Fire Tragedy: ಮಡಿಕೇರಿ ಶಾಲೆ ಅಗ್ನಿ ದುರಂತಕ್ಕೆ ಬಿಗ್ ಟ್ವಿಸ್ಟ್; ಅನುಮತಿ ಇಲ್ಲದೆ ವಸತಿ ವ್ಯವಸ್ಥೆ
ಕೊಡಗು ಜಿಲ್ಲೆಯ ಮಡಿಕೇರಿಯ ವಸತಿ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ ನಡೆದು, 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆಗೆ ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಕಾಟಗೇರಿ ಗ್ರಾಮದಲ್ಲಿರುವ ಈ ವಸತಿ ಶಾಲೆಗೆ ಅನುಮತಿ ಪಡೆದಿರಲಿಲ್ಲ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

-

ಮಡಿಕೇರಿ, ಅ. 10: ಮಡಿಕೇರಿಯ ವಸತಿ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ (Fire Tragedy) ನಡೆದು, 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆಗೆ ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾಟಗೇರಿ ಗ್ರಾಮದಲ್ಲಿರುವ ಈ ವಸತಿ ಶಾಲೆಗೆ ಅನುಮತಿ ಪಡೆದಿರಲಿಲ್ಲ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ (Kodagu News). ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿ ಗ್ರಾಮ ಪಂಚಾಯತ್ ಅಥವಾ ಶಿಕ್ಷಣ ಇಲಾಖೆ ಅನುಮತಿಯನ್ನು ಶಾಲೆ ಪಡೆದಿರಲಿಲ್ಲ ಎನ್ಜುವ ಸುದ್ದಿ ಬೆಚ್ಚಿ ಬೀಳಿಸಿದೆ.
ದೆಹಲಿ ಮೂಲದ ಉದ್ಯಮಿ ನಡೆಸುತ್ತಿರುವ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ 2ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಮೃತಪಟ್ಟಿದ್ದಾನೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿದ ವೇಳೆ ಆಘಾತಕಾರಿ ಅಂಶ ಗೊತ್ತಾಗಿದೆ. ಮೃತ ಬಾಲಕ ಪುಷ್ಪಕ್ ಭಾಗಮಂಡಲ ಸಮೀಪದ ಚೆಟ್ಟಿ ಮಾನಿ ಗ್ರಾಮದವನು.
ಹಳೆಯ ಮನೆಯಲ್ಲಿ ನಡೆಸಲಾಗುತ್ತಿದ್ದ ಈ ವಸತಿ ಶಾಲೆಯಲ್ಲಿ 102 ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು. ಸುಮಾರು 70 ಮಕ್ಕಳು ಶಾಲೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಉಚಿತ ಶಿಕ್ಷಣದ ಹೆಸರಲ್ಲಿ ವಸತಿ ಶಾಲೆ ನಡೆಸಲಾಗುತ್ತಿದ್ದರೂ ಇಲ್ಲಿ ಮಕ್ಕಳಿಗೆ ಸೂಕ್ತ ಮೂಲ ಸೌಕರ್ಯ ನೀಡುತ್ತಿರಲಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ.
ಈ ಸುದ್ದಿಯನ್ನೂ ಓದಿ: Murder case: ಕೇರಳದ ಉದ್ಯಮಿ ಕೊಡಗಿನ ತೋಟದ ಮನೆಯಲ್ಲಿ ಕೊಲೆ
51 ಮಕ್ಕಳನ್ನು ರಕ್ಷಿಸಿದ ಇಬ್ಬರು ಬಾಲಕರು!
ಗುರುವಾರ (ಅ. 9) ಬೆಳಗ್ಗೆ ನಡೆದ ನಡೆದ ಅಗ್ನಿ ದುರಂತದ ವೇಳೆ ಇಬ್ಬರು ಬಾಲಕರು ತೋರಿದ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅವಘಡದ ವೇಳೆ 51 ಮಕ್ಕಳನ್ನು ಇಬ್ಬರು ರಕ್ಷಿಸಿದ್ದಾರೆ. ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರಿಬ್ಬರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿದೆ. ಇವರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬಾಲಕರ ಸಾಹಸ
ಬಬಿನ್ ಮತ್ತು ಯಶ್ವಿನ್ ಬಾಲಕರು ಬೆಂಕಿ ಹೊಗೆಯಿಂದ ಎಚ್ಚೆತ್ತಿದ್ದಾರೆ. ತಕ್ಷಣವೇ ಕಿರುಚಾಡಿ ಎಲ್ಲ ಮಕ್ಕಳನ್ನು ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದಾರೆ. ಆದರೆ ಬಾಗಿಲು ತೆರೆದುಕೊಂಡಿಲ್ಲ. ಕಿಟಕಿಯ ಗಾಜನ್ನು ಪ್ಲಾಸ್ಕ್ನಿಂದ ಒಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ತಕ್ಷಣವೇ ಮತ್ತೊಂದು ಕೋಣೆಗೆ ಓಡಿ ಅಲ್ಲಿ ಕಿಟಗಿ ಬಾಗಿಲು ತೆರೆದು ಉಳಿದ ಮಕ್ಕಳನ್ನು ಹೊರಕ್ಕೆ ಕಳುಹಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಪುಷ್ಪಕ್ ಮಾತ್ರ ಹೊರ ಬರಲಾರದೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಡಳಿತದಿಂದ ಕ್ರಮದ ಭರವಸೆ
ದೆಹಲಿ ಮೂಲದ ಇಂಡಸ್ ಕ್ವಾಲಿಟಿ ಎಜಕೇಷನ್ ಸಂಸ್ಥೆ ನಡೆಸುತ್ತಿರುವ ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಹಳೆಯ ಮನೆಯೊಂದರಲ್ಲಿ ಈ ಶಾಲೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.