ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ; ಚುನಾವಣಾ ಆಯೋಗಕ್ಕೆ ಶಿಫಾರಸು

CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ (ಸೆಪ್ಟೆಂಬರ್ 4) ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಶಿಫಾರಸು

-

Ramesh B Ramesh B Sep 4, 2025 11:32 PM

ಬೆಂಗಳೂರು: ಇತ್ತೀಚೆಗೆ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬದಲಾವಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಇಲ್ಲದವರ ಹೆಸರು ಸೇರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜತೆಗೆ ಮತಗಳ್ಳತನ ಚರ್ಚೆ ಮಾತು ನಡೆಯುತ್ತಿದೆ. ಅಲ್ಲದೆ ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆ ಆಗುತ್ತಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಒಪ್ಪಿಗೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಸೆಪ್ಟೆಂಬರ್ 4) ಸಚಿವ ಸಂಪುಟ ಸಭೆ ನಡೆಯಿತು.

ʼʼಇತ್ತೀಚೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿ ವ್ಯತ್ಯಾಸಗಳಾಗಿರುವುದನ್ನು ಜನ ಕಂಡುಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ದೂರುಗಳು ಬಂದಿವೆ. ಇದನ್ನು ಗಮನಿಸಿ ಜನರ ಅಭಿಪ್ರಾಯದ ಹಿನ್ನೆಲೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆಯಾಗಬೇಕು ಎಂದು ಶಿಫಾರಸು ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆʼʼ ಎಂಬುದಾಗಿ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

ʼʼಚುನಾವಣಾ ಆಯೋಗ ಹೇಗಿರಬೇಕು, ಏನು ಮಾಡಬೇಕು ಎನ್ನುವ ಬಗ್ಗೆ ಕಾನೂನು ಇದೆ. ರಾಜ್ಯ ರಚಿಸಿರುವ ಕಾನೂನಿನ ಅನ್ವಯ ಅದು ಕಾರ್ಯನಿರ್ವಹಿಸುತ್ತದೆ. ಮುಂದಿನ 15 ದಿನಗಳಲ್ಲಿ ಅಗತ್ಯವಿರುವ ಕಾನೂನು ಬದಲಾವಣೆಗಳನ್ನು ಮಾಡಲಾಗುವುದು. ಯಾವುದೇ ಬದಲಾವಣೆಯಾದರೂ ಅದು ಸಚಿವ ಸಂಪುಟಕ್ಕೆ ಬಂದು ರಾಜ್ಯಪಾಲರಿಗೆ ಹೋಗಬೇಕುʼʼ ಎಂದರು.



ಈ ಸುದ್ದಿಯನ್ನೂ ಓದಿ: CM Siddaramaiah: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ ಚಿಟ್‌

ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು

  • ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅಗತ್ಯ ಪರಿಷ್ಕರಣೆ ಮಾಡಲು ಕಾನೂನು ತಿದ್ದುಪಡಿ ಮತ್ತು ನಿಯಮಾವಳಿ ರಚನೆ ಮಾಡಲು ಹಾಗೂ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಈ ಹಿಂದೆ ವಿಧಾನಸಭೆ ಚುನಾವಣೆಯ ಡಾಟಾವನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಮತದಾರ ಪಟ್ಟಿಯನ್ನು ಪರಿಷ್ಕರಣೆ, ತಿದ್ದುಪಡಿ, ಪುನರ್ರಚನೆ ಮಾಡಿ, ಉತ್ತಮ ಗುಣಮಟ್ಟದ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ತಯಾರು ಮಾಡಿಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಶಿಫಾರಸನ್ನು ಮಾಡಲು ಹಾಗೂ ಚುನಾವಣಾ ಪದ್ಧತಿಯನ್ನೂ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಾದ ಕೆಲವು ಕಾನೂನು ಹಾಗೂ ನಿಯಮಾವಳಿಗಳನ್ನು ತಿದ್ದುಪಡಿಗಳನ್ನು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ರಾಜ್ಯ ಚುನಾವಣಾ ಆಯೋಗ ಸ್ವಾತಂತ್ರ ಸಂಸ್ಥೆಯಾಗಿದ್ದು, ಚುನಾವಣಾ ಪಟ್ಟಿ ತಯಾರು ಮಾಡುವ ಜವಾಬ್ದಾರಿ ಅದರದ್ದೇ ಆಗಿದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 165ನೇ ಪರಿಚ್ಛೇಧ ಹಾಗೂ ಮುನಿಸಿಪಾಲಿಟಿ ಕಾಯ್ದೆಯ 14ನೇ ಪರಿಚ್ಛೇಧದಡಿ ಮತ್ತು ಜಿಬಿಎ ಕಾಯ್ದೆಯ 35 ಪರಿಚ್ಛೇಧದಡಿ ಚುನಾವಣೆಗಳು ಹೇಗೆ ನಡೆಯಬೇಕೆಂದು ವಿವರಿಸುತ್ತವೆ. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಹೊಸ ನಿಯಮಗಳನ್ನು ಹಾಗೂ ಚುನಾವಣಾ ಪ್ರಕ್ರಿಯೆ ಪದ್ಧತಿಗಳನ್ನು ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ಹೊಸದಾಗಿ 6 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ ಹಾಗೂ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ 956.67 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಅನುಮೋದನೆಗೆ ನಿರ್ಧಾರ.
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕೆಂಗೇರಿಯ 60 ಎಂ.ಎಲ್.ಡಿ. ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 80 ಎಂ.ಎಲ್.ಡಿ. ಸಾಮರ್ಥ್ಯಕ್ಕೆ ಉನ್ನತೀಕರಿಸಲು, ಉಪಕರಣಗಳನ್ನು 28.88 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಳವಡಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳಗೊಂಡನಹಳ್ಳಿ, ಕುರುಬರಹಳ್ಳಿ, ಅಣ್ಣಿಗೆರೆ ಮತ್ತು ವೈ.ಮಲ್ಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಕಾಮಗಾರಿಗಳಿಗೆ ಅಗತ್ಯವಿರುವ ಸುಮಾರು 221 ಎಕರೆ 01.12 ಗುಂಟೆ ಜಮೀನನ್ನು 77.35 ಕೋಟಿ ರೂ. ಮೊತ್ತದಲ್ಲಿ ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.
  • ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆಯನ್ನು 179.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ.
  • ನಗರಾಭಿವೃದ್ಧಿ ಇಲಾಖೆಯಡಿ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರ ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಎರಡು ಕಾರಿಡಾರ್ಗಳಲ್ಲಿ 37.121 ಕಿ.ಮೀ.ಗಳ ಉದ್ದದ ಡಬಲ್ ಡೆಕ್ಕರ್ ನಿರ್ಮಾಣದಲ್ಲಿ, ಮೆಟ್ರೋ ವಯಾಡಕ್ಟ್ ಜತೆಗೆ ಎಲಿವೇಟೆಡ್ ರಸ್ತೆಯನ್ನು 9,700 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಒದಗಿಸಿದ 4,000 ಕೋಟಿ ರೂ. ಅನುದಾನ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ.
  • ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆಯಿಂದ ನಗರಸಭೆಯನ್ನು ರಚಿಸಿ ʼಸಿಂಧಗಿ ನಗರಸಭೆʼ ಪ್ರದೇಶವೆಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ.
  • ಬೆಳಗಾವಿ ಜಿಲ್ಲೆಯ ಹಾಲಿ ಸವದತ್ತಿ ಯಲ್ಲಮ್ಮಾ ಪುರಸಭೆಯಿಂದ ನಗರಸಭೆಯನ್ನು ರಚಿಸಿ ʼಸವದತ್ತಿ ಯಲ್ಲಮ್ಮ ನಗರಸಭೆʼ ಪ್ರದೇಶವೆಂದು ಉದ್ಘೋಷಿಸಲು ನಿರ್ಣಯ.
  • ಬೀದರ್ ಜಿಲ್ಲೆಯ ಹಾಲಿ ಹುಮನಾಬಾದ್ ಪುರಸಭೆಯಿಂದ ನಗರಸಭೆಯನ್ನು ರಚಿಸಿ ʼಹುಮನಾಬಾದ್ ನಗರಸಭೆʼ ಪ್ರದೇಶವೆಂದು ಉದ್ಘೋಷಿಸಲು ತೀರ್ಮಾನ.
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿವಿಧ 22 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆ ಮಾಡಲಾದ 160 ಕೋಟಿ ರೂ. ಒಳಗೊಂಡಂತೆ ಒಟ್ಟು 398.00 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.
  • ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) 2025 ಅನ್ನು ವಿಧಾನ ಮಂಡಲದ ಉಭಯಸದನಗಳಲ್ಲಿ ಮಂಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಅನುಮೋದಿಸಿದೆ
  • ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿದೇಯಕ 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿರುವ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನುಸರಣೀಯ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ (ABDM – HMS) ತಂತ್ರಾಂಶದ ಹಂತವಾರು ಅನುಷ್ಠಾನಕ್ಕಾಗಿ ತಾತ್ವಿಕ ಅನುಮೋದನೆ ಹಾಗೂ ವಿವಿಧ ಸೇವಾ ಪೂರೈಕೆದಾರರೊಂದಿಗೆ ಪ್ರತಿ ವಹಿವಾಟಿನ ಪಾವತಿ ಆಧಾರದ ಮೇಲೆ ಮೊದಲನೇ ಹಂತದ ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಣಯಿಸಲಾಗಿದೆ.
  • ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತೀವ್ರ ನಿಗಾ ಘಟಕ ನಿರ್ಮಾಣ ಕಾಮಗಾರಿಯನ್ನು 24.22 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
  • ಭಾರತ ಸರ್ಕಾರದ CTRAV ಯೋಜನೆ 2025 ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ (ಟಾಪ್-ಅಪ್) ರೂಪದಲ್ಲಿ ಪ್ರತಿ ಫಲಾನುಭವಿಗೆ 1 ಲಕ್ಷ ರೂ. ನೆರವು ಒದಗಿಸುವ ಪ್ರಸ್ತಾವನೆ- ಇದಕ್ಕಾಗಿ ಈಗಿರುವ ರಾಜ್ಯ ಅಪಘಾತ ಪೀಡಿತರ ಯೋಜನೆಗೆ ತಿದ್ದುಪಡಿ ಮಾಡುವುದನ್ನು ಹಾಗೂ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
  • ಕರ್ನಾಟಕ ಗೃಹ ಮಂಡಳಿಯು ಯಲಹಂಕ ತಾಲೂಕು ಜಾಲ-1 ಹೋಬಳಿ, ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮದಲ್ಲಿ ಭೂಸ್ವಾಧೀನಪಡಿಸಿರುವ ಜಮೀನಿನಲ್ಲಿ ಶೇಕಡಾ 50:50ರ ಅನುಪಾತದ ಪಾಲುದಾರಿಕೆಯಡಿ ಭೂಮಾಲೀಕರಿಗೆ Developed Bulk Land ನೀಡಲು ಹಾಗೂ ಮಂಡಳಿಯ ಪಾಲಿನ ಜಮೀನಿನಲ್ಲಿ ಖಾಸಗಿ ಡೆವಲಪರ್ಸ್‌ಗಳಿಂದ ಜಂಟಿ ಸಹಭಾಗಿತ್ವದಡಿಯಲ್ಲಿ ಇಂಟಿಗ್ರೇಟೆಡ್ ಹೈಟೆಕ್ ಟೌನ್ಶಿಪ್ ಅನ್ನು 2.930 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
  • ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 6.334.01ಲಕ್ಷ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲು ಹಾಗೂ ಹೆಚ್ಚುವರಿ ಮೊತ್ತ 8,96.21 ಲಕ್ಷ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಲಾದ ಮೊತ್ತದಲ್ಲಿ ಭರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
  • ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಾಗೂ ರಾಜ್ಯ ಸರ್ಕಾರದ ಅನುದಾನದೊಂದಿಗೆ ಆರಂಭಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಣಯ.
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿ ನಿಲಯಗಳನ್ನು ರಾಜ್ಯದ 14 ಜಿಲ್ಲೆಗಳಲ್ಲಿ 15.45 ಕೋಟಿ ರೂ. ಮೊತ್ತದಲ್ಲಿ ಹೊಸದಾಗಿ ಪ್ರಾರಂಭಿಸಲು ಅನುಮೋದನೆ.
  • ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು 147.50 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.
  • ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಿಂದ ಬೇರ್ಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.