Kalaburagi News: ಮನೆಗೆ ನುಗ್ಗಿ ದರೋಡೆ: 4 ಜನ ಅಂತಾರಾಜ್ಯ ದರೋಡೆಕೋರರ ಬಂಧನ
Kalaburagi News: ಮನೆಗೆ ನುಗ್ಗಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸೇರಿದಂತೆ 4 ಅಂತಾರಾಜ್ಯ ದರೋಡೆಕೋರರ ಬಂಧಿಸಲಾಗಿದ್ದು, ಓರ್ವ ಆರೋಪಿ ತಲೆಮರಿಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆದಿದೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.


ಕಲಬುರಗಿ: ಮನೆಗೆ ನುಗ್ಗಿ ಮನೆಯವರಿಗೆ ಸೀರೆಯಿಂದ ಕೈಕಾಲು ಕಟ್ಟಿ ತಲವಾರಿನಿಂದ ಬೆದರಿಕೆ ಹಾಕಿ, ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ದೋಚಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸೇರಿದಂತೆ 4 ಅಂತಾರಾಜ್ಯ ದರೋಡೆಕೋರರ ಬಂಧನ ಮಾಡಲಾಗಿದ್ದು, ಓರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ. ಆತನ ಪತ್ತೆ ಕಾರ್ಯ ನಡೆದಿದೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ (Kalaburagi News) ಪೊಲೀಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್ 22ರಂದು ಮನೆಗೆ ನುಗ್ಗಿ ದರೋಡೆ ಮಾಡಲಾಗಿದೆ ಎಂದು ಶಹಾಬಾದ್ ನಗರದ ಧಕ್ಕಾ ತಾಂಡಾದ ಹಣಮಂತ ಪವಾರ್ ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ದೂರಿನನ್ವಯ ಶಹಾಬಾದ್ ಪೊಲೀಸ್ ತಂಡ ಆರೋಪಿಗಳ ಪತ್ತೆ ಕಾರ್ಯ ನಡೆಸಿ, ರವಿ ರಾಠೋಡ್ (42), ಮಹಾದೇವ ರಾಠೋಡ (38), ಶಿವಕುಮಾರ್ ರಾಠೋಡ (25) ಹಾಗೂ ಗೋಪಾಲ ನಾಯಕ್ (30) ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಇನ್ನೋರ್ವ ಅಕ್ಕಲಕೋಟ ತಾಂಡಾದ ಸುನೀಲ್ ರಾಠೋಡ ಪತ್ತೆ ಕಾರ್ಯ ನಡೆದಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ಬಳಿ ನಾಲ್ಕು ಜನರನ್ನು ವಶಕ್ಕೆ ಪಡೆದು, ಬಂಧಿತರಿಂದ 135 ಗ್ರಾಂ ಚಿನ್ನ, 550 ಗ್ರಾಂ ಬೆಳ್ಳಿ ಹಾಗೂ 40 ಸಾವಿರ ರೂಪಾಯಿ ನಗದು ಹಣ ಸೇರಿದಂತೆ ಒಟ್ಟು 8.95 ಲಕ್ಷ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಜಪ್ತಿಗೊಳಿಸಿದ್ದಲ್ಲದೇ, ಕೃತ್ಯಕ್ಕೆ ಬಳಸಿದ 5 ಚಾಕು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಗಾಗಿ ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ, ಶಹಾಬಾದ್ ಡಿಎಸ್ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಶಹಾಬಾದ್ ನಗರ ಪಿಐ ನಟರಾಜ್ ಲಾಡೆ, ಪಿಎಸ್ಐ ಶಾಮರಾವ್, ಎಎಸ್‌ಐ ಮಲ್ಲಿಕಾರ್ಜುನ, ಗುಂಡಪ್ಪ ಸೇರಿದಂತೆ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ತಂಡದ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೈಕ್ ಕಳ್ಳತನ ಆರೋಪಿತರ ಬಂಧನ, 29 ಬೈಕ್ ವಶಕ್ಕೆ
ಕಲಬುರಗಿ: ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಮೂವರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿಯಾಗಿದ್ದು, 29 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೋಲಿಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಟಾರ್ ಸೈಕಲ್ ಕಳ್ಳರಾದ ಬೆನಕಿಪಳ್ಳಿಯ ಶ್ರೀಕಾಂತ್ ಗಣಪತಿ (27), ಬಸಯ್ಯ ರಾಚಯ್ಯ ಸ್ವಾಮಿ (44) ಹಾಗೂ ಅಭಿನಂದನ ಜೈಭಾರತ ಮಾನೆ ಆರ್.ಜಿ.ನಗರ ಆರೋಪಿಯನ್ನು ವಶಕ್ಕೆ ಪಡೆದು ಬಂಧಿತರಿಂದ 5.41 ಲಕ್ಷ ರೂಪಾಯಿ ಮೌಲ್ಯದ ಒಟ್ಟು 29 ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ, ಉಪ ಅಧೀಕ್ಷಕ ಚಿಂಚೋಳಿಯ ಸಂಗಮನಾಥ ಹಿರೇಮಠ, ಸಿಪಿಐ ಕಪಿಲ್ ದೇವ್ ಮಾರ್ಗದರ್ಶನದಲ್ಲಿ, ಪಿಎಸ್ಐ ಗಂಗಮ್ಮ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Sirsi News: ಶಿರಸಿ ನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ; 41 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ