ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದ ಸಾರಿಗೆ ನೌಕರರು; ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್: ಇಂದು ಏನೇನಾಯ್ತು?

Bengaluru Chalo Protest: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದ್ದಾರೆ.

ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದ ಸಾರಿಗೆ ನೌಕರರು

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 19, 2026 7:40 PM

ಬೆಂಗಳೂರು, ಫೆ. 19: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ (Bengaluru Chalo Protest) ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ಗುರುವಾರ (ಫೆಬ್ರವರಿ 19) ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದ್ದಾರೆ. ಆಗಲೂ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಮುಷ್ಕರ ಮುಂದುವರಿಸುವುದಾಗಿ ತಿಳಿಸಿದ್ದಾರೆ.

38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡುವುದಾಗಿ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಜತೆಗೆ ವೇತನ ಪರಿಷ್ಕರಣೆಗೂ ಒಪ್ಪಿಕೊಂಡಿದೆ. ಆದರೂ ಇದು ಸಾರಿಗೆ ನೌಕರರಿಗೆ ತೃಪ್ತಿ ತಂದಿಲ್ಲ.

ಬೇಡಿಕೆ ಏನು?

ಪೂರ್ಣ 38 ತಿಂಗಳ ಹಿಂಬಾಕಿ ಹಣ ನೀಡಬೇಕೆಂದು ನೌಕರರು ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಎಸ್​ಆರ್​ಟಿಸಿ ಎಂಡಿ ಅಕ್ರಮ್ ಪಾಷಾ ನೌಕರರ ಜತೆ ಈ ಬಗ್ಗೆ ಚರ್ಚಿಸಿದರು. ಬಳಿಕ ಅಂತಿಮವಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ಮತ್ತೆ ಪ್ರತಿಭಟನೆಯ ಎಚ್ಚರಿಕೆ

ಕರ್ನಾಟಕ ರಾಜ್ಯ ಸಾರಿಗೆ ನೌಕರರು ಸದ್ಯ ತತ್ಕಾಲಿಕವಾಗಿ ಮುಷ್ಕರ ಹಿಂಪಡೆಯುತ್ತಿರುವುದಾಗಿಯೂ ಮಾರ್ಚ್‌ 2ರೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿಯೂ ಜಂಟಿ ಕ್ರಿಯಾ ಸಮಿತಿ ಎಚ್ಚರಿಸಿದೆ. ʼʼದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳು, ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮಾರ್ಚ್ 2ರೊಳಗೆ ಈಡೇರಿಸಬೇಕು.‌ ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತದೆ. ಮಾರ್ಚ್‌ 2ರ ವೇಳೆಗೆ ಸರ್ಕಾರವು ನೌಕರರ ಪ್ರತಿನಿಧಿಗಳನ್ನು ಕರೆದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ಭರವಸೆ ನೀಡಬೇಕು. ಒಂದುವೇಳೆ ಸರ್ಕಾರ ಭರವಸೆ ನೀಡದಿದ್ದರೆ ಮಾರ್ಚ್‌ 2ರಿಂದಲೇ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆʼʼ ಎಂದು ಸಮಿತಿ ಮುಖಂಡರು ತಿಳಿಸಿದ್ದಾರೆ.

ಅದಾಗ್ಯೂ ಪ್ರತಿಭಟನೆನಿರತ ಕೆಲವರು ನಾಳೆಯಿಂದಲೇ ಮುಷ್ಕರ ಆರಂಭಿಸುವಂತೆ ಆಗ್ರಹಿಸಿದರು. ಪದೇ ಪದೆ ಗಡುವು ನೀಡುವುದು ಬೇಡ ಎಂದು ಹೇಳಿದರು. ಬಳಿಕ ಜಂಟಿ ಸಮಿತಿ ಸದಸ್ಯರ ಮಾತಿಗೆ ಒಲ್ಲದ ಮನಸ್ಸಿನಿಂದ ಸಾರಿಗೆ ನೌಕರರು ಮುಷ್ಕರ ವಾಪಾಸ್ ನಿರ್ಧಾರ ಸ್ವಾಗತಿಸಿದರು. ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರೂ ಗುರುವಾರ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ರಾಜ್ಯಾದ್ಯಂತ ಬಸ್‌ ಎಂದಿನಂತೆ ಸಂಚರಿಸಿದವು.

ʼʼ2024ರಿಂದ ವೇತನ ಪರಿಷ್ಕರಣೆ ಆಗಬೇಕೆನ್ನುವುದು ನಮ್ಮ ಕನಸಾಗಿತ್ತು. ಕಾರ್ಮಿಕ ಮುಖಂಡ ದಿವಂಗತ ಅನಂತ ಸುಬ್ಬರಾವ್ ಅವರ ಕನಸು ಕೂಡ ಇದೇ ಆಗಿತ್ತುʼʼ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ತಿಳಿಸಿದ್ದಾರೆ.

image

ಸರ್ಕಾರವು ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ಕೋರಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಾರ್ಚ್‌ 2ರವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ. ಅಲ್ಲಿಯವರೆಗೆ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಒಂದು ವೇಳೆ ಮಾರ್ಚ್‌ 2ರೊಳಗೆ ಸರ್ಕಾರ ಆದೇಶ ಹೊರಡಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ

ಡಿ.ಎಂ. ವಿಜಯ ಭಾಸ್ಕರ್‌, ಜಂಟಿ ಕ್ರಿಯಾ ಸಮಿತಿ ಮುಖಂಡ