ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಬಾಂಬೆ ಐಐಟಿಯಿಂದ ವಿನೂತನ ಕ್ರಮ; ಸೀಲಿಂಗ್‌ ಫ್ಯಾನ್‌ ಬದಲು ಗೋಡೆಗೆ ಅಳವಡಿಸುವ ಫ್ಯಾನ್‌ ಬಳಕೆ

IIT Bombay: ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಬಾಂಬೆ ಐಐಟಿ ವಿನೂತನ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ಕ್ಯಾಂಪಸ್‌ಗಳಲ್ಲಿನ ಸೀಲಿಂಗ್‌ ಪ್ಯಾನ್‌ ತೆಗೆದು ಗೋಡೆಗೆ ಅಳವಡಿಸುವ ಫ್ಯಾನ್‌ ಬಳಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಅದಾಗ್ಯೂ ಈ ಬಗ್ಗೆ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.

ಆತ್ಮಹತ್ಯೆ ತಡೆಗೆ ಕ್ಯಾಂಪಸ್‌ಗಳಲ್ಲಿ ಸೀಲಿಂಗ್‌ ಫ್ಯಾನ್‌ ಬ್ಯಾನ್‌?

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Sep 22, 2026 5:29 PM

ಮುಂಬೈ, ಸೆ. 22: ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಪೈಕಿ ಬಾಂಬೆ ಐಐಟಿ (IIT Bombay) ಕೂಡ ಒಂದು. ಇತ್ತೀಚೆಗೆ ಇಲ್ಲಿನ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ಸಿಕ್ಕಿಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯದ್ಯಂತ ಸುದ್ದಿಯಾಗಿತ್ತು. ಜತೆಗೆ ಕೆಲವು ಸಮಯಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜ್‌ ಆಡಳಿತ ಮಂಡಳಿ ವಿನೂತನ ಕ್ರಮ ಜಾರಿಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಅದರ ಭಾಗವಾಗಿ ಕ್ಯಾಂಪಸ್‌ಗಳಲ್ಲಿನ ಸೀಲಿಂಗ್‌ ಪ್ಯಾನ್‌ ತೆಗೆದು ಗೋಡೆಗೆ ಅಳವಡಿಸುವ ಫ್ಯಾನ್‌ ಬಳಸಲು ಮುಂದಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೆಪ್ಟೆಂಬರ್‌ 18ರಂದು ಮಹಾರಾಷ್ಟ್ರದ ಜಿಲ್ಲೆಯ ಯವತ್ಮಾಲ್‌ ನಿವಾಸಿ, 22 ವರ್ಷದ ವಿದ್ಯಾರ್ಥಿ ಸಾಹಿಲ್‌ ವಾಕೋಡೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪರೀಕ್ಷೆ ವೇಳೆ ಅವರು ಅನಧಿಕೃತವಾಗಿ ಮೊಬೈಲ್‌ ಇಟ್ಟುಕೊಂಡು ಪ್ರಶ್ನೆಪತ್ರಿಕೆಯನ್ನೇ ಚಾಟ್‌ಜಿಪಿಟಿಗೆ ಅಪ್‌ಲೋಡ್‌ ಮಾಡಿ ಸಿಕ್ಕಿಬಿದ್ದಿದ್ದರು. ಇದರಿಂದ ಅವಮಾನಿತರಾಗಿ ಪೊವಾಯಿಯಲ್ಲಿರುವ ಹಾಸ್ಟೆಲ್‌ ಕೊಠಡಿಯಲ್ಲಿ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು. ಇದರೊಂದಿಗೆ ಈ ವರ್ಷ ಬಾಂಬೆ ಐಐಟಿಯಲ್ಲಿ ನಡೆದ 3ನೇ ಆತ್ಮಹತ್ಯೆ ಇದಾಗಿತ್ತು. ಅಲ್ಲದೆ ಇನ್ನೂ 2 ಸಾವುಗಳು ಆತ್ಮಹತ್ಯೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್‌ ಗವಂಡೆ ಅವರ ಎಕ್ಸ್‌ ಪೋಸ್ಟ್‌:



ಮೊದಲ ಹಂತದ ಫ್ಯಾನ್‌ ತಲುಪಿತು

ಗೋಡೆಗೆ ಅಳವಡಿಸುವ ಫ್ಯಾನ್‌ನ ಮೊದಲ ಹಂತ ಕ್ಯಾಂಪಸ್‌ಗೆ ಬಂದು ತಲುಪಿದೆ. ಸದ್ಯದಲ್ಲೇ ಅಳವಡಿಕೆ ಕಾರ್ಯ ನಡೆಯಲಿದೆ. ಪುನರ್‌ನವೀಕರಣದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದ್ದರೂ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ತುರ್ತಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಸೀಲಿಂಗ್‌ ಫ್ಯಾನ್‌ಗಳನ್ನು ಬದಲಾಯಿಸುವ ನಿರ್ಧಾರ 2 ತಿಂಗಳ ಮೊದಲೇ ಕೈಗೊಳ್ಳಲಾಗಿತ್ತಾದರೂ ಪ್ರಪೋಸಲ್‌ ಇತ್ತೀಚೆಗಷ್ಟೇ ಅನುಮೋದನೆಗೊಂಡಿತ್ತು.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಐಐಟಿ ಬಾಂಬೆ ಪ್ರಾಧ್ಯಾಪಕ ಸೂರ್ಯನಾರಾಯಣ ಡೂಲ್ಲಾ ಅಮಾನತು

ನಿಜವಾಗಿಯೂ ಆತ್ಮಹತ್ಯೆ ತಡೆಗಟ್ಟುವ ಪ್ರಯತ್ನದ ಭಾಗವೇ?

ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆಡಳಿತ ಮಂಡಳಿ ಈ ಸುದ್ದಿಯನ್ನು ನಿರಾಕಸಿಯೂ ಇಲ್ಲ ಸಮರ್ಥಿಸಿಕೊಂಡೂ ಇಲ್ಲ. ಒಟ್ಟಿನಲ್ಲಿ ಆಡಳಿತ ಮಂಡಳಿಯ ಈ ನಡೆ ಮಾತ್ರ ಭಾರಿ ಕುತೂಹಲ ಕೆರಳಿಸಿದ್ದಂತೂ ನಿಜ.

ವಿರೋಧ

ಸೀಲಿಂಗ್‌ ಫ್ಯಾನ್‌ ಕಿತ್ತು ಹಾಕುವ ಪ್ರಕ್ರಿಯೆಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ. ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್‌ ಗವಂಡೆ ಈ ಬಗ್ಗೆ ಮಾತನಾಡಿ, ಫ್ಯಾನ್‌ ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದಿದ್ದಾರೆ. ʼʼಸೀಲಿಂಗ್‌ ಫ್ಯಾನ್‌ ಬದಲಾಯಿಸುವುದರಿಂದ ದೇಶಾದ್ಯಂತ ನಡೆಯುತ್ತಿರುವ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ಬಾಂಬೆ ಐಐಟಿ ಚಿಂತಿಸುದೆಯಾ?ʼʼ ಎಂದು ಪ್ರಶ್ನಿಸಿದ್ದಾರೆ.

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 14 ದಿನ ವಾಸ್ತವ್ಯ ಹೂಡಿದ್ದ ನಕಲಿ ವಿದ್ಯಾರ್ಥಿ!

ಹಾಸ್ಟೆಲ್ ಫ್ಯಾನ್‌ಗೆ ಕಬ್ಬಿಣದ ಪಂಜರ ಅಳವಡಿಕೆ

ರಾಜಸ್ಥಾನದ ಕೋಟಾದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ತಡೆಯುವುದಕ್ಕಾಗಿ ಕೆಲವು ತಿಂಗಳ ಹಿಂದೆ ಹಾಸ್ಟೆಲ್‌ ಸೀಲಿಂಗ್ ಫ್ಯಾನ್‌ಗಳ ಸುತ್ತಲೂ ಕಬ್ಬಿಣದ ಪಂಜರ ಅಳವಡಿಸಲಾಗಿತ್ತು. ಕೋಟಾ ಹಾಸ್ಟೆಲ್‌ಗಳಿಂದ ರೆಕಾರ್ಡ್ ಆಗಿದ್ದ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವೈರಲ್ ಆದ ದೃಶ್ಯದಲ್ಲಿ ವಿದ್ಯಾರ್ಥಿ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳು ಕಬ್ಬಿಣದ ಗ್ರಿಲ್‌ಗಳೊಳಗೆ ಲಾಕ್ ಆಗಿರುವುದನ್ನು ತೋರಿಸಿದ್ದವು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.