ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರ ಕ್ಷೇತ್ರದಲ್ಲಿ ಇಂದು ಆರ್ ಎಸ್ಎಸ್ ಪಥಸಂಚಲನಕ್ಕೆ(RSS procession) ಬ್ರೇಕ್ ಹಾಕಲಾಗಿದ್ದು, ಆರ್ ಎಸ್ ಎಸ್ ಪಥಸಂಚಲನಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅನುಮತಿ ನಿರಾಕರಿಸಿದ್ದಾರೆ. 100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ತಾಲೂಕು ಆಡಳಿತವನ್ನು ಕೇಳಿತ್ತು. ಅನುಮತಿ ಕೇಳಿದ ನಂತರ ತಾಲೂಕು ತಹಶೀಲ್ದಾರ ನಾಗಯ್ಯ 12 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಆರ್‌ಎಸ್‌ಎಸ್ ಉತ್ತರ ನೀಡಿದ್ದರೂ ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ಸಿಕ್ಕಿಲ್ಲ. ಯಾವ ಕಾರಣಕ್ಕೆ ಅನುಮತಿ ನೀಡಿಲ್ಲ ಎನ್ನುವುದರ ಬಗ್ಗೆ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ.
ಶುಕ್ರವಾರ ತಡರಾತ್ರಿಯೇ ಚಿತ್ತಾಪುರ ಕ್ಷೇತ್ರದಲ್ಲಿ ಅಳವಡಿಸಿದ ಆಲಂಕಾರಿಕ ಭಗವಾ ಧ್ವಜಗಳು, ಬ್ಯಾನರ್‌ಗಳು, ಕೇಸರಿ ಪತಾಕೆಗಳನ್ನು ತೆರವುಗೊಳಿಸಿದ ಘಟನೆ ನಡೆದಿದೆ. ವಿಜಯ ದಶಮಿ ಉತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಸಂಘ ಶತಾಬ್ದಿ ಸಂಭ್ರಮಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳಲಾಗುತ್ತಿತ್ತು. ಚಿತ್ತಾಪುರ ಪಟ್ಟಣದ ಪ್ರಮುಖ ವೃತ್ತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕೇಸರಿ ಬಣ್ಣದ ಪತಾಕೆ, ಅಭಿಮಾನಿಗಳು ಬ್ಯಾನರ್‌ಗಳನ್ನು, ಭಗವಾ ಧ್ವಜಗಳನ್ನು ಕಟ್ಟಿದ್ದರು. ಪುರಸಭೆ ನೌಕರರು, ಸಿಬ್ಬಂದಿಗಳು ರಾತ್ರೋ ರಾತ್ರಿ ಆಗಮಿಸಿ, ಪರವಾನಗಿ ಇಲ್ಲದೇ ಅಳವಡಿಸಲಾಗಿದೆ ಎಂದು ಇವುಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಪೋಸ್ಟರ್‌ಗಳನ್ನು ಹರಿದುಹಾಕಿದ್ದಾರೆ. ಸಂಘದ ಅಭಿಮಾನಿಗಳು, ಕಾರ್ಯಕರ್ತರು ಇದನ್ನು ವಿರೋಧಿಸಿ ಪುರಸಭೆಗೆ ಧಿಕ್ಕಾರ ಕೂಗಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಭಗವಾ ಧ್ವಜದ ಪತಾಕೆಗಳನ್ನು ತೆರವುಗೊಳಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ತಡೆ ಹಾಕಲು ಕೋರಿ ಸಿಎಂಗೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದರು. ಅದರಂತೆ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲು ಕ್ಯಾಬಿನಟ್‌ನಲ್ಲಿ ನಿರ್ಧರಿಸಲಾಗಿದೆ. ನಿನ್ನೆ, ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಪಿಡಿಒ ಒಬ್ಬರನ್ನು ಅಮಾನತು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಗೆ ಮುತ್ತಿಗೆ; ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುನೀಲ್ ಕುಮಾರ್ ಒತ್ತಾಯ
ತಹಶೀಲ್ದಾರ್ ಆದೇಶದಲ್ಲೇನಿದೆ?
ಸದರಿ ಸಂಘಟನೆಗಳ ಪಥ ಸಂಚಲನ ಕಾರ್ಯಕ್ರಮದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬರಲು ನಮ್ಮ ಠಾಣೆ ಗುಪ್ತ ಮಾಹಿತಿ ಸಂಗ್ರಹಿಸುವ ದತ್ತಾತ್ರೇಯ ಪಿ.ಸಿ 88 ರವರಿಗೆ ಕಳುಹಿಸಿದಾಗ ಸದರಿ ರವರು ಮಾಹಿತಿ ಸಂಗ್ರಹಿಕೊಂಡು ಬಂದು ವರದಿ ಸಲ್ಲಿಸಿದ್ದೇನೆಂದರೆ ದಿನಾಂಕ; 16-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತನಾದ ದಾನೇಶ ನರೋಣ ರವರು ಕೆಲವು ದಿನಗಳ ಹಿಂದೆ ಈ ಕ್ಷೇತ್ರ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಂತಹ ಶ್ರೀ ಪ್ರಿಯಾಂಕ್ ಖರ್ಗೆ ರವರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೇದರಿಕೆ ಹಾಕಿದ ಪ್ರಯುಕ್ತ ಬೆಂಗಳೂರಿನ ಸದಾಶಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲದೇ ಈ ಘಟನೆಯನ್ನು ಖಂಡಿಸಿ ಕರ್ನಾಟಕದ್ಯಂತ ಅಲ್ಲದೇ ಸಚಿವರು ತವರು ಕ್ಷೇತ್ರವಾದ ಚಿತ್ತಾಪೂರದಲ್ಲಿ ಕೂಡ ಬಂದ ಕರೆ ಕೊಟ್ಟು ಪತ್ರಿಭಟನೆ ಮಾಡಿರುತ್ತಾರೆ. ಇಂದು ದಿನಾಂಕ: 18-10-2025 ರಂದು ಭೀಮಾ ಅರ್ಮಿ ರಾಜ್ಯ ಯುವ ಘಟಕ ಕಲಬುರಗಿ ವತಿಯಿಂದ ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣ್ಣದಲ್ಲಿ ಆರ್.ಎಸ್.ಎಸ್ ನವರು ಸಚಿವರ ಹೇಳಿಕೆಯ ವಿರುದ್ದವಾಗಿ ಉದ್ದೇಶಪೂರ್ವಕವಾಗಿ ಪಥ ಸಂಚಲನ ಮಾಡುತ್ತಿದ್ದರಿಂದ ಭೀಮ್ ಆರ್ಮಿ ಸಂಘಟನೆಯ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಇದೇ ಮಾರ್ಗವಾಗಿ ಪಥ ಸಂಚಲನ ಮಾಡುವುದಾಗಿ ಅನುಮತಿ ನೀಡಬೇಕೆಂದು ಪತ್ರದ ಮೂಲಕ ಕೋರಿಕೊಂಡಿರುತ್ತಾರೆ, ಅಲ್ಲದೇ ಈಗಾಗಲೇ ಭೀಮ್ ಆರ್ಮಿ ರವರು ನಾಳೆ ಪಥಸಂಚಲನ ಮಾಡುವ ಸಲುವಾಗಿ ಪತ್ರಿಕಾಗೋಷ್ಠಿ ಕೂಡಾ ಮಾಡಿದ್ದು, ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಕೂಡ ಮಾಡುವುದುಗಾಗಿ ಪತ್ರದ ಮೂಲಕ ಕೋರಿಕೊಂಡಿರುತ್ತಾರೆ.
ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್ ನವರು ಹಾಗೂ ಭೀಮ್ ಅರ್ಮಿ ಸಂಘಟನೆ, ಭಾರತೀಯ ದಲಿತ ಪ್ಯಾಂಥರ (ರಿ) ಸಂಘದ ಕಾರ್ಯಕರ್ತರು ಪಥ ಸಂಚಲನ ಕೈಕೊಂಡರೇ ಎಲ್ಲಾ ಸಂಘಟನೆಗಳು ಒಟ್ಟಿಗೆಯಾಗಿ ಪಥ ಸಂಚಲನ ಮಾಡಿದ್ದಲ್ಲಿ ಸಂಘನೆಗಳ ಮಧ್ಯೆ ಯಾವುದಾರೂ ಗಂದಲ ಗಲಾಟೆಗಳಾಗಿ ಕಾನೂನು ಸುವ್ಯವಸ್ಥೆ ಹಾಳಗುವ ಸಾದ್ಯತೆ ಹೆಚ್ಚಾಗಿದ್ದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಅಂತಾ ಸಾರ್ವಜನಿಕರು ಹಾಗೂ ಪೋಲಿಸ್ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಿಕೊಂಡು ಬಂದು ವರದಿ ಸಲ್ಲಿಸಿರುತ್ತಾರೆ.
ಆದ್ದರಿಂದ ದಿನಾಂಕ; 19-10-2025 ರಂದು ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್. ಹಾಗೂ ಭೀಮ್ ಆರ್ಮಿ ಸಂಘಟನೆ. ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಕಾರ್ಯಕರ್ತರು ಪಥ ಸಂಚಲನ ಕಾರ್ಯಕ್ರಮ ಕೈಗೊಂಡರೇ ಒಬ್ಬರಿಗೊಬ್ಬರ ಮಧ್ಯೆ ಗದ್ದಲ ಗಲಟೆ ಆಗುವ ಸಾಧ್ಯತೆಗಳಾಗಿ ಕಾನೂನು ಸುವ್ಯವಸ್ಥೆಯ ಮೇಲೆ ಅಡ್ಡಪರಿಣಾಮ ಬೀರುವ ಸಂಭವ ಇರುವುದರಿಂದ ಪರವಾನಿಗೆ ನೀಡುವುದು ಸೂಕ್ತವಲ್ಲ ಅಂತಾ ಚಿತ್ತಾಪೂರ ಪೋಲಿಸ್ ಠಾಣೆ ರವರು ವರದಿ ಸಲ್ಲಿಸಿರುತ್ತಾರೆ.
ಪ್ರಯುಕ್ತ ಆರ್.ಎಸ್.ಎಸ್ ಪಥ ಸಂಚಲನದಿಂದಾಗಿ ಚಿತ್ತಾಪೂರ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯಸ್ಥಗೆ ಭಂಗ ಉಂಟಾಗಬಹುದು ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ದಿನಾಂಕ; 19-10-2025 ರಂದು ನಡೆಯುವ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಲು ನಿರಾಕರಿಸಿ, ಹಾಗೂ ಮನವಿ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.