ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spoorthyvani: ಹೀಗೆ ಮಾಡಿದರೆ ಹಸಿವಾದಾಗ ಊಟ ಮಾಡುವುದೂ ಕರ್ಮಯೋಗವೇ ಆಗುತ್ತದೆ

ಒಂದು ಇರುವೆಯಿಂದ ಹಿಡಿದು ಬ್ರಹ್ಮನವರೆಗೆ ಎಲ್ಲರೂ ಕೆಲಸಗಳನ್ನು ಮಾಡಲೇಬೇಕು. ಯಾವ ವಿಧದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಇರುವ ಉತ್ತರವೆಂದರೆ; ನಿಮಗೆ ಎಲ್ಲ ಲೌಕಿಕ ಬಂಧಗಳಿಂದ ಮುಕ್ತಿಯನ್ನು ನೀಡುವ, ಸ್ವಾರ್ಥರಹಿತವಾಗಿ ನೆರವೇರಿಸಲ್ಪಟ್ಟ ಕರ್ಮಗಳು ಮಾತ್ರ ನಿಮಗೆ ಚಿತ್ತಶುದ್ಧಿಯನ್ನು ಸಂಪಾದಿಸಲು ನೆರವಾಗಿ ತ್ವರಿತವಾಗಿ ದೇವರ ದರ್ಶನವನ್ನು ನಿಮಗೆ ಅನುಗ್ರಹಿಸುತ್ತವೆ.

ಹೀಗೆ ಮಾಡಿದರೆ ಹಸಿವಾದಾಗ ಊಟ ಮಾಡುವುದೂ ಕರ್ಮಯೋಗವೇ ಆಗುತ್ತದೆ

-

Rakshita Karkera Rakshita Karkera Aug 31, 2025 6:00 AM

ಭಜನೆಯೊಂದು ದೇವರನ್ನು 'ಸುಲಭ ರಾಮಾ' (ಸುಲಭವಾಗಿ ಸಿಗುವಂಥವನು) ಮತ್ತು 'ದುರ್ಲಭ ರಾಮಾ' (ಅವನನ್ನು ಪಡೆಯುವುದು ಅಷ್ಟು ಸುಲಭವಲ್ಲ) ಎಂದು ವರ್ಣಿಸುತ್ತದೆ. ಈ ವೈರುಧ್ಯದ ವರ್ಣನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬಹುದು? ಪವಿತ್ರವಾದ ಮನಸ್ಸುಳ್ಳವರಿಗೆ ದೇವರ ತತ್ತ್ವವನ್ನು ತಿಳಿದುಕೊಳ್ಳುವುದು ಸುಲಭ, ಯಾರು ಅಪವಿತ್ರ ವಿಚಾರಗಳನ್ನು, ದ್ವೇಷಭಾವನೆಯನ್ನು ಮತ್ತು ಸ್ವಾರ್ಥಪೂರಿತ ಯೋಚನೆಗಳನ್ನು ತಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೋ ಅವರಿಗೆ ಎಷ್ಟು ಪ್ರಯತ್ನ ಮಾಡಿದರೂ ದೇವರ ತತ್ತ್ವವು ಅರ್ಥವಾಗುವುದಿಲ್ಲ ಎನ್ನುವುದು ಈ ಮಾತಿಗೆ ಇರುವ ಸಹಜ ಮತ್ತು ಸುಲಭದ ವಿವರಣೆ. ಯಾರ ಹೃದಯಗಳು ಪವಿತ್ರವಾಗಿರುತ್ತವೆಯೋ ಅಂಥವರನ್ನು ಮಾತ್ರವೇ ದೇವರು ಗುರುತಿಸಿ, ಆಯ್ಕೆ ಮಾಡಿಕೊಳ್ಳುತ್ತಾನೆ.

ನಮ್ಮ ಸಂಸ್ಕೃತಿಯಲ್ಲಿ, "ಚಿತ್ತಸ್ಯ ಶುದ್ಧಯೇ ಕರ್ಮ (ವಿವೇಕಚೂಡಾಮಣಿ 11)" - ಕರ್ಮಗಳು ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತವೆ ಎಂದು ನಾವು ನಂಬುತ್ತೇವೆ. ಈ ಜಗತ್ತನ್ನು 'ಕರ್ಮಭೂಮಿ' ಎಂದು ಕರೆದಿದ್ದಾರೆ. ಒಂದು ಇರುವೆಯಿಂದ ಹಿಡಿದು ಬ್ರಹ್ಮನವರೆಗೆ ಎಲ್ಲರೂ ಕೆಲಸಗಳನ್ನು ಮಾಡಲೇಬೇಕು. ಯಾವ ವಿಧದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಇರುವ ಉತ್ತರವೆಂದರೆ; ನಿಮಗೆ ಎಲ್ಲ ಲೌಕಿಕ ಬಂಧಗಳಿಂದ ಮುಕ್ತಿಯನ್ನು ನೀಡುವ, ಸ್ವಾರ್ಥರಹಿತವಾಗಿ ನೆರವೇರಿಸಲ್ಪಟ್ಟ ಕರ್ಮಗಳು ಮಾತ್ರ ನಿಮಗೆ ಚಿತ್ತಶುದ್ಧಿಯನ್ನು ಸಂಪಾದಿಸಲು ನೆರವಾಗಿ ತ್ವರಿತವಾಗಿ ದೇವರ ದರ್ಶನವನ್ನು ನಿಮಗೆ ಅನುಗ್ರಹಿಸುತ್ತವೆ. ಸ್ವಾರ್ಥರಹಿತವಾಗಿ ಹೇಗೆ ಕೆಲಸ ಮಾಡಬೇಕು? ನಿಸ್ವಾರ್ಥತೆ ಎಂದರೇನು ಎನ್ನುವ ಇನ್ನೆರೆಡು ಪ್ರಶ್ನೆಗಳು ಇದರ ಬೆನ್ನಿಗೆ ಬರಬಹುದು.

ನಿಮಗೆ ಹಸಿವಾದಾಗ, "ಆಹಾರ ಸೇವಿಸುವುದರಿಂದ ನಾನು ಸ್ವಾರ್ಥಿಯಾಗುತ್ತಿದ್ದೇನೆಯೇ ಅಥವಾ ನಿಸ್ವಾರ್ಥಿಯಾಗುತ್ತಿದ್ದೇನೆಯೇ?" ಎಂದು ನೀವು ಯೋಚಿಸಬಹುದು. ನೀವು ಆಹಾರವನ್ನು ಏಕೆ ಸೇವಿಸುತ್ತೀರಿ? ಆಹಾರದ ರುಚಿಗಾಗಿ ಸೇವಿಸುತ್ತಿಲ್ಲ, ನಾಲಿಗೆಗೆ ಖುಷಿಕೊಡುವ ಸಲುವಾಗಿ ಆಹಾರ ಸೇವಿಸುತ್ತಿಲ್ಲ ಅಥವಾ ನಿಮಗಾಗಿಯೂ ಅಲ್ಲ. ಪರರಿಗೆ ಸಹಾಯ ಮಾಡುವುದಕ್ಕೆ ಬೇಕಾದ ದೈಹಿಕ ಬಲವು ನಿಮ್ಮಲ್ಲಿ ಬರಲಿ ಎಂದು ನೀವು ಆಹಾರ ಸೇವಿಸಬೇಕು. ಈ ದೇಹವು ನಿಮಗೆ ದೇವರು ದಯಪಾಲಿಸಿದಂಥ ಒಂದು ಉಪಕರಣವಾಗಿದೆ ಮತ್ತು ಅದನ್ನು ದೇವರ ಹಾಗೂ ಮಾನವರ ಸೇವೆಗಾಗಿ ಮಾತ್ರವೇ ನೀವು ಬಳಸಬೇಕು. ನಿಮಗೆ ಆರೋಗ್ಯವೇ ಸರಿಯಿಲ್ಲದಿದ್ದರೆ, ನೀವೇ ಇನ್ನೊಬ್ಬರ ಸಹಾಯದ ಅಪೇಕ್ಷೆಯಲ್ಲಿ ಇರುತ್ತೀರಿ, ಇನ್ನೊಬ್ಬರ ಸೇವೆಗೆ ನೀವು ಅರ್ಹರಾಗಲಾರಿರಿ. ನೀವು ಈ ಉದ್ದೇಶದಿಂದ ಆಹಾರ ಸೇವಿಸಿದರೆ, ಈ ಆಹಾರ ಸೇವಿಸುವ ಪ್ರಕ್ರಿಯೆಯೂ ಕೂಡ ಒಂದು ಕರ್ಮವಾಗುತ್ತದೆ.

ಬೇರೇನೂ ಅಲ್ಲ. ನೀವು ಓದುವುದು ಏಕೆ? ಅದೂ ಕೂಡ ದೇವರಿಗಾಗಿಯೇ. ನಿಮ್ಮ ಓದಿನ ಉದ್ದೇಶವು ನಿಮಗೊಬ್ಬರಿಗಷ್ಟೇ ಉಪಯೋಗವಾಗುವ ಹಾಗಿರಬಾರದು. ನೀವು ಚೆನ್ನಾಗಿ ಓದಿ, ಅನೇಕ ಪದವಿಗಳನ್ನು, ಕೌಶಲ್ಯಗಳನ್ನೂ ಪಡೆದರೆ, ಅದನ್ನು ಇನ್ನೂ ಹತ್ತು ಜನರಿಗೆ ಹಂಚುವ ಇಚ್ಛೆಯನ್ನು ಹೊಂದಿರಬೇಕು. ನೀವು ಇನ್ನೊಬ್ಬರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ವಿದ್ಯಾರ್ಜನೆಯನ್ನು ಮಾಡುತ್ತಿದ್ದರೆ, ನೀವು ನಿಸ್ವಾರ್ಥಿಯಾಗಿದ್ದೀರಿ ಎಂದರ್ಥ ಅಲ್ಲದೆ, ನೀವು ಚಿತ್ತಶುದ್ಧಿಯನ್ನು ಪಡೆಯುತ್ತೀರಿ. ಆದ್ದರಿಂದ, ನೀವು ದೈಹಿಕವಾಗಿ ಸಬಲರಾಗಿರಬೇಕು, ಬುದ್ಧಿವಂತರಾಗಿರಬೇಕು ಮತ್ತು ಎಲ್ಲವನ್ನೂ ತಿಳಿದಿವರಾಗಿರಬೇಕು; ಆಗಲೇ ಬೇರೆಯವರಿಗೆ ಸೇವೆ ಸಲ್ಲಿಸುವುದು ನಿಮಗೆ ಸಾಧ್ಯವಾಗುತ್ತದೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.