ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Milk Price Hike: ರಾಜ್ಯದ ಜನತೆಗೆ ಬಿಗ್‌ ಶಾಕ್‌, ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆ

ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕಾರಣ ನೀಡಲಾಗಿದೆ.

ರಾಜ್ಯದ ಜನತೆಗೆ ಬಿಗ್‌ ಶಾಕ್‌, ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 27, 2025 2:32 PM

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ದೊಡ್ಡ ಶಾಕ್ ನೀಡಿದ್ದು, ನಂದಿನಿ ಹಾಲಿನ (Nandini milk) ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ (Milk Price Hike) ಮಾಡಿದೆ. ಈ ನಿರ್ಧಾರಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್‌ (KMF) ನಂದಿನಿ ಹಾಲಿನ ದರ 4 ರೂ. ಏರಿಕೆಗೆ ಅನುಮೋದನೆ ದೊರೆತಿದೆ ಎಂದು ಗೊತ್ತಾಗಿದೆ. ವಿವಿಧ ದರ ಏರಿಕೆಗಳಿಂದ ತತ್ತರಿಸುತ್ತಿರುವ ರಾಜ್ಯದ ಜನತೆಯ ಮೇಲೆ ಸರ್ಕಾರ ಈ ಮೂಲಕ ಇನ್ನೊಂದು ಹಾವು ಎಸೆದಿದೆ.

ಕೆಲ ದಿನಗಳ ಹಿಂದೆ ರಾಜ್ಯದ ರೈತರು ಕೆಎಂಎಫ್ ಮುಂದೆ ಹಾಲಿನ ದರ ಏರಿಸುವಂತೆ ಪ್ರತಿಭಟನೆ ನಡೆಸಿದ್ದರು. ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್‌ಗೆ ಒತ್ತಡ ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ರಾಜ್ಯ ಸರ್ಕಾರಕ್ಕೆ ಕೆಎಂಎಫ್‌ ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಕಳಿಸಿತ್ತು.

ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದ ನಂದಿನಿ ಹಾಲಿನ ಬೆಲೆ ತುಂಬಾ ಕಡಿಮೆಯಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ವರ್ಷ ಜೂನ್‌ನಲ್ಲಷ್ಟೇ ಕೆಎಂಎಫ್‌, ಪ್ರತಿ ಲೀಟರ್‌ಗೆ 2 ರೂಪಾಯಿ ಹಾಲಿನ ದರ ಏರಿಕೆ ಮಾಡಿತ್ತು. 2024ರ ಜೂನ್‌ 26ರಿಂದ ಅನ್ವಯವಾಗುವಂತೆ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ನಂದಿನಿ ಬ್ರ್ಯಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಗ್ರಾಹಕರು ಕೊಡುವ 2 ರೂ. ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ 50 ಎಂಎಲ್‌ ಹೆಚ್ಚುವರಿ ಹಾಲು ನೀಡಲಾಗುತ್ತಿದೆ.

ಈಗಾಗಲೇ ರಾಜ್ಯ ಸರ್ಕಾರ ಕೆಎಸ್ಆರ್‌ಟಿಸಿ ಬಸ್‌ ಟಿಕೆಟ್‌ ದರ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಿದೆ. ಜೊತೆಗೆ ವಿದ್ಯುತ್‌ ದರವನ್ನು ಕೂಡ ತುಸು ಹೆಚ್ಚಿಸಿ ಆ ಮೂಲಕ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಮತ್ತೆ ನಂದಿನಿ ಹಾಲಿನ ದರ 4 ರೂ. ಏರಿಕೆ ಮಾಡಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಇದನ್ನೂ ಓದಿ: Nandini Milk: ಇನ್ನು ಉತ್ತರ ಪ್ರದೇಶದಲ್ಲೂ ಸಿಗುತ್ತೆ ನಂದಿನಿ ಹಾಲು, ಹತ್ರಾಸ್‌ನಲ್ಲಿ ಪ್ಲಾಂಟ್‌ ಶುರು