Booker Prize 2025: ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್: ಇವರ ಬಗ್ಗೆ ನಿಮಗಿವು ತಿಳಿದಿರಲಿ
Booker Prize 2025: 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ 'ಹಸೀನಾʼ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧರಿಸಿದ ಈ ಕತೆಗಳು ಇದೀಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ.

ದೀಫಾ ಭಸ್ತಿ, ಬಾನು ಮುಷ್ತಾಕ್

ಇದು ಕನ್ನಡ ಮಾತೆಯ ಕೀರ್ತಿ ಕಿರೀಟಕ್ಕೆ ಗರಿ ಏರಿದ ಹೆಮ್ಮೆಯ ಕ್ಷಣ. ಕನ್ನಡ (Kannada) ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ ಗಳಿಗೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರ (International Booker Prize 2025) ಈ ಕನ್ನಡದ ಕತೆಗಾರ್ತಿ, ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರಿಗೆ ಸಂದಿದೆ. ಬಾನು ಮುಷ್ತಾಕ್ ಅವರ ʼಹಸೀನಾ ಮತ್ತು ಇತರ ಕತೆಗಳುʼ ಸಣ್ಣಕತೆಗಳ ಸಂಕಲನದ ಇಂಗ್ಲಿಷ್ ಅನುವಾದ ʼಹಾರ್ಟ್ ಲ್ಯಾಂಪ್ʼಗೆ ಬೂಕರ್ ಪ್ರಶಸ್ತಿ ದೊರೆತಿದೆ. ಇದು ಕನ್ನಡಕ್ಕೆ, ಕನ್ನಡದ ಕತೆಗಾರ್ತಿಗೆ, ಕನ್ನಡದ ಕತೆಗಳಿಗೆ ದೊರೆತಿರುವ ಮೊದಲ ಬೂಕರ್ ಪ್ರಶಸ್ತಿ. ಕನ್ನಡ- ಕರ್ನಾಟಕದ ಹೆಮ್ಮೆಯ ಮಗಳು, ಹಾಸನದ ತವರಿನ ತಾರೆ ಬಾನು ಮುಷ್ತಾಕ್ ಅವರಿಗೂ ಕನ್ನಡಿಗರಿಗೂ ಇದು ಸಂಭ್ರಮದ ಕ್ಷಣ.
ಪತ್ರಕರ್ತೆ ದೀಪಾ ಭಸ್ತಿ ಅವರು ಬಾನು ಮುಷ್ತಾಕ್ ಅವರ ಸಣ್ಣಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಈ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಮೇ 21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಇಂಟರ್‌ನ್ಯಾಷನಲ್ ಬೂಕರ್ ಪ್ರಶಸ್ತಿ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದ್ದು, ವಿಜೇತರಿಗೆ 50,000 ಪೌಂಡ್ ಬಹುಮಾನ ಅಂದರೆ, 57.48 ಲಕ್ಷ ರೂಪಾಯಿಗಳು ಸಿಗಲಿವೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ. ಬಾನು ಮುಷ್ತಾಕ್ ಅವರು ತಮ್ಮ ಕತೆಗಳ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಈ ಸಂದರ್ಭದಲ್ಲಿ ಅಲ್ಲಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದರು. 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧರಿಸಿದ ಈ ಕತೆಗಳು ಇದೀಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ.
ಯಾರಿಗೆ ಕೊಡ್ತಾರೆ ಬೂಕರ್?
ಬೂಕರ್ ಪ್ರಶಸ್ತಿಯಲ್ಲಿ ಎರಡು ವಿಧಗಳಿವೆ. ಒಂದು ಬೂಕರ್ ಪ್ರಶಸ್ತಿ. ಇನ್ನೊಂದು ಇಂಟರ್‌ನ್ಯಾಷನಲ್ ಬೂಕರ್ ಪ್ರಶಸ್ತಿ. ಬೂಕರ್ ಪ್ರಶಸ್ತಿ 1969ರಲ್ಲಿ Man Booker Prize ಎಂಬ ಹೆಸರಿನಿಂದ ಆರಂಭವಾಯಿತು. ಇಂಗ್ಲಿಷ್‌ನಲ್ಲೇ ರಚನೆಯಾದ ಹಾಗೂ ಬ್ರಿಟನ್‌ನಲ್ಲಿ ಪ್ರಕಟವಾದ ಕೃತಿಗೆ ಈ ಬಹುಮಾನ ನೀಡಲಾಗುತ್ತದೆ. ಅದನ್ನೇ 'ಬೂಕರ್ ಅವಾರ್ಡ್' ಎನ್ನಲಾಗುತ್ತದೆ. ಎರಡನೆಯದು Man Booker International Prize. ಇದನ್ನು 2005ರಲ್ಲಿ ಆರಂಭಿಸಲಾಯಿತು. ಇದು ಬೇರೆ ಯಾವುದೇ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದವಾಗಿರುವ, ಬ್ರಿಟನ್‌ನಲ್ಲಿ ಪ್ರಕಟವಾಗಿರುವ ಕೃತಿಗೆ ಕೊಡಲಾಗುತ್ತದೆ. ಮೂಲ ಲೇಖಕರು ಹಾಗೂ ಅನುವಾದಕರಿಗೆ ಬಹುಮಾನದ ಹಣವನ್ನು ಹಂಚಲಾಗುತ್ತದೆ. ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ಅವರಿಗೆ ʼಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ" ಸಂದಿದೆ. ಕನ್ನಡದ ಕೃತಿಗೆ ಹಾಗೂ ಸಣ್ಣಕತೆಗಳ ಸಂಕಲನಕ್ಕೆ ಇದೇ ಮೊದಲ ಬಾರಿಗೆ ಈ ಪುರಸ್ಕಾರ ದೊರೆಯುತ್ತಿದೆ.
ಬಾನು ಮುಷ್ತಾಕ್ ಯಾರು?
ಕನ್ನಡದ ಸಾಹಿತ್ಯಾಸಕ್ತರಿಗೆ ಬಾನು ಮುಷ್ತಾಕೆ ಹೆಸರು ಚಿರಪರಿಚಿತ. ಇವರ ಕೃತಿಳು ಸಿನಿಮಾ ಕೂಡ ಆಗಿವೆ. ಮೂಲತಃ ಹಾಸನದವರೇ ಆದ ಬಾನು ಮುಷ್ತಾಕ್ ಬೆಳೆದದ್ದು ಹಾಸನದಲ್ಲಿ. 1954 ಏಪ್ರಿಲ್ 03ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಅರಸೀಕೆರೆಯಲ್ಲಿ ಶಾಲೆಗೆ ಸೇರಿದ ಬಾನು ಮುಷ್ತಾಕ್‌ಗೆ ಉರ್ದು ತಲೆಗೆ ಹೋಗಲಿಲ್ಲ. ಹೀಗಾಗಿ ಅವರ ಪೋಷಕರು ಕನ್ನಡವನ್ನಾದರೂ ಕಲಿಯಲಿ ಎಂದು ಆಕೆಯನ್ನು ಶಿವಮೊಗ್ಗದ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗೆ ಸೇರಿಸಿದರು. 8ನೇ ವಯಸ್ಸಿನಲ್ಲಿ ಕನ್ನಡ ಭಾಷೆಯ ಮಿಷನರಿ ಶಾಲೆಗೆ ಸೇರಿದ ಅವರು ಆರು ತಿಂಗಳಲ್ಲಿ ಕನ್ನಡ ಓದಲು ಮತ್ತು ಬರೆಯಲು ಪಟ್ಟು ಹಿಡಿದು ಕಲಿತರು. ಆನಂತರ ಬಿಎಸ್ಸಿ, ಎಲ್‌ಎಲ್‌ಬಿವರೆಗೂ ತಮ್ಮ ವ್ಯಾಸಂಗ ಪೂರ್ಣಗೊಳಿಸಿದರು.
ವಕೀಲೆಯಾಗಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಅಚ್ಚರಿಯ ಕತೆ. ಪ್ರಗತಿಪರ ಚಳವಳಿಗಳಿಂದ ಪ್ರೇರಿತರಾಗಿ ಇವರು ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಒಬ್ಬರು ಮುಸ್ಲಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸಿದ್ದ ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಪತ್ರಕರ್ತೆಯಾಗಿಯೂ ಮಾಧ್ಯಮ ಲೋಕಕ್ಕೆ ಪದಾರ್ಪಣೆ ಮಾಡಿದರು. ಬಾಲ್ಯದಲ್ಲೇ ಬರವಣಿಗೆಯನ್ನು ರೂಢಿಸಿಕೊಂಡಿದ್ದ ಬಾನು ಅವರ ಗದ್ಯದ ಸಂದರ್ಯವನ್ನು ಗುರುತಿಸಿದ ಪಿ. ಲಂಕೇಶ್, ತಮ್ಮ ಪತ್ರಿಕೆಯಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಿದರು. ಇಲ್ಲಿ ಕತೆಗಳನ್ನು ಅಂಕಣಗಳನ್ನು ಬರೆಯತೊಡಗಿದ ಬಾನು ಅವರನ್ನು ಕನ್ನಡ ಸಾಹಿತ್ಯ ಲೋಕ ಗುರುತಿಸಿತು. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಗಾಗಿ 9 ವರ್ಷ ಸೇವೆ ಸಲ್ಲಿಸಿದರು.
ಮುಂದೆ ವೃತ್ತಿಯಲ್ಲಿ ವಕೀಲರಾದ ಬಾನು ಮುಷ್ತಾಕ್ ಅವರು, ಕತೆಗಳನ್ನು ಬರೆಯತೊಡಗಿದರು. ಕಥೆ, ಕಾದಂಬರಿಗಳು, ಪ್ರಬಂಧಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಅವರ ಕೃತಿಗಳು ಉರ್ದು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಪ್ರಕಟವಾಗಿವೆ. ಬಾನು ಸಾಮಾಜಿಕ ಕಾರ್ಯಕರ್ತೆ, ಮಹಿಳಾಪರ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆಯಾಗಿಯೂ ಗಮನ ಸೆಳೆದರು. ಶೋಷಣೆಗೆ ಒಳಗಾದ ಮುಸ್ಲಿಂ ಮಹಿಳೆಯರ ಪರವಾಗಿ ತಮ್ಮ ಧ್ವನಿ ಎತ್ತಿದರು. ಇಂಥ ಸಾಕಷ್ಟು ಮಹಿಳೆಯರ ಕೇಸ್ಗಳನ್ನು ಕೆಲವೊಮ್ಮೆ ಉಚಿತವಾಗಿ ವಾದಿಸಿ ನ್ಯಾಯ ಕೊಡಿಸಿದರು.
ಹಾರ್ಟ್ ಲ್ಯಾಂಪ್ ಅವರ ಮೊದಲ ಪೂರ್ಣ ಪ್ರಮಾಣದ ಇಂಗ್ಲಿಷ್ ಅನುವಾದ. ಕುಬ್ರ, ಬಡವರ ಮಗಳು ಹೆಣ್ಣಲ್ಲ- ಅವರ ಕಾದಂಬರಿಗಳು. ಹೆಜ್ಜೆ ಮೂಡದ ಹಾದಿ, ಬೆಂಕಿಮಳೆ, ಎದೆಯ ಹಣತೆ ಇವು ಕಥಾಸಂಕಲನಗಳು. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಇದಕ್ಕೆ 3 ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಒಮ್ಮೆ ಹೆಣ್ಣಾಗು ಪ್ರಭುವೆ ನಾಟಕ ರೂಪಾಂತರಕ್ಕೆ ಇಂಟರ್ ನ್ಯಾಷನಲ್ ವುಮನ್ ಫಾರ್ ರೇಡಿಯೋ ಆ್ಯಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳು ಬಂದಿವೆ.
ಇನ್ನು ಬಾನು ಅವರು ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ, ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ, ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.
ದೀಪಾ ಭಸ್ತಿ ಯಾರು?
ದೀಪಾ ಭಸ್ತಿ ಕನ್ನಡ ಮೂಲದ ಇಂಗ್ಲಿಷ್ ಪತ್ರಕರ್ತೆ. ಮಡಿಕೇರಿಯಲ್ಲಿ ಜನಿಸಿದ ಇವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದರು. ನಂತರ ಪೂರ್ಣಪ್ರಮಾಣದ ಬರಹಗಾರ್ತಿಯಾಗಿ ಕಾರವಾನ್, ಟೈಮ್ಸ್ ಆಫ್ ಇಂಡಿಯಾ, ಸ್ಯಾಲ್, ಓಪನ್, ಹಿಮಾಲ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಬರೆದರು. ಅಂತಾರಾಷ್ಟ್ರೀಯ ಪತ್ರಿಕೆಗಳಾದ ಆರ್ಟ್ ರಿವ್ಯೂ, ದಿ ಗಾರ್ಡಿಯನ್, ಪ್ಯಾರಿಸ್ ರಿವ್ಯೂಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಸಾಹಿತ್ಯದ ಜೊತೆಗೆ ಕಲೆ, ಆಹಾರದ ವಿಮರ್ಶೆಗಳನ್ನೂ ಪುಕಟಿಸಿದ್ದಾರೆ. ದಿ ಫೋರೇಜರ್ ಎಂಬ ಆನ್‌ಲೈನ್ ಪತ್ರಿಕೆಯನ್ನೂ ಆರಂಭಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅನುವಾದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ದೀಪಾ, ಕನ್ನಡದ ಎರಡು ಕೃತಿಗಳನ್ನು ಈಗಾಗಲೇ ಅನುವಾದಿಸಿ ಗಮನ ಸೆಳೆದಿದ್ದಾರೆ. ಶಿವರಾಮ ಕಾರಂತರ ' ಅದೇ ಊರು, ಅದೇ ಮರ' ಹಾಗೂ ಕೊಡಗಿನ ಗೌರವಮ್ಮನವರ ಸಣ್ಣ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪರಿಚಯಿಸಿದ್ದಾರೆ. ಈಗ ಈ ಪಟ್ಟಿಗೆ ಬಾನು ಮುಷ್ತಾಕ್ ಅವರ 'ಹಸೀನಾ ಮತ್ತು ಇತರ ಕತೆಗಳು' ಸೇರಿದೆ. ಇದಕ್ಕೆ ಈ ಮೊದಲು ಇಂಗ್ಲಿಷ್‌ನ ʼಪೆನ್ ಪ್ರಶಸ್ತಿʼ ಕೂಡ ಬಂದಿತ್ತು.
ಭಾರತೀಯರಿಗೆ ಈ ಮೊದಲು ಬೂಕರ್ ಬಂದಿತ್ತಾ?
ಭಾರತೀಯ ಲೇಖಕರಿಗೆ ಈ ಮೊದಲು ಐದು ಬಾರಿ ಬೂಕರ್ ಪುರಸ್ಕಾರ ಸಂದಿದೆ. ವಿ.ಎಸ್. ನೈಪಾಲ್ 1971ರಲ್ಲಿ "ಇನ್ ಎ ಫ್ರೀ ಸ್ಟೇಟ್" ಕೃತಿಗೆ, ಸಲ್ಮಾನ್ ರಶ್ದಿ 1981ರಲ್ಲಿ "ಮಿಡ್‌ನೈಟ್ಸ್ ಚಿಲ್ಡ್ರನ್"ಗೆ, ಅರುಂಧತಿ ರಾಯ್ 1997ರಲ್ಲಿ "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್"ಗೆ, ಕಿರಣ್ ದೇಸಾಯಿ 2006ರಲ್ಲಿ "ದಿ ಇನ್ಹೆರಿಟೆನ್ಸ್ ಆಫ್ ಲಾಸ್"ಗೆ, ಅರವಿಂದ್ ಅಡಿಗ 2008ರಲ್ಲಿ "ದಿ ವೈಟ್ ಟೈಗರ್" ಕೃತಿಗೆ ಈ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಇವೆಲ್ಲವೂ ಮೂಲ ಇಂಗ್ಲಿಷ್‌ನಲ್ಲಿ ಬರೆದ ಕೃತಿಗಳು. ಇನ್ನು ಎರಡನೇದಾದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ 2022ರಲ್ಲಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿಯ ಅನುವಾದ "ಟೂಂಬ್ ಆಫ್ ಸ್ಯಾಂಡ್"ಗೆ ದೊರೆಯಿತು. ಗೀತಾಂಜಲಿ ಶ್ರೀ ಮತ್ತು ಅನುವಾದಕಿ ಡೈಸಿ ರಾಕ್‌ವೆಲ್ ಇದನ್ನು ಪಡೆದರು. 2023ರಲ್ಲಿ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ‘ಪೈರ್’ನ ಅನುವಾದ ಪ್ರಶಸ್ತಿಯ ಲಾಂಗ್ ಲಿಸ್ಟ್‌ನಲ್ಲಿದ್ದರೂ ಬಹುಮಾನ ದೊರೆತಿರಲಿಲ್ಲ.
ಈ ಸಲ ಶಾರ್ಟ್ ಲಿಸ್ಟ್‌ನಲ್ಲಿ ಯಾರ್ಯಾರು ಇದ್ರು?
ಬಾನು ಅವರ ʼಹಾರ್ಟ್ ಲ್ಯಾಂಪ್ʼ ಅಲ್ಲದೇ ಇನ್ನೂ ಐದು ಕೃತಿಗಳು ಶಾರ್ಟ್ ಲಿಸ್ಟ್‌ನಲ್ಲಿದ್ದವು. ಸೋಲ್ವೆಜ್ ಬಲ್ಲೆ ಅವರ ‘ಆನ್ ದಿ ಕ್ಯಾಲ್ಕುಲೇಷನ್ ಆಫ್ ವಾಲ್ಯೂಮ್ I’ (ಡ್ಯಾನಿಶ್‌ನಿಂದ ಬಾರ್ಬರಾ ಜೆ. ಹ್ಯಾವೆಲ್ಯಾಂಡ್ ಅನುವಾದಿಸಿದ್ದಾರೆ); ವಿನ್ಸೆಂಟ್ ಡೆಲೆಕ್ರೊಯಿಕ್ಸ್ ಅವರ ‘ಸ್ಮಾಲ್ ಬೋಟ್’ (ಫ್ರೆಂಚ್‌ನಿಂದ ಹೆಲೆನ್ ಸ್ಟೀವನ್ಸನ್ ಅನುವಾದಿಸಿದ್ದಾರೆ); ಹಿರೊಮಿ ಕವಾಕಾಮಿ ಅವರ ‘ಅಂಡರ್ ದಿ ಐ ಆಫ್ ದಿ ಬಿಗ್ ಬರ್ಡ್’ (ಜಪಾನೀಸ್‌ನಿಂದ ಆಸಾ ಯೊನೆಡಾ ಅನುವಾದಿಸಿದ್ದಾರೆ); ವಿನ್ಸೆಂಜೊ ಲ್ಯಾಟ್ರೊನಿಕೊ ಅವರ ‘ಪರ್ಫೆಕ್ಷನ್’ (ಇಟಾಲಿಯನ್‌ನಿಂದ ಸೋಫಿ ಹ್ಯೂಸ್ ಅನುವಾದಿಸಿದ್ದಾರೆ); ಮತ್ತು ಅನ್ನೆ ಸೆರ್ರೆ ಅವರ ‘ಎ ಲೆಪರ್ಡ್-ಸ್ಕಿನ್ ಹ್ಯಾಟ್’ (ಫ್ರೆಂಚ್‌ನಿಂದ ಮಾರ್ಕ್ ಹಚಿನ್ಸನ್ ಅನುವಾದಿಸಿದ್ದಾರೆ). ಭಾರತದ ಲೇಖಕಿ, ಮಹಿಳೆ ಹಾಗೂ ಮುಸ್ಲಿಂ ಹಿನ್ನೆಲೆಯ ಬರಹಗಾರ್ತಿ- ಈ ಎಲ್ಲ ಅಂಶಗಳಿಂದ ಹಾರ್ಟ್ ಲ್ಯಾಂಪ್ ತೀರ್ಪುಗಾರರ ಫೇವರಿಟ್ ಆಗಿತ್ತು.
ಇದನ್ನೂ ಓದಿ: Booker Prize 2025: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯ ಅಭಿನಂದನೆ