ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ: ಡಾ.ಅನಂದಿಬಾಯಿ ಜೋಶಿ

ಸಮರ್ಪಕ ಚಿಕಿತ್ಸೆಯಿಲ್ಲದೆ ಆ ಮಗು ಆನಂದಿಯವರ ಮಡಿಲಲ್ಲೇ ಪ್ರಾಣಬಿಟ್ಟಿತು. ಇದರ ಹಿಂದಿದ್ದ ಕಾರಣ ಗೊತ್ತೇ? ಅಂದು ಪುರುಷ ವೈದ್ಯರು ಮಹಿಳೆಯರನ್ನು ತಪಾಸಣೆ ಮಾಡು ವುದು ನಿಷಿದ್ಧವಾಗಿತ್ತು ಮತ್ತು ಭಾರತದಲ್ಲಿ ಮಹಿಳಾ ವೈದ್ಯರೇ ಇರಲಿಲ್ಲ. ಈ ನೋವು ಆನಂದಿ ಯವರನ್ನು ಬದಲಿಸಿತು. ಇನ್ನೊಬ್ಬ ತಾಯಿ ಇಂಥ ನೋವನ್ನು ಅನುಭವಿಸ ಬಾರದು ಎಂಬ ಛಲದೊಂದಿಗೆ ಅವರು ವೈದ್ಯೆಯಾಗಲು ನಿರ್ಧರಿಸಿದರು

ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ

-

ಒಂದೊಳ್ಳೆ ಮಾತು

ಒಂಬತ್ತನೇ ವಯಸ್ಸಿನಲ್ಲಿ ಮದುವೆ, ಇಪ್ಪತ್ತೊಂದನೇ ವಯಸ್ಸಿನಲ್ಲಿ ಸಾವು. ಆದರೆ ಈ ಅಲ್ಪಾವಧಿಯ ಇಡೀ ಜಗತ್ತು ಅಸಾಧ್ಯವೆಂದು ಹೇಳಿದ್ದನ್ನು ಮಾಡಿ ತೋರಿಸಿದವರು ಆನಂದಿಬಾಯಿ ಜೋಶಿ. ಭಾರತದ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಯುವ ಹಕ್ಕಿಲ್ಲದ ಕಾಲ ದಲ್ಲಿ, ಅವರು ಸಮುದ್ರ ದಾಟಿ ಹೋಗಿ ವೈದ್ಯಕೀಯ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು.

1865ರಲ್ಲಿ ಜನಿಸಿದ ಆನಂದಿಯವರಿಗೆ ಒಂಬತ್ತನೇ ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವರಾದ ಗೋಪಾಲರಾವ್ ಜೋಶಿಯವರೊಂದಿಗೆ ವಿವಾಹವಾಯಿತು. ಅಂದಿನ ಕಾಲದ ಕಟ್ಟುಪಾಡುಗಳ ನಡುವೆಯೂ ಗೋಪಾಲರಾವ್ ಪ್ರಗತಿಪರರಾಗಿದ್ದರು. ಅವರು ತಮ್ಮ ಪತ್ನಿಗೆ ಶಿಕ್ಷಣ ನೀಡಲು ನಿರ್ಧರಿಸಿದರು.

ಸಮಾಜದ ಹಂಗನ್ನು ತೊರೆದು ಆನಂದಿಯವರಿಗೆ ಇಂಗ್ಲಿಷ್, ಸಂಸ್ಕೃತ ಮತ್ತು ಗಣಿತವನ್ನು ಕಲಿಸಿದರು. 1874ರಲ್ಲಿ 14ರ ಹರೆಯದ ಆನಂದಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ದರು. ಆದರೆ ಈ ಖುಷಿ ಹೆಚ್ಚು ದಿನಗಳವರೆಗೆ ಉಳಿಯಲಿಲ್ಲ; ಏಕೆಂದರೆ ಅವರ ಬದುಕನ್ನೇ ಬದಲಾಯಿಸುವ ದುರಂತವೊಂದು ಕೇವಲ ಹತ್ತು ದಿನಗಳಲ್ಲಿ ನಡೆಯಿತು.

ಇದನ್ನೂ ಓದಿ: Roopa Gururaj Column: ಹತ್ತು ಹೆಜ್ಜೆಗಳ ಬೆಲೆ ಅರಿತ ಪುಟ್ಟ ಹುಡುಗನ ಸಾಧನೆ

ಸಮರ್ಪಕ ಚಿಕಿತ್ಸೆಯಿಲ್ಲದೆ ಆ ಮಗು ಆನಂದಿಯವರ ಮಡಿಲಲ್ಲೇ ಪ್ರಾಣಬಿಟ್ಟಿತು. ಇದರ ಹಿಂದಿದ್ದ ಕಾರಣ ಗೊತ್ತೇ? ಅಂದು ಪುರುಷ ವೈದ್ಯರು ಮಹಿಳೆಯರನ್ನು ತಪಾಸಣೆ ಮಾಡು ವುದು ನಿಷಿದ್ಧವಾಗಿತ್ತು ಮತ್ತು ಭಾರತದಲ್ಲಿ ಮಹಿಳಾ ವೈದ್ಯರೇ ಇರಲಿಲ್ಲ. ಈ ನೋವು ಆನಂದಿಯವರನ್ನು ಬದಲಿಸಿತು. ಇನ್ನೊಬ್ಬ ತಾಯಿ ಇಂಥ ನೋವನ್ನು ಅನುಭವಿಸ ಬಾರದು ಎಂಬ ಛಲದೊಂದಿಗೆ ಅವರು ವೈದ್ಯೆಯಾಗಲು ನಿರ್ಧರಿಸಿದರು. ಇದಕ್ಕೆ ಅವರ ಪತಿಯ ಸಹಕಾರವಂತೂ ಇದ್ದೇ ಇತ್ತು.

ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದೇ ಪಾಪವೆಂದು ನಂಬಿದ್ದ ಕಾಲದಲ್ಲಿ, ಆನಂದಿ ಅಮೆರಿಕಕ್ಕೆ ಹೋಗಲು ನಿರ್ಧರಿಸಿದ್ದು ದೊಡ್ಡ ಕ್ರಾಂತಿಯಾಗಿತ್ತು. ಸಮಾಜ ಅವರನ್ನು ಹೀಯಾಳಿಸಿತು, ಧರ್ಮಭ್ರಷ್ಟರೆಂದು ಕರೆಯಿತು. ಆದರೆ ಯಾವುದಕ್ಕೂ ಅಂಜದ ಆನಂದಿ, 1883ರಲ್ಲಿ ಒಂಟಿಯಾಗಿ ಸಮುದ್ರಯಾನ ಕೈಗೊಂಡು ಪೆನ್ಸಿಲ್ವೇನಿಯಾ ತಲುಪಿದರು.

ಅಲ್ಲಿನ ಚಳಿಗಾಲ ಮತ್ತು ಆಹಾರ ಪದ್ಧತಿ ಅವರ ದೇಹಕ್ಕೆ ಒಗ್ಗಲಿಲ್ಲ. ಕ್ಷಯರೋಗ (ಟಿಬಿ) ಅವರನ್ನು ಕಾಡಲಾರಂಭಿಸಿತು. ತೀವ್ರ ಅನಾರೋಗ್ಯದ ನಡುವೆಯೂ ಅವರು ಹಗಲಿರುಳೂ ಕಷ್ಟಪಟ್ಟು ಓದಿದರು. ತಮ್ಮ ಸಂಸ್ಕೃತಿಯನ್ನು ಮರೆಯದೆ, ಪಾಶ್ಚಾತ್ಯ ವೈದ್ಯಕೀಯ ಜ್ಞಾನ ವನ್ನು ಮೈಗೂಡಿಸಿಕೊಂಡರು.

1886ರ ಮಾಚ್ 11ರಂದು ಆನಂದಿ ವೈದ್ಯಕೀಯ ಪದವಿ ಪಡೆದಾಗ, ಅದು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಸ್ವತಃ ವಿಕ್ಟೋರಿಯಾ ರಾಣಿಯೇ ಅವರಿಗೆ ಅಭಿನಂದನಾ ಸಂದೇಶ ಕಳುಹಿಸಿದ್ದರು. ಭಾರತಕ್ಕೆ ಮರಳಿದ ಆನಂದಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಆದರೆ ವಿಧಿ ಅತಿ ಕ್ರೂರವಾಗಿತ್ತು. ದೈಹಿಕ ಬಳಲಿಕೆ ಮತ್ತು ಕ್ಷಯರೋಗದಿಂದಾಗಿ ಅವರ ಆರೋಗ್ಯ ಕ್ಷೀಣಿಸಿತು.

ಕೊಲ್ಲಾಪುರದ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ನೇಮಕಗೊಂಡರೂ, ಅವರು ಹೆಚ್ಚು ದಿನ ಸೇವೆ ಸಲ್ಲಿಸಲು ಸಾಧ್ಯವಾಗಲಿಲ್ಲ. 1887ರ ಫೆಬ್ರವರಿ 26ರಂದು ಕೇವಲ 21ನೇ ವಯಸ್ಸಿನಲ್ಲಿ ಆನಂದಿಬಾಯಿ ನಿಧನರಾದರು. ಅವರು ಹೆಚ್ಚು ವರ್ಷ ಬದುಕಿರಲಿಲ್ಲ ಅಥವಾ ಸಾವಿರಾರು ರೋಗಿಗಳನ್ನು ಗುಣಪಡಿಸಿರಲಿಲ್ಲ. ಆದರೆ, ಅಸಾಧ್ಯ ಎನಿಸಿದ್ದನ್ನೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು.

ಇಂದು ಭಾರತದಲ್ಲಿ ಶೇ.30ಕ್ಕಿಂತ ಹೆಚ್ಚು ಮಹಿಳಾ ವೈದ್ಯರಿದ್ದಾರೆ ಎಂದರೆ, ಅದಕ್ಕೆ ಅಂದು ಆನಂದಿಬಾಯಿ ಹಚ್ಚಿದ ಆ ಜ್ಯೋತಿಯೇ ಕಾರಣ. ಆನಂದಿಬಾಯಿ ಜೋಶಿ ಕೇವಲ 21 ವರ್ಷಗಳಲ್ಲಿ ಒಂದು ಯುಗದ ಸಾಧನೆ ಮಾಡಿದರು. ಅವರು ಕೇವಲ ವೈದ್ಯೆಯಾಗಿ ಗುರುತಿಸಿಕೊಂಡದ್ದಲ್ಲ, ಲಕ್ಷಾಂತರ ಭಾರತೀಯ ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿದ ಕ್ರಾಂತಿಯ ಕಿಡಿಯಾದರು.

ಕತ್ತಲೆಯನ್ನು ಶಪಿಸುವ ಬದಲು, ತಾವೇ ದೀಪವಾದ ಆನಂದಿಯವರ ಕಥೆ ಎಂದೆಂದಿಗೂ ಅಮರ. ಕೆಲವೊಮ್ಮೆ ಜೀವನದಲ್ಲಿ ನಾವು ಎದುರಿಸುವ ಕಷ್ಟಗಳು ನಮ್ಮನ್ನು ಸಾಧನೆ ಯೆಡೆಗೆ ಮುಖ ಮಾಡಿ ನಿಲ್ಲುವಂತೆ ಮಾಡುತ್ತವೆ. ಅಂಥ ದೊಡ್ಡ ಪೆಟ್ಟು ಬೀಳದಿದ್ದರೆ, ಬದುಕಿನಲ್ಲಿ ವಿಶಿಷ್ಟವಾದ ಏನನ್ನಾದರೂ ಸಾಧಿಸುವ ಯೋಚನೆಯನ್ನು ನಾವು ಮಾಡು ವುದೇ ಇಲ್ಲ.

ಆದ್ದರಿಂದಲೇ ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಸಣ್ಣಪುಟ್ಟ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಎಂದರೆ ಅದಕ್ಕೆ ಎದೆಗುಂದದೆ ಅವರ ಬೆನ್ನೆಲುಬಾಗಿ ನಿಲ್ಲಬೇಕು. ಇಂಥ ಗಳಿಗೆಗಳು ಅವರನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ತಮ್ಮ ಬದುಕಿನ ಬಗ್ಗೆ, ಬದುಕಿನ ಗುರಿಯ ಬಗ್ಗೆ ಅವರಿಗೆ ಸ್ಪಷ್ಟತೆ ಮೂಡಿ ಹೆಚ್ಚಿನದನ್ನು ಸಾಧಿಸಲು ಅವರಿಗೆ ಅದು ಪ್ರೇರಣೆ ಯಾಗುತ್ತದೆ...