ಕಲಬುರಗಿ: ಸ್ಟಾರ್ ಏರ್ʼಗೆ ಭರ್ಜರಿ ಸ್ಪಂದನೆ
ಕಳೆದ ಒಂದು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ನಡುವೆ ಒಟ್ಟು 60 ವಿಮಾನ ಟ್ರಿಪ್‌ಗಳು ನಡೆದಿವೆ. ಬೆಂಗಳೂರಿನಿಂದ ಕಲಬುರಗಿಗೆ 2596 ಮಂದಿ ಆಗಮಿಸಿದ್ದರೆ, ಕಲಬುರಗಿಯಿಂದ ಬೆಂಗಳೂರಿಗೆ 2774 ಮಂದಿ ಪ್ರಯಾಣಿಸಿದ್ದಾರೆ. ಹಲವು ದಿನಗಳಲ್ಲಿ ವಿಮಾನಗಳು ಶೇ.100ರಷ್ಟು ಭರ್ತಿಯಾಗಿ ಸಂಚರಿಸಿರುವುದು ಈ ಮಾರ್ಗದ ಅಗತ್ಯವನ್ನು ಸಾಬೀತುಪಡಿಸಿದೆ.
-
ದೇವೇಂದ್ರ ಜಾಡಿ ಕಲಬುರಗಿ
ವಿಮಾನದ ವೇಳಾಪಟ್ಟಿ ಬದಲಾವಣೆ ಆಸನ ಭರ್ತಿಗೆ ಹೊಡೆತ ಸಾಧ್ಯತೆ
ದೆಹಲಿಗೆ ಸೇವೆ ಆರಂಭಿಸಲು ಆಗ್ರಹ
ಸ್ಥಗಿತಗೊಂಡಿದ್ದ ಕಲಬುರಗಿ- ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ಜೂನ್ 10ರಿಂದ ಸ್ಟಾರ್ ಏರ್ ಪುನಾರಂಭಿಸಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಆದರೆ, ವಾಯು ಯಾನ ಸಂಸ್ಥೆಯು ಇತ್ತೀಚೆಗೆ ಮಾಡಿರುವ ವೇಳಾಪಟ್ಟಿ ಬದಲಾವಣೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ವಿಮಾನ ನಿಲ್ದಾಣಕ್ಕೆ ಮತ್ತೆ ಆಸನ ಭರ್ತಿಯ ಆತಂಕ ತಂದೊಡ್ಡಿದೆ. ಸೇವೆ ಆರಂಭ ಗೊಂಡ ಮೊದಲ ತಿಂಗಳಲ್ಲೇ ಒಟ್ಟು 5370 ಪ್ರಯಾಣಿಕರು ಸಂಚರಿಸಿದ್ದು, ಸರಾಸರಿ ಶೇ.61ರಷ್ಟು ಆಸನ ಭರ್ತಿದರ ದಾಖಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ನಡುವೆ ಒಟ್ಟು 60 ವಿಮಾನ ಟ್ರಿಪ್‌ಗಳು ನಡೆದಿವೆ. ಬೆಂಗಳೂರಿನಿಂದ ಕಲಬುರಗಿಗೆ 2596 ಮಂದಿ ಆಗಮಿಸಿದ್ದರೆ, ಕಲಬುರಗಿಯಿಂದ ಬೆಂಗಳೂರಿಗೆ 2774 ಮಂದಿ ಪ್ರಯಾಣಿಸಿದ್ದಾರೆ. ಹಲವು ದಿನಗಳಲ್ಲಿ ವಿಮಾನಗಳು ಶೇ.100ರಷ್ಟು ಭರ್ತಿಯಾಗಿ ಸಂಚರಿಸಿರುವುದು ಈ ಮಾರ್ಗದ ಅಗತ್ಯವನ್ನು ಸಾಬೀತುಪಡಿಸಿದೆ.
ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App
ವೇಳಾಪಟ್ಟಿ ಬದಲಾವಣೆ ತಂದ ಆಘಾತ: ಆರಂಭಿಕ ದಿನಗಳಲ್ಲಿ ಬೆಳಗಿನ ವೇಳೆಯಲ್ಲಿದ್ದ ವಿಮಾನ ಸೇವೆಗೆ ವ್ಯಾಪಾರಿಗಳು, ಸರಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ಗಾಗಿ ತೆರಳುವವರಿಂದ ಅದ್ಭುತ ಸ್ಪಂದನೆ ಇತ್ತು. ಬೆಳಗ್ಗೆ ತೆರಳಿ ಅದೇ ದಿನ ಕೆಲಸ ಮುಗಿಸಿಕೊಂಡು ಮರಳುವ ಅವಕಾಶ ಇದ್ದ ಕಾರಣ ವಿಮಾನ ಸೇವೆ ಜನಪ್ರಿಯವಾಗಿತ್ತು. ಆದರೆ, ಪ್ರಸ್ತುತ ವಿಮಾನದ ವೇಳಾಪಟ್ಟಿ ಯನ್ನು ಸಂಜೆ ಅವಧಿಗೆ ನಿಗದಿಪಡಿಸಿರುವುದು ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಸಂಜೆ ವಿಮಾನದಲ್ಲಿ ಹೋದರೆ ಬೆಂಗಳೂರಿನಲ್ಲಿ ಒಂದು ದಿನ ಹೆಚ್ಚುವರಿಯಾಗಿ ಉಳಿಯಬೇಕಾಗುತ್ತದೆ.
ಇದರಿಂದಾಗಿ ವಸತಿ ಮತ್ತು ಇತರ ವೆಚ್ಚಗಳು ದುಬಾರಿಯಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಸುಮಾರು 5 ಸಾವಿರಕ್ಕೂ ಹೆಚ್ಚು ಹಣವನ್ನು ವಿಮಾನ ಸೇವೆಗೆ ಪಾವತಿಸುವ ಬದಲು, 1500ರೊಳಗೆ ಲಭ್ಯವಿರುವ ರೈಲು ಪ್ರಯಾಣದತ್ತ ಮುಖ ಮಾಡುತ್ತಿದ್ದಾರೆ. ಇದು ವಿಮಾನದ ಆಸನ ಭರ್ತಿ ಕುಸಿಯಲು ಕಾರಣವಾಗುತ್ತಿದೆ.
ದೆಹಲಿ ವಿಮಾನ ಸೇವೆಗೆ ಆಗ್ರಹ
ಕಲಬುರಗಿ-ಬೆಂಗಳೂರು ವಿಮಾನ ಸೇವೆಯ ಯಶಸ್ಸಿನ ಬೆನ್ನಲ್ಲೇ ಕಲ್ಯಾಣ ಕರ್ನಾಟಕ ಭಾಗದಿಂದ ದೇಶದ ಇತರ ಪ್ರಮುಖ ನಗರಗಳಿಗೆ ವಾಯು ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಬಲವಾಗಿದೆ. ಪ್ರಮುಖವಾಗಿ ಸಚಿವಾಲಯಗಳು ಹಾಗೂ ವಿವಿಧ ರಾಷ್ಟ್ರೀಯ ಸಂಸ್ಥೆಗಳ ಕೆಲಸಗಳಿಗಾಗಿ ದೆಹಲಿಗೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಕಲಬುರಗಿ-ದೆಹಲಿ ನೇರ ವಿಮಾನ ಸೇವೆ ಆರಂಭಿಸ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದರೊಂದಿಗೆ ಮುಂಬೈ, ತಿರುಪತಿ, ಗೋವಾ ಹಾಗೂ ಮಂಗಳೂರು ನಡುವೆಯೂ ವಿಮಾನ ಸಂಚಾರ ಆರಂಭಿಸಿದರೆ ಉದ್ಯಮಿಗಳು, ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಮೊದಲ ತಿಂಗಳ ವಿಮಾನ ಸೇವೆಯ ಚಿತ್ರಣ
ಜೂ.10ರಿಂದ ಸೇವೆ ಆರಂಭ, ಒಟ್ಟು ಟ್ರಿಪ್‌ಗಳು: 60
ಬೆಂಗಳೂರು-ಕಲಬುರಗಿ: 2596 ಪ್ರಯಾಣಿಕರು
ಕಲಬುರಗಿ-ಬೆಂಗಳೂರು: 2774 ಪ್ರಯಾಣಿಕರು
ಒಟ್ಟು 5370 ಪ್ರಯಾಣಿಕರು ವಿಮಾನದಲ್ಲಿ ಸಂಚಾರ ಶೇ.61ರಷ್ಟು ಆಸನ ಭರ್ತಿ, ಹಲವು ದಿನ ಶೇ.100ರಷ್ಟು
![]()
ಮೊದಲ ತಿಂಗಳಲ್ಲೇ ಉತ್ತಮ ಸ್ಪಂದನೆ ದೊರೆತಿರುವುದು ಕಲಬುರಗಿ ವಿಮಾನ ಸೇವೆಯ ಅಗತ್ಯ ವನ್ನು ಸಾಬೀತುಪಡಿಸಿದೆ. ಆದರೆ, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬೆಳಗಿನ ವೇಳಾಪಟ್ಟಿ ಯನ್ನು ಮರು ಸ್ಥಾಪಿಸಿದರೆ ಆಸನ ಭರ್ತಿದರ ಮತ್ತಷ್ಟು ಹೆಚ್ಚಲಿದೆ. ಜತೆಗೆ ದೆಹಲಿ ಸೇರಿ ಇತರೆ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ ಆರಂಭಿಸಿದರೆ ಕಲ್ಯಾಣ ಕರ್ನಾಟಕದ ವಾಯು ಸಂಪರ್ಕಕ್ಕೆ ಹೊಸ ಆಯಾಮ ಸಿಗಲಿದೆ.
-ಶರಣು ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ
![]()
ಮೊದಲ ತಿಂಗಳಲ್ಲೇ ಶೇಕಡಾ 61 ರಷ್ಟು ಸರಾಸರಿ ಆಸನ ಭರ್ತಿ ಹಾಗೂ ಹಲವು ದಿನಗಳಲ್ಲಿ ಶೇ.100ರಷ್ಟು ಪ್ರಯಾಣಿಕರ ಸ್ಪಂದನೆ ದೊರೆತಿರುವುದು ಕಲಬುರಗಿ ವಿಮಾನ ಸೇವೆಗೆ ಉತ್ತಮ ಭವಿಷ್ಯದ ಸೂಚನೆಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
- ಕಿಶೋರ್ ಕಿಲ್ಲಂಪಲ್ಲಿ, ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ