ಮೊಮ್ಮಗನ ಮುಖ ತೋರಿಸಲು ನಿರಾಕರಿಸಿ ಕಿರಿಕ್: ಸೊಸೆ ಮತ್ತು ಆಕೆಯ ಕಡೆಯವರಿಂದ ಹಲ್ಲೆಗೊಳಗಾಗಿದ್ದ ಅಜ್ಜ ಸಾವು!
Kalaburagi News: ಕಲಬುರಗಿ ಸಮೀಪದ ಬೇಲೂರ್ ಕ್ರಾಸ್ ಬಳಿ ಘಟನೆ ನಡೆದಿದೆ. ಮೊಮ್ಮಗನ ಮುಖ ತೋರಿಸಿ ಎಂದು ಕೇಳಿದ್ದಕ್ಕೆ ಸೊಸೆ ಹಾಗೂ ಆಕೆಯ ತವರು ಮನೆಯವರು ನಡೆಸಿದ ಮಾರಣಾಂತಿಕ ಹಲ್ಲೆಯಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
-
ಕಲಬುರಗಿ: "ಮೊಮ್ಮಗನ ಮುಖ ತೋರಿಸಿ" ಎಂದು ವಿಡಿಯೊ ಕಾಲ್‌ನಲ್ಲಿ ಕೇಳಿದ್ದಕ್ಕೆ ಸೊಸೆ ಹಾಗೂ ಆಕೆಯ ತವರು ಮನೆಯವರು ನಡೆಸಿದ ಮಾರಣಾಂತಿಕ ಹಲ್ಲೆಯಿಂದಾಗಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi News) ಸಮೀಪದ ಬೇಲೂರ್ ಕ್ರಾಸ್ ಬಳಿ ನಡೆದಿದೆ.
ಬೇಲೂರ್ ತಾಂಡಾ ನಿವಾಸಿಯಾದ ರಾಜು ರಾಠೋಡ್ (48) ಕೊಲೆಯಾದ ದುರ್ದೈವಿಯಾಗಿದ್ದು, ರಾಜು ರಾಠೋಡ್ ಅವರಿಗೆ ಇತ್ತೀಚೆಗಷ್ಟೇ ಮೊಮ್ಮಗ ಹುಟ್ಟಿದ್ದನು. ಮಗುವನ್ನು ನೋಡುವ ಆಸೆಯಿಂದ ರಾಜು ಅವರು ಸೊಸೆಗೆ ವಿಡಿಯೋ ಕಾಲ್ ಮಾಡಿ, "ಮೊಮ್ಮಗನ ಮುಖ ತೋರಿಸು" ಎಂದು ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಸೊಸೆ, ವಿನಾಕಾರಣ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.
ಈ ವಿಷಯವಾಗಿ ಎರಡು ಕುಟುಂಬಗಳ ನಡುವೆ ತೀವ್ರ ವಾಗ್ದಾದ ನಡೆದಿದೆ. ಬಳಿಕ ಸೊಸೆ ತನ್ನ ತವರು ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಅವರು ರಾಜು ರಾಠೋಡ್ ಅವರನ್ನು ಬೇಲೂರ್ ಕ್ರಾಸ್ ಬಳಿ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಬಂದ ರಾಜು ಅವರ ಮೇಲೆ ಸೊಸೆ ಹಾಗೂ ಆಕೆಯ ತವರು ಮನೆಯವರು ಮನಸೋಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ವೃದ್ಧ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕಿತ್ಸೆ ಫಲಿಸದೆ ಸಾವು:
ಕಳೆದ ಮೂರು ದಿನಗಳ ಹಿಂದೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ರಾಜು ರಾಠೋಡ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದರಿಂದ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:
ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನನ್ವಯ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ಕೊಲೆಗೆ ಕಾರಣರಾದ ವಿಲಾಸ್, ಸಂಜಯ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.