ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Separate Kalyana Karnataka state: ರಾಜ್ಯೋತ್ಸವದಂದೇ ಪ್ರತ್ಯೇಕ 'ಕಲ್ಯಾಣ ಕರ್ನಾಟಕ' ಧ್ವಜಾರೋಹಣಕ್ಕೆ ಯತ್ನ: ಹಲವರ ಬಂಧನ

Kalaburagi News: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಮೀಸಲಾತಿ ನೀಡುವ 371(ಜೆ) ಕಲಂ ಅನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದಿರುವುದು, ನೇಮಕಾತಿ ಮತ್ತು ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಸ್ಥಳೀಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ಈ ಭಾಗಕ್ಕೆ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಪ್ರತ್ಯೇಕ 'ಕಲ್ಯಾಣ ಕರ್ನಾಟಕ' ಧ್ವಜಾರೋಹಣಕ್ಕೆ ಯತ್ನ: ಹಲವರ ಬಂಧನ

-

Prabhakara R Prabhakara R Nov 1, 2025 8:01 PM

ಕಲಬುರಗಿ, ನ.1: ಕನ್ನಡ ರಾಜ್ಯೋತ್ಸವ ದಿನವಾದ ಶನಿವಾರ, ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ (Separate Kalyana Karnataka state) ಮಾಡಲು ಆಗಮಿಸುತ್ತಿದ್ದರು. ಪೊಲೀಸರು ಅವರನ್ನು ಜಗತ್ ವೃತ್ತದ ಸಮೀಪ ತಡೆದು ಬಂಧಿಸಿದರು.

ಬಂಧನಕ್ಕೂ ಮುನ್ನ ಮಾತನಾಡಿದ ನರಿಬೋಳ, 371(ಜೆ) ಕಲಂ ಅನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದಿರುವುದು, ನೇಮಕಾತಿ ಮತ್ತು ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಸ್ಥಳೀಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ಈ ಭಾಗಕ್ಕೆ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿ. ರಾಜ್ಯದಲ್ಲಿ ಯಾವ ಸರ್ಕಾರ ಬಂದರೂ ಈ ಭಾಗಕ್ಕೆ ಅನ್ಯಾಯ ಕಟ್ಟಿಟ್ಟ ಬುತ್ತಿ. ರಾಯಚೂರಿನ ಐಐಐಟಿ ಧಾರವಾಡಕ್ಕೆ ಸ್ಥಳಾಂತರ ಮಾಡಿರುವುದು ಇದಕ್ಕೆ ನಿದರ್ಶನ ಎಂದರು.

ಕಲ್ಯಾಣ ಕರ್ನಾಟಕವನ್ನು ಕೇವಲ ಅಧಿಕಾರದ ಮತಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದ ಅವರು, ನಮ್ಮ ಭಾಗದ ಏಳಿಗೆಗಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟ ಹಳ್ಳಿ ಹಳ್ಳಿಗಳಲ್ಲಿ ಶುರುವಾಗಲಿದೆ ಎಂದು ಎಚ್ಚರಿಸಿದರು.

_Separate Kalyana Karnataka state

ರಾಜ್ಯದಲ್ಲಿ ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ಎಸ್.ಎಸ್.ಎಲ್.ಸಿ ಯಲ್ಲಿ ಮೇಲಿಂದ ಕೊನೆಯ ಸ್ಥಾನಕ್ಕಿಳಿದಿದೆ. ಅಷ್ಟೇ ಏಕೆ, ಕಾನೂನು ಹದಗೆಟ್ಟಿದೆ. ಇಲ್ಲಿ ದೀನ, ದಲಿತರ, ಬಡವರ ಮೇಲೆ ಹಲ್ಲೆಗಳಾಗುತ್ತಿದ್ದರೂ ಸಹ ಕ್ರಮ ಕೈಗೊಳ್ಳುವಲ್ಲಿ ವಿಫಲತೆಗಳು ಎದುರಾಗಿವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ದಿವಂಗತ ಮಾಜಿ ಸಚಿವ ವೈಜನಾಥ ಪಾಟೀಲ್‌ ಅವರು 371ಜೆ ವಿಧಿ ರೂವಾರಿಯಾಗಿದ್ದು, ಅವರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಕನಸು ನನಸು ಮಾಡುವುದೇ ನಮ್ಮ ಧ್ಯೇಯವಾಗಿದೆ. ಹಾಗೆಯೇ ಉತ್ತರ ಕರ್ನಾಟಕದ ಕನಸುಗಾರ ಮುಂಬೈ ಕರ್ನಾಟಕದ ಉಮೇಶ್‌ ಕತ್ತಿ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯದ ಕನಸನ್ನು ನನಸು ಮಾಡಿದ ಮಾಜಿ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅವರ ಹೋರಾಟವೇ ನಮಗೆ ಸ್ಫೂರ್ತಿ ಎಂದು ಹೋರಾಟಗಾರರು ತಿಳಿಸಿದರು. ಪ್ರತ್ಯೇಕ ಕಲ್ಯಾಣ ಕರ್ನಾಟಕ ಧ್ವಜಾರೋಹಣಕ್ಕೆ ಮುಂದಾದ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rajyotsava 2025: ಮಾತೃಭಾಷೆಯಲ್ಲಿ ಶಿಕ್ಷಣ ಬೇಕಿದೆ, ಮದರಸಾಗಳಲ್ಲಿ ಕನ್ನಡ ಕಲಿಸಲು ಆದ್ಯತೆ: ಸಿಎಂ ಘೋಷಣೆ

ಈ ವೇಳೆ ಸಂಘಟನೆ ಉಪಾಧ್ಯಕ್ಷ ವಿನೋದ ಕೂಮಾರ ಜನೆವರಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ನಾಯಕ, ಮಾಲಾ ಕಣ್ಣಿ, ಶರಣಗೌಡ ಪಾಟೀಲ, ಶಮೀನಾ ಬೆಗಂ, ವಿಶ್ವಾರಾಧ್ಯ ಬಡಿಗೇರ ಸೇರಿ ಅನೇಕರು ಇದ್ದರು.