ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: ಇನ್ನು ಮದ್ಯದಲ್ಲಿ ಆಲ್ಕೋಹಾಲ್‌ ಕಂಟೆಂಟ್‌ ಜಾಸ್ತಿಯಾದಷ್ಟೂ ಅಧಿಕ ತೆರಿಗೆ!

ಮದ್ಯಪಾನದ ದುಷ್ಪರಿಣಾಮಗಳು ಸಮಾಜದ ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು (Alcohol-in-Beverage – AIB) ಆಧರಿಸಿದ ತೆರಿಗೆ ಪದ್ದತಿಯು gold standard ಆಗಿದೆ. ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಇನ್ನು ಮದ್ಯದಲ್ಲಿ ಆಲ್ಕೋಹಾಲ್‌ ಕಂಟೆಂಟ್‌ ಜಾಸ್ತಿಯಾದಷ್ಟೂ ಅಧಿಕ ತೆರಿಗೆ!

ಕರ್ನಾಟಕ ಬಜೆಟ್ -

ಹರೀಶ್‌ ಕೇರ
ಹರೀಶ್‌ ಕೇರ Mar 6, 2026 12:33 PM

ಬೆಂಗಳೂರು, ಮಾರ್ಚ್‌ 06: ಮದ್ಯದಲ್ಲಿ ಆಲ್ಕೋಹಾಲ್‌ ಪ್ರಮಾಣವನ್ನು ಹೊಂದಿಕೊಂಡು ತೆರಿಗೆ ಪ್ರಮಾಣವನ್ನು ನಿಗದಿಪಡಿಸುವ ಪ್ರಸ್ತಾವವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 2026ರ ಬಜೆಟ್‌ನಲ್ಲಿ (Karnataka Budget 2026) ಮಾಡಿದ್ದಾರೆ. ಏಪ್ರಿಲ್ 2026ರಿಂದ, ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದವರು ತಿಳಿಸಿದ್ದಾರೆ.

2026 ಆಯವ್ಯಯದಲ್ಲಿ ಅಬಕಾರಿ ನೀತಿಗೆ ಸಂಬಂಧಪಟ್ಟಂತೆ ಅವರು ಮಾಡಿದ ಪ್ರಸ್ತಾವನೆಗಳು ಹೀಗಿವೆ:

ಕರ್ನಾಟಕ ಅಬಕಾರಿ ಕಾಯ್ದೆಯು 60 ವರ್ಷಗಳ ಹಿಂದೆ ಜಾರಿಗೆ ತಂದಿದ್ದು, ಈ ಕಾಯ್ದೆಯ ಹಲವು ನಿಬಂಧನೆಗಳು ಪ್ರಸಕ್ತ ಕಾಲಮಾನಕ್ಕೆ ಹೊಂದಿಕೆಯಾಗುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ, ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವಿವಿಧ ಸನ್ನದುಗಳ ಮಾನ್ಯತೆಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ 7 ಹಂತಗಳಿಗೆ ಸರಳೀಕರಿಸಲಾಗಿದ್ದು, ಎರಡು ದಿನಗಳೊಳಗೆ ಅನುಮೋದನೆ ನೀಡಲಾಗುತ್ತಿದೆ.

ಅಬಕಾರಿ ಇಲಾಖೆಯಲ್ಲಿ ಜಾರಿಗೊಳಿಸಲಾದ ವರ್ಗಾವಣಾ ನಿಯಮಗಳನ್ವಯ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಮುಖ್ಯ ಪೇದೆ/ಪೇದೆಗಳ ಗ್ರೂಪ್-ಸಿ ವೃಂದದ ನೌಕಾರರ ವರ್ಗಾವಣೆಗಳನ್ನು ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಅಧೀಕ್ಷಕರುಗಳ ವರ್ಗಾವಣೆಯನ್ನು ಸಹ ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲು ಕ್ರಮವಹಿಸಲಾಗುವುದು.

ರಾಜ್ಯ ಸರ್ಕಾರ ರಚಿಸಿದ ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಹೊಸ ಅಬಕಾರಿ ತೆರಿಗೆ ಮತ್ತು ಮದ್ಯ ನಿಯಂತ್ರಣ ರೂಪುರೇಷೆಗಳನ್ನು ಒಳಗೊಂಡ ಕರಡು ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಪ್ರಸ್ತಾವಿತ ಸುಧಾರಣೆಗಳು ಪಾರದರ್ಶಕತೆಯನ್ನು ಬಲಪಡಿಸಿ, ಮದ್ಯ ನಿಯಂತ್ರಣ ಕ್ರಮಗಳನ್ನು ಕಾಲೋಚಿತವಾಗಿ ಸುಧಾರಿಸಲಿದೆ ಹಾಗೂ ರಾಜ್ಯದಾದ್ಯಂತ ಅಬಕಾರಿ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳನ್ನು ಸರಳೀಕರಿಸಲಿದೆ.

Karnataka Budget 2026: ಕೃಷಿ, ಹೈನುಗಾರಿಕೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಮದ್ಯಪಾನದ ದುಷ್ಪರಿಣಾಮಗಳು ಸಮಾಜದ ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು (Alcohol-in-Beverage – AIB) ಆಧರಿಸಿದ ತೆರಿಗೆ ಪದ್ದತಿಯು gold standard ಆಗಿದೆ. ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

ಅಬಕಾರಿ ಸುಂಕವು ಏಕರೂಪವಾಗಿರಲಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ex-factory ದರ ಪಟ್ಟಿಗಳ ಆಧಾರದ ಮೇಲೆ ವಿಧಿಸಲಾಗುವುದು. ಇದರಿಂದ ಮದ್ಯ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೆ, ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತ ಪಡಿಸಲಾಗುವುದು. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ನಾವು ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳುತ್ತೇವೆ.

Karnataka Budget 2026: ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷವಾಕ್ಯ: ಒಂದೇ ಸೂರಿನಡಿ ಶಿಕ್ಷಣ: ಮೂರು ವರ್ಷಗಳಲ್ಲಿ 3,900 ಕೋಟಿ ರೂ.ಗಳ ವೆಚ್ಚ

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ದರ ನಿಗದಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು.

ಅಬಕಾರಿ ಇಲಾಖೆಯು ಕೇವಲ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಅನುಸರಣೆಯ ಮೇಲೆ ಕೇಂದ್ರೀಕರಿಸಲಿದ್ದು, ಆರೋಗ್ಯ ಇಲಾಖೆಯು ಮದ್ಯಪಾನದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳು, ಆರೋಗ್ಯ ಕಾರ್ಯಕ್ರಮಗಳು, ಮದ್ಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ನಿರ್ವಹಿಸಲಿದೆ.

ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ಡ್ ಇ-ಲಾಕ್ (geo-fenced e-lock systems) ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ಕ್ರಮಗಳು real-time ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸುವ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ.

Karnataka Budget 2026: ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಕೋಲಾರ, ವಿಜಯಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು

ಉತ್ಪಾದನಾ ಸನ್ನದುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುವುದು. ಲೇಬಲ್ ಅನುಮೋದನೆಗಳು, CL-5 (ಸಾಂದರ್ಭಿಕ ಸನ್ನದುಗಳು) ಮತ್ತು RVB ಸನ್ನದುಗಳು (ಐದು ವರ್ಷಗಳ ಅವಧಿಗೆ) ಆನ್‌ಲೈನ್ನಲ್ಲಿ ಸ್ವಯಂ ಘೋಷಣೆ ಮತ್ತು ಶುಲ್ಕ ಪಾವತಿಯ ಷರತಿಗೊಳಪಟ್ಟು, ಯಾವುದೇ ಹಸ್ತಕ್ಷೇಪವಿಲ್ಲದೆ deemed approval ವ್ಯವಸ್ಥೆಯಡಿ ಅನುಮೋದಿಸಲಾಗುವುದು. ಡಿಸ್ಟಿಲರಿಗಳು ಮತ್ತು ಬ್ರೂವರಿಗಳಿಗೆ 24 ಗಂಟೆಗಳ ಕಾರ್ಯಾಚರಣೆ ಮತ್ತು ರವಾನೆ ಮಾಡಲು ಅನುಮತಿ ನೀಡಲಾಗುತ್ತದೆ. ಬಿಯರ್ ಲೇಬಲ್‌ಗಳಲ್ಲಿ ಮಾಲ್ಟ್ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸುವ ಅಗತ್ಯತೆಯನ್ನು ರದ್ದುಗೊಳಿಸಲಾಗುವುದು.

ಮದ್ಯ ವಲಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಡಿಸ್ಟಿಲರಿಗಳು ಮತ್ತು ಬ್ರೂವರಿಗಳು ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ್ಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು.

ಸಂಪನ್ಮೂಲ ಕ್ರೋಢೀಕರಣ ಸಮಿತಿಯ ಕರಡು ವರದಿಯನ್ನು ಶೀಘ್ರದಲ್ಲೇ ಸಾರ್ವಜನಿಕ ಸಮಾಲೋಚನೆಗಾಗಿ ಇಡಲಾಗುವುದು. ಮೇಲೆ ತಿಳಿಸಲಾದ ಕ್ರಮಗಳ ಹೊರತಾಗಿ, ಶಾಸಕಾಂಗ ಅನುಮೋದನೆ ಅಗತ್ಯವಿರುವ ಸುಧಾರಣೆಗಳನ್ನು ಸಮಗ್ರವಾಗಿ ಹೊಸ ಅಬಕಾರಿ ಮಸೂದೆಯಲ್ಲಿ ಪರಿಚಯಿಸಲಾಗುವುದು. ಇದರಿಂದ ಅಬಕಾರಿ ವಲಯದಲ್ಲಿ ಪಾರದರ್ಶಕತೆ ತರಲು ಮತ್ತು Ease of Doing Business ಹೆಚ್ಚಿಸಲು ಸಹಕಾರಿಯಾಗಲಿದೆ.

2025-26ನೇ ಸಾಲಿನಲ್ಲಿ ಫೆಬ್ರವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ ಒಟ್ಟು 36,492 ಕೋಟಿ ರೂ.ಗಳ ರಾಜಸ್ವ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.12.7ರಷ್ಟು ಬೆಳವಣಿಗೆಯಾಗಿದೆ. 2026-27ನೇ ಸಾಲಿಗೆ 45,000 ಕೋಟಿ ರೂ.ಗಳ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ.