NEET Exam: ಸಿಇಟಿ ಬಳಿಕ ನೀಟ್ ಪರೀಕ್ಷೆ ವೇಳೆಯೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು; ಕಲಬುರಗಿಯಲ್ಲಿ ಎಡವಟ್ಟು
Sacred Thread: ಭಾನುವಾರ (ಮೇ 4) ನಡೆದ ನೀಟ್ ಪರೀಕ್ಷೆಯ ವೇಳೆ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಘಟನೆ ನಡೆದಿದೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ.

ಕಲಬುರಗಿ: ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ (Sacred Thread) ತೆಗೆಸಿದ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ದೇಶೀಯ ಮಟ್ಟದಲ್ಲಿ ಈ ಸುದ್ದಿ ಸದ್ದು ಮಾಡಿತ್ತು. ಈ ಬಗ್ಗೆ ಚರ್ಚೆ ನಡೆಯುತ್ತಿವ ಮಧ್ಯೆಯೇ ರಾಜ್ಯದಲ್ಲಿ ಮತ್ತೊಂದು ಎಡವಟ್ಟು ಸಂಭವಿಸಿದೆ. ಭಾನುವಾರ (ಮೇ 4) ನಡೆದ ನೀಟ್ ಪರೀಕ್ಷೆಯಲ್ಲೂ (NEET Exam) ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಾರೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಚಾರ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಶ್ರೀಪಾದ್ ಪಾಟೀಲ್ ಅವರಿಗೆ ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಶ್ರೀಪಾದ್ ಪಾಟೀಲ್ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ. ಈ ಸುದ್ದಿ ಕೂಡಲೇ ಎಲ್ಲಡೆ ಹರಡಿದ್ದು, ಪರೀಕ್ಷಾ ಕೇಂದ್ರದ ಮುಂದೆ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು. ಜನಿವಾರ ತೆಗೆಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿತು.
ಇತ್ತೀಚೆಗೆ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಪರೀಕ್ಷೆಯ ವೇಳೆ ಜನಿವಾರ, ಕಾಲುಂಗುರ ಮತ್ತು ಮಾಂಗಲ್ಯ ಸರವನ್ನು ತೆಗೆಸುವಂತಿಲ್ಲ ಎಂದು ಸೂಚನೆ ನೀಡಿದ್ದರು. ಹಾಗಿದ್ದರೂ ಅಧಿಕಾರಿಗಳು ಜನಿವಾರ ತೆಗೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಸಾಕಷ್ಟು ರಾದ್ದಾಂತ ನಡೆದರೂ ಈಗ ಮತ್ತೆ ಅದನ್ನು ಪುನರಾವರ್ತನೆಗೊಳಿಸಿರುವುದು ಉದ್ದೇಶ ಪೂರ್ವಕ ನಡೆಯೇ ಎನ್ನುವ ಅನುಮಾನ ಮೂಡಿಸಿದೆ. ಬ್ರಾಹ್ಮಣ ಸಮುದಾಯದವರ ತಾಳ್ಮೆ ಪರೀಕ್ಷಿಸಬೇಡಿ. ಜನಿವಾರ ತೆಗೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಯನ್ನೂ ಓದಿ: Janivara row: ಜನಿವಾರ ಕಳಚಿದ ಪ್ರಕರಣ; ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ ಎಂದ ಡಿಕೆಶಿ
ಜನಿವಾರ ವಿವಾದ: ರಾಜ್ಯ ಸರ್ಕಾರ, ಕೆಇಎಗೆ ಹೈಕೋರ್ಟ್ ನೋಟಿಸ್
"ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ 'ಸಾಮಾನ್ಯ ಪ್ರವೇಶ ಪರೀಕ್ಷೆ' (KCET) ಬರೆಯುವ ಮುನ್ನ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಬಲವಂತವಾಗಿ ಕತ್ತರಿಸಿ ತೆಗೆಯಲಾಗಿದೆ" ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನೋಟಿಸ್ ಜಾರಿಗೊಳಿಸಲು ಆದೇಶ ಹೊರಡಿಸಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರ ಮತ್ತು ಕೆಇಎ ಕ್ರಮವು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿದ್ಯಾರ್ಥಿಗಳ ಪರವಾಗಿ ವಕೀಲರು ವಾದಿಸಿದ್ದರು. ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಜನಿವಾರ ತೆಗೆಸಲು ಮುಂದಾದ ಕಾರಣದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೂ ಸರ್ಕಾರಿ ಸೀಟು ನೀಡುವುದಕ್ಕೆ ನಿರ್ಧರಿಸಲಾಗಿದೆ. ಈ ಘಟನೆ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದು ಸರ್ಕಾರಕ್ಕೂ ನೋವುಂಟು ಮಾಡಿದೆ. ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಅಂಶವನ್ನು ಪೀಠಕ್ಕೆ ವಿವರಿಸಲಾಗುವುದು ಎಂದು ತಿಳಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂ. 9ಕ್ಕೆ ಮುಂದೂಡಿತ್ತು.