'Vishwanath-Gavaskar' Cricket Academy: 'ವಿಶ್ವನಾಥ್–ಗವಾಸ್ಕರ್' ಅಕಾಡೆಮಿ ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್ ವಿತರಣೆ
2025ರಲ್ಲಿ ಆರಂಭವಾದ ಈ ಅಕಾಡೆಮಿಯಲ್ಲಿ ಸಂಪೂರ್ಣ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂತ ರಾಷ್ಟ್ರೀಯ ಮಟ್ಟದ ಮೈದಾನ ಹಾಗೂ ಉತ್ತಮ ಅಭ್ಯಾಸ ಸೌಲಭ್ಯಗಳನ್ನು ಒದಗಿಸಲಾಗಿದೆ. ಖ್ಯಾತ ಮಾರ್ಗದರ್ಶಕರಿಂದ ನಿಯಮಿತ ತರಬೇತಿ ನೀಡಲಾಗುತ್ತಿದೆ.
-
ಚಿಕ್ಕಬಳ್ಳಾಪುರ: ಭವಿಷ್ಯದ ಕ್ರಿಕೆಟರ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸತ್ಯ ಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ 'ವಿಶ್ವನಾಥ್–ಗವಾಸ್ಕರ್' ಕ್ರಿಕೆಟ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್ ಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ್ ಸಾಯಿ,'ಲಿಟಲ್ ಮಾಸ್ಟರ್' ಸುನೀಲ್ ಗವಾಸ್ಕರ್, ಕ್ರಿಕೆಟ್ ದಂತಕಥೆ ಗುಂಡಪ್ಪ ವಿಶ್ವನಾಥ್ ಹಾಗೂ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು. ಅಕಾಡೆಮಿಯನ್ನು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್ ನಿರ್ವಹಿಸುತ್ತದೆ.
ಉಚಿತ ತರಬೇತಿ; ಉತ್ತಮ ಸೌಲಭ್ಯ
2025ರಲ್ಲಿ ಆರಂಭವಾದ ಈ ಅಕಾಡೆಮಿಯಲ್ಲಿ ಸಂಪೂರ್ಣ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಮೈದಾನ ಹಾಗೂ ಉತ್ತಮ ಅಭ್ಯಾಸ ಸೌಲಭ್ಯಗಳನ್ನು ಒದಗಿಸಲಾಗಿದೆ. ಖ್ಯಾತ ಮಾರ್ಗದರ್ಶಕರಿಂದ ನಿಯಮಿತ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: Chikkaballapur News: ಜಿಲ್ಲೆಯಲ್ಲಿ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ
‘ಅಕಾಡೆಮಿ ಸ್ಥಾಪನೆ ದೀರ್ಘಕಾಲದ ಕನಸು’
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುಂಡಪ್ಪ ವಿಶ್ವನಾಥ್, ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವುದು ತನ್ನ ದೀರ್ಘಕಾಲದ ಕನಸಾಗಿತ್ತು ಎಂದು ಹೇಳಿದರು. ಕಳೆದ ವರ್ಷ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರನ್ನು ಭೇಟಿ ಮಾಡಿದ ಬಳಿಕ ಆ ಕನಸು ನನಸಾಯಿತು ಎಂದರು.
‘ಕ್ರಿಕೆಟ್ ಕೇವಲ ಆಟವಲ್ಲ; ಅದು ಜೀವನದ ಸವಾಲುಗಳನ್ನು ಸಮತೋಲನದಿಂದ ಎದು ರಿಸಲು ಕಲಿಸುತ್ತದೆ’ ಎಂದು ಹೇಳಿದರು. ಇಲ್ಲಿನ ಸೌಲಭ್ಯಗಳನ್ನು ಸದ್ವಿನಿಯೋಗ ಮಾಡಿ ಕೊಂಡು ಶ್ರೇಷ್ಠ ಆಟಗಾರರಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
'ಕ್ರೀಡಾಸ್ಫೂರ್ತಿಯೇ ಯಶಸ್ಸಿನ ಆಧಾರ’
ಸುನೀಲ್ ಗವಾಸ್ಕರ್ ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡು, ಹಿಂದೆ ಉತ್ತಮ ಮೈದಾನಗಳ ಕೊರತೆಯಿಂದ ಎದುರಾದ ಸವಾಲುಗಳನ್ನು ಸ್ಮರಿಸಿದರು. ಸಾಯಿ ಕೃಷ್ಣನ್ ಕ್ರೀಡಾಂಗಣದ ಸೌಲಭ್ಯಗಳನ್ನು ಹಲವು ವಿಶ್ವಮಟ್ಟದ ಆಟಗಾರರು ಮೆಚ್ಚಿಕೊಂಡಿರುವು ದನ್ನು ಉಲ್ಲೇಖಿಸಿದರು.
‘ಕ್ರಿಕೆಟ್‌ನಲ್ಲಿ ಸಾಧನೆ ಎಷ್ಟು ಮುಖ್ಯವೋ, ಕ್ರೀಡಾಸ್ಫೂರ್ತಿ ಅಷ್ಟೇ ಮುಖ್ಯ. ಶಿಸ್ತು ಮತ್ತು ಪರಿಶ್ರಮವೇ ಯಶಸ್ಸಿಗೆ ದಾರಿ’ ಎಂದು ಹೇಳಿದರು. ವಿಶ್ವನಾಥ್ ಅವರಂತಹ ದಂತಕಥೆಯ ಮಾರ್ಗದರ್ಶನ ಅಕಾಡೆಮಿಯ ಗೌರವವನ್ನು ಹೆಚ್ಚಿಸಿದೆ ಎಂದರು.
‘ಜೀವನವೇ ಒಂದು ಆಟ’
ಸದ್ಗುರು ಶ್ರೀ ಮಧುಸೂದನ್ ಸಾಯಿ, ಸತ್ಯ ಸಾಯಿ ಬಾಬಾ ಅವರ ಸಂದೇಶವನ್ನು ಉಲ್ಲೇಖಿಸಿ, ‘ಜೀವನವೇ ಒಂದು ಆಟ; ಅದನ್ನು ಸಮರ್ಪಣೆಯಿಂದ ಆಡಬೇಕು. ಜೀವನ ಸವಾಲು; ಅದನ್ನು ಧೈರ್ಯದಿಂದ ಎದುರಿಸಬೇಕು’ ಎಂದು ಹೇಳಿದರು. ಗೆಲುವು–ಸೋಲು ಸಹಜ; ಕ್ರೀಡಾಪಟುಗಳು ಅದನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಬೇಕು ಎಂದು ತಿಳಿಸಿದರು. ಮೈದಾನದಲ್ಲಿ ಶ್ರೇಷ್ಠ ಪ್ರಯತ್ನ ನೀಡುವುದು ಮುಖ್ಯ; ಫಲಿತಾಂಶದ ಬಗ್ಗೆ ಚಿಂತಿಸಬೇಡಿ ಎಂದು ಸಲಹೆ ನೀಡಿದರು.
ಸ್ನೇಹಪೂರ್ಣ ಪಂದ್ಯ
ಕಾರ್ಯಕ್ರಮದ ಬಳಿಕ ಬೆಂಗಳೂರು ಯುವ ಅಕಾಡೆಮಿ ಹಾಗೂ 'ವಿಶ್ವನಾಥ್–ಗವಾಸ್ಕರ್' ಕ್ರಿಕೆಟ್ ಅಕಾಡೆಮಿ ಆಟಗಾರರ ನಡುವೆ ಸ್ನೇಹಪೂರ್ಣ ಪಂದ್ಯ ನಡೆಯಿತು. ಪಂದ್ಯದಲ್ಲಿ ಬೆಂಗಳೂರು ಯುವ ಅಕಾಡೆಮಿ ತಂಡವು 16 ರನ್‌ಗಳ ಅಂತರದಿಂದ ಜಯ ಸಾಧಿಸಿತು.
ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.