Karnataka Bandh: ಮಾ. 22ರ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ; ಬೆಳಗಿನ ಶೋ ಇಲ್ಲ
Film Chamber of Commerce: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ, ವಿವಿಧ ನದಿ ಯೋಜನೆಗಳ ಆರಂಭಕ್ಕೆ ಆಗ್ರಹಿಸಿ ಮಾ. 22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಅಂದು ಬೆಳಗಿನ ಶೋ ರದ್ದಾಗಲಿದೆ.


ಬೆಂಗಳೂರು: ಬೆಳಗಾವಿಯಲ್ಲಿ (Belagavi) ಮರಾಠಿಗರ ಪುಂಡಾಟ, ವಿವಿಧ ನದಿ ಯೋಜನೆಗಳ ಆರಂಭಕ್ಕೆ ಆಗ್ರಹಿಸಿ ಮಾ. 22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ಚಲನಚಿತ್ರ ವಾಣಿಜ್ಯ ಮಂಡಳಿ (Film Chamber of Commerce) ಬೆಂಬಲ ವ್ಯಕ್ತಪಡಿಪಡಿಸಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ʼʼಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡುವುದಿಲ್ಲʼʼ ಎಂದರು.
ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಅಂದು ಬೆಳಗಿನ ಶೋ ನಿಲ್ಲಿಸುತ್ತಿದ್ದಾರೆ. ಆದರೆ ಮಧ್ಯಾಹ್ನದ ನಂತರ ಎಂದಿನಂತೆ ಶೋ ನಡೆಯಲಿವೆ.
ಈ ಸುದ್ದಿಯನ್ನೂ ಓದಿ: Karnataka Bandh: ಮಾರ್ಚ್ 22ರಂದು ಕರ್ನಾಟಕ ಬಂದ್; ಅಂದು ಏನಿದೆ, ಏನಿಲ್ಲ?
ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದೇನು?
ʼʼರಾಜಣ್ಣ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲ ವಲಯಗಳ ಬೆಂಬಲವಿದೆʼʼ ಎಂದು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ತಿಳಿಸಿದರು.
ʼʼಚಲನಚಿತ್ರದ ಶೂಟಿಂಗ್‌ಗೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ ಚಿತ್ರ ತಂಡಗಳು ಅಥವಾ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿದೆʼʼ ಎಂದು ಮಾಹಿತಿ ನೀಡಿದರು.
ಪ್ರದರ್ಶಕರ ಸಂಘದ ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಮಾತನಾಡಿ, ʼʼಮಾ. 22ರಂದು ಬೆಳಗಿನ ಪ್ರದರ್ಶನ ಬಂದ್ ಮಾಡಲು ನಿರ್ಧರಿಸಲಾಗಿದೆ. ಮಧ್ಯಾಹ್ನದಿಂದ ಎಂದಿನಂತೆ ಪ್ರದರ್ಶನ ನಡೆಯಲಿವೆ. ಒಂದು ಶೋ ಬಂದ್ ಮಾಡುವ ಮೂಲಕ ಪ್ರದರ್ಶಕರ ವಲಯದಿಂದ ಬೆಂಬಲ ಸೂಚಿಸುತ್ತೇವೆ. ಏಕಾಏಕಿ ಇಡೀ ದಿನ ಪ್ರದರ್ಶನ ನಿಲ್ಲಿಸಿದ್ರೆ ನಿರ್ಮಾಪಕರಿಗೆ ಹೊಡೆತ ಬೀಳುತ್ತೆʼʼ ಎಂದು ಹೇಳಿದರು.
ಏನೆಲ್ಲ ಇರಲ್ಲ?
ಹೋಟೆಲ್, ಮಾಲ್‌ಗಳು ಬಂದ್ ಆಗಲಿದ್ದು, ಸಾರಿಗೆ ಬಸ್ ಸಂಚಾರ ಇರಲ್ಲ. ಸರ್ಕಾರಿ ಕಚೇರಿಗಳು ತೆರೆದಿರುವುದು ಅನುಮಾನ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ. ಓಲಾ, ಉಬರ್, ಆಟೋ, ಲಾರಿ ಸಂಚಾರ ಬಹುತೇಕ ಸ್ಥಗಿತವಾಗಲಿದೆ.
ಏನೆಲ್ಲ ಇರುತ್ತೆ?
ಮೆಡಿಕಲ್ ಶಾಪ್, ಹಾಲಿನ ಬೂತ್, ಹಣ್ಣು-ತರಕಾರಿ ಅಂಗಡಿ ತೆರೆದಿರುತ್ತವೆ. ಅಗತ್ಯ ವಸ್ತುಗಳ ಪೂರೈಕೆ ಸೇವೆ ಎಂದಿನಂತೆ ಇರಲಿದೆ. ರೈಲು, ವಿಮಾನ ಸಾಮಾನ್ಯದಂತೆ ಇರಲಿದೆ.
ಬಂದ್ ವಿಚಾರವಾಗಿ ಮಾತನಾಡಿದ ಕನ್ನಡ ಹೋರಅಟಗಾರ ವಾಟಾಳ್ ನಾಗರಾಜ್, ʼʼಮಾ. 22ಕ್ಕೆ ಕರ್ನಾಟಕ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ. ಈಗಾಗಲೇ ಬಹುತೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ. ಮರಾಠಿಗರ ಪುಂಡಾಟಿಕೆ ಮರಾಠಿಗರ ಅಟ್ಟಹಾಸ, ಎಂ.ಇ.ಎಸ್. ನಿಷೇಧಿಸಬೇಕು. ಕಳಸಾ ಬಂಡೂರಿ ಮಹಾದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕುʼʼ ಎಂದು ಆಗ್ರಹಿಸಿದ್ದಾರೆ.