್ಲಿ ದಾಖಲಿಸಿರುವ ಅಂಶಗಳನ್ನು ಆಧರಿಸಿವೆ. ಮಮತಾಜಲ್ ಮಲ್ಲಿಕ್ ವಿರುದ್ಧದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗುವವರೆಗೆ ಆತನನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ.