ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಅಮ್ಮಾ ಏಳಮ್ಮʼʼ: ಮೃತ ತಾಯಿ ಆನೆಯನ್ನು ಎಬ್ಬಿಸಲು ಮರಿಯಾನೆಯ ಪ್ರಯತ್ನ; ಕೊಡಗಿನಲ್ಲೊಂದು ಹೃದಯ ವಿದ್ರಾವಕ ಘಟನೆ

Viral Video: ಕೊಡಗು ಜಿಲ್ಲೆಯ ಅಮ್ಮತಿ ಸಮೀಪದ ಆನಂದಪುರದ ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ತಾಯಿ ಆನೆಯೊಂದು ಮೃತಪಟ್ಟಿದ್ದು, ಮರಿಯಾನೆ ಅದನ್ನು ಎಬ್ಬಿಸಲು ಯತ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಆನೆ ಮರಿಯ ಗೋಳಾಟವು ಇದೀಗ ಪ್ರಾಣಿಪ್ರಿಯರ ಹೃದಯ ತಟ್ಟಿದೆ.

ಕೊಡಗಿನಲ್ಲಿ ಮೃತ ಅನೆಯ ಬಳಿ ಗೋಳಾಡಿದ ಮರಿ ಆನೆ

ಮಡಿಕೇರಿ, ಜು. 27: ಮೂಕ ಪ್ರಾಣಿಗಳಿಗೂ ಭಾವನೆಗಳಿವೆ. ಅವುಗಳೂ ಸಂಬಂಧಗಳಿಗೆ ಬೆಲೆ ಕೊಡುತ್ತವೆ. ಅದರಲ್ಲೂ ಆನೆಗಳು ಹೆಚ್ಚುಕಡಿಮೆ ಮನುಷ್ಯರಂತೆ ವರ್ತಿಸುತ್ತವೆ ಎನ್ನುವ ಮಾತಿದೆ. ಇದು ನಿಜ ಕೂಡ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಮರಿ ಆನೆಯ ಹೃದಯ ವಿದ್ರಾವಕ ವಿಡಿಯೊವೊಂದು ವೈರಲ್‌ ಆಗಿದೆ. ಇದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ತಾಯಿ ಆನೆಯ ಮೃತದೇಹದ ಬಳಿ ಮರಿ ಆನೆ ರೋಧಿಸುತ್ತಿರುವ ದೃಶ್ಯ ಇದಾಗಿದ್ದು, ನೋಡುಗರ ಕಣ್ಣಂಚು ಒದ್ದೆಯಾಗಿಸಿದೆ (Viral News). ಕೊಡಗು ಜಿಲ್ಲೆಯ ಅಮ್ಮತಿ ಸಮೀಪದ ಆನಂದಪುರದಲ್ಲಿ (Kodagu News) ಈ ಘಟನೆ ನಡೆದಿದೆ.

ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ಮೃತಪಟ್ಟ ತಾಯಿ ಆನೆಯ ದೇಹವನ್ನು ಬಿಟ್ಟು ದೂರ ಹೋಗಲು ನಿರಾಕರಿಸಿದ ಆನೆ ಮರಿಯ ಗೋಳಾಟವು ಇದೀಗ ಪ್ರಾಣಿಪ್ರಿಯರ ಹೃದಯ ತಟ್ಟಿದೆ. ಮತ್ತೊಮ್ಮೆ ವನ್ಯಜೀವಿ-ಮನುಷ್ಯರ ನಡುವಿನ ಸಂಘರ್ಷ ಚರ್ಚೆಗೆ ಕಾರಣವಾಗಿದೆ.

ಆನೆ ಮರಿಯ ಹೃದಯ ವಿದ್ರಾವಕ ವಿಡಿಯೊ:



ಘಟನೆ ವಿವರ

ಜುಲೈ 25ರ ತಡರಾತ್ರಿ ನೀರವತೆಯನ್ನು ಸೀಳಿ ಆನೆ ಮರಿಯ ನಿರಂತರ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಫಿ ತೋಟದತ್ತ ತೆರಳಿದ್ದರು. ಈ ವೇಳೆ ಸುಮಾರು 30 ವರ್ಷದ ಹೆಣ್ಣು ಕಾಡಾನೆಯ ಮೃತದೇಹ ಪತ್ತೆಯಾಗಿತ್ತು. ಮರುದಿನ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಅಧಿಕಾರಿಗಳು ಆಗಮಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂತು.

ಕೊಡಗಿನಲ್ಲಿ ಕಾಡಾನೆ ದಾಳಿಯಿಂದ RAW ಐಜಿ ಸುನಿಲ್ ಅಚ್ಚಯ್ಯ ಪತ್ನಿ ಸಾವು

ಅಲ್ಲೇ ಇದ್ದ ಆನೆ ಮರಿಯು ಅಧಿಕಾರಿಗಳನ್ನು ಬಳಿಗೆ ಬರದಂತೆ ತಡೆಯಿತು. ತಾಯಿ ಆನೆಯ ದೇಹದಿಂದ ದೂರ ಹೋಗಲು ನಿರಾಕರಿಸಿ ಅದನ್ನು ಎಬ್ಬಿಸಲು ಯತ್ನಿಸಿತು. ತನ್ನ ಪುಟ್ಟ ಸೊಂಡಿಲಿನಿಂದ ಆನೆಯ ಮುಖ, ಮೈ ಎಲ್ಲ ತಡವಿ ತನ್ನ ಪ್ರಯತ್ನವನ್ನು ಮುಂದುವರಿಸುತ್ತಲೇ ಇತ್ತು. ತಾಯಿ ಮೃತಪಟ್ಟಿರುವುದು ಪಾಪ ಅದಕ್ಕೆ ಗೊತ್ತೇ ಆಗಲಿಲ್ಲ. ತಾಯಿ ಮಲಗಿದೆ ಎಂದು ಭಾವಿಸಿ ಎಬ್ಬಿಸಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿತ್ತು. ಅಧಿಕಾರಿಗಳು ಸೇರಿ ನೆರೆದ ಸ್ಥಳೀಯರು ಈ ದೃಶ್ಯವನ್ನು ಕಣ್ತುಂಬಿಕೊಂಡು ನೋಡಿ ಅಸಹಾಯಕರಾಗಿ ನಿಲ್ಲಬೇಕಾಯಿತು.

ಕೊನೆಗೆ ಮರಿ ಆನೆಯನ್ನು ಬಲವಂತವಾಗಿ ಸ್ಥಳಾಂತರಿಸಿ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಆನೆಯ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದ್ದೇ ಸಾವಿಗೆ ಕಾರಣ ಎನ್ನುವ ಅಂಶ ಬಯಲಾಗಿದೆ. ಬಹುಶಃ ಆಹಾರ ಅರಸಿ ನಾಡಿಗೆ ಬಂದ ಆನೆಗೆ ಬಲವಾದ ಪೆಟ್ಟು ಬಿದ್ದಿರಬೇಕು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ

ಆನೆಯ ಮೃತದೇಹವನ್ನು ವಿಲೇವಾರಿ ಮಾಡಿದ ಬಳಿಕವೂ ಮರಿ ಆನೆ ಆ ಸ್ಥಳದಿಂದ ತೆರಳದೆ ಅಲ್ಲೇ ಅಲೆದಾಡುತ್ತಿತ್ತು. ತಾಯಿ ಇಂದಲ್ಲ ನಾಳೆ ಬರುಬಹುದೆಂಬ ನಿರೀಕ್ಷೆಯಲ್ಲಿ ಅಲ್ಲೇ ಠಿಕಾಣಿ ಹೂಡಿರುವುದನ್ನು ನೋಡಿ ಸ್ಥಳೀಯರು ನೊಂದುಕೊಂಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕೂಡ ಈ ಭಾವುಕ ಕ್ಷಣವನ್ನು ಭಾರವಾದ ಹೃದಯದೊಂದಿಗೆ ನೋಡುತ್ತಿದ್ದಾರೆ. ಹಲವರು ಆನೆ ಮರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ʼಹೃದಯ ವಿದ್ರಾವಕʼ ಎಂದು ಕರೆದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author