ಕಲಬುರಗಿ: ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋದ ಘಟನೆ ಶನಿವಾರ ಸಂಜೆ ಚಿತ್ತಾಪುರ ತಾಲೂಕಿನ ನಾಲವಾರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಮಯಪ್ರಜ್ಞೆಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿಯಿಂದ ಕಲಬುರಗಿ ನಗರದತ್ತ ಕಾರಿನಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದರು. ನಾಲವಾರ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಕಾರಿನ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಪ್ರಯಾಣಿಕರು ಗಮನಿಸಿದ್ದಾರೆ.
ಇದನ್ನೂ ಓದಿ: Kalaburagi Breaking: ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು
ತಕ್ಷಣ ಅಪಾಯದ ಮುನ್ಸೂಚನೆ ಅರಿತ ಅವರು ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಕಾರನ್ನು ಆವರಿಸಿಕೊಂಡಿದೆ. ದಟ್ಟ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆ ಕಂಡು ವಾಹನ ಸವಾರರು ಮತ್ತು ಸ್ಥಳೀಯರು ಆತಂಕಗೊಂಡರು.
ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಾಡಿ ಪೊಲೀಸ್ ಠಾಣೆಯ ಪಿಎಸ್ಐ ಕೆ. ತಿರುಮಲೇಶ್ ಹಾಗೂ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
ಅಗ್ನಿ ಅವಘಡದಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ತಾಂತ್ರಿಕ ದೋಷವೇ ಬೆಂಕಿಗೆ ಕಾರಣ ಎನ್ನಲಾಗಿದ್ದು, ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.