ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Laxmi Hebbalkar: ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ವಿಗೊಳಿಸಿ: ಲಕ್ಷ್ಮಿ ಹೆಬ್ಬಾಳ್ಕರ್

ನವೆಂಬರ್ 28ರ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಮುಂದಿನ 50 ವರ್ಷಕ್ಕೆ ಭದ್ರ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ಉದ್ದೇಶ. ಮಹಿಳೆಯರ ಸಬಲೀಕರಣಕ್ಕೆ ಜಾರಿಗೆ ತಂದ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಇದರ ಯಶಸ್ಸಿನ ಪ್ರಮುಖ ರೂವಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಇದೇ ಮಾದರಿಯಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ಸುಗೊಳಿಸಬೇಕು. ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ವಿಗೊಳಿಸಿ: ಹೆಬ್ಬಾಳ್ಕರ್

ಕೋಲಾರದಲ್ಲಿ ನಡೆದ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. -

Profile
Siddalinga Swamy Nov 24, 2025 10:04 PM

ಕೋಲಾರ, ನ.24: ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಸಮರ್ಪಕವಾಗಿ ಜಾರಿಗೆ ತಂದ ರಾಜ್ಯ ನಮ್ಮದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಬೆಂಗಳೂರಿನಲ್ಲಿ ನವೆಂಬರ್ 28ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಕೋಲಾರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಇಡೀ ದೇಶಕ್ಕೆ ಮಾದರಿಯಾಗಿ ನಮ್ಮ ಇಲಾಖೆ ಕೆಲಸ ಮಾಡುತ್ತಿದೆ ಎಂದರು.

ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಕೊಟ್ಟ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. 2023ರ‌ ಚುನಾವಣಾ ಪೂರ್ವ ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಹೇಳಿದರು.

Karnataka Women and Child Development Department

ಇಡೀ ದೇಶವೇ ಬಡತನದಿಂದ ತತ್ತರಿಸಿದ್ದ ವೇಳೆ ಬಡ ಮಕ್ಕಳಿಗೂ ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು 1973ರ ಅಕ್ಟೋಬರ್ 2ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಮ್ಮ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದರು. ಇದಾದ ಬಳಿಕ ನಮ್ಮ ಪಕ್ಷ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ ಕಾಯ್ದೆ, ಮಹಿಳೆಯರಿಗೆ ಮೀಸಲಾತಿ,‌ ಸ್ಥಳೀಯ ಆಡಳಿತದಲ್ಲಿ ಶೇಕಡ 50% ಮೀಸಲಾತಿಯನ್ನು ಜಾರಿಗೆ ತಂದಿತು ಎಂದರು.

ನನ್ನ ಕನಸಿನ ಬ್ಯಾಂಕ್ ಯಶಸ್ಸಿಗೆ ಕೈಜೋಡಿಸಿ

ನವೆಂಬರ್ 28ರ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಮುಂದಿನ 50 ವರ್ಷಕ್ಕೆ ಭದ್ರ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ಉದ್ದೇಶ. ಮಹಿಳೆಯರ ಸಬಲೀಕರಣಕ್ಕೆ ಜಾರಿಗೆ ತಂದ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಇದರ ಯಶಸ್ಸಿನ ಪ್ರಮುಖ ರೂವಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಇದೇ ಮಾದರಿಯಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ಸಿಗೊಳಿಸಬೇಕು. ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಸೌಲಭ್ಯ

ಮಹಿಳೆಯರಿಗೆ ಶಕ್ತಿ‌ ತುಂಬಲು ಹಾಗೂ ರಕ್ಷಣೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದ್ದು, ಇದರಿಂದ ಮಹಿಳೆಯರಿಗೆ ನೈತಿಕವಾಗಿ ಸ್ಥೈರ್ಯ ಬರಲಿದೆ. ಜನನಿಬಿಡ ಪ್ರದೇಶದಲ್ಲಿ ಅಕ್ಕಪಡೆ ಓಡಾಡಲಿದ್ದು, ಮನೆಯ ಒಳಗೆ ಹಾಗೂ ಹೊರಗೆ ಹೆಣ್ಣುಮಕ್ಕಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಿದರೂ ಸಹಾಯವಾಣಿ ಮೂಲಕ ಅಕ್ಕಪಡೆ ಗಮನಕ್ಕೆ ತರಬೇಕು ಎಂದರು.

ಇನ್ನು, ಬಡ ಮಕ್ಕಳಿಗೆ ತಳಹಂತದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ‌ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪೌಷ್ಠಿಕ ಆಹಾರದ ಜತೆಗೆ ಉತ್ತಮ ಶಿಕ್ಷಣ ಬಡ ಮಕ್ಕಳಿಗೆ ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಇದನ್ನೂ ಓದಿ |ಗ್ಯಾರಂಟಿ ಬಳಿಕ ಮತ್ತೆ 3 ದೊಡ್ಡ ಯೋಜನೆ ಘೋಷಿಸಿದ ಸರ್ಕಾರ

ಈ ವೇಳೆ ಕೋಲಾರ ಸಂಸದ ಮಲ್ಲೇಶ್ ಬಾಬು, ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ. ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀ ದೇವಮ್ಮ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪಂಚಾಯತ್‌ನ ಸಿಇಒ ಪ್ರವೀಣ್ ಪಿ. ಬಾಗೇವಾಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿ ಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಎನ್. ಸೇರಿದಂತೆ ಇಲಾಖೆಯ ಅಧಿಕಾರಿಗಳು,‌ ಸಿಬ್ಬಂದಿ ವರ್ಗದವರು, ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.