ರಾಜ್ಯವೇ ತಲೆ ತಗ್ಗಿಸುವ ಘಟನೆ; ಅಪ್ರಾಪ್ತೆ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 21 ವರ್ಷದ ಯುವಕ
Koppal News: ಕೊಪ್ಪಳದಲ್ಲಿ 21 ವರ್ಷದ ಯುವಕನೊಬ್ಬ ತನ್ನ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸುಮಾರು 8 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಸಹೋದರನಿಂದ ಗರ್ಭ ಧರಿಸಿದ ಸಂತ್ರಸ್ತೆ ಅಕ್ಟೋಬರ್ 30ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಕಾಮುಕ ಸಹೋದರನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತೆ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನ ಬಂಧನ (ಸಾಂದರ್ಭಿಕ ಚಿತ್ರ). -
ಕೊಪ್ಪಳ, ನ. 9: ರಾಜ್ಯವೇ ತಲೆ ತಗ್ಗಿಸುವ ಕೃತ್ಯ ಕೊಪ್ಪಳದಲ್ಲಿ ನಡೆದಿದ್ದು, 21 ವರ್ಷದ ಯುವಕನೊಬ್ಬ ತನ್ನ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ (Koppal News). ಈ ಘಟನೆ ನಡೆದ ಸುಮಾರು 8 ತಿಂಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಸಹೋದರನಿಂದ ಗರ್ಭ ಧರಿಸಿದ ಸಂತ್ರಸ್ತೆ ಅಕ್ಟೋಬರ್ 30ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಅಚ್ಚರಿ ಎಂದರೆ ಆಕೆ ಗರ್ಭ ಧರಿಸಿರುವ ವಿಚಾರ ಯಾರಿಗೂ ಗೊತ್ತಿರಲಿಲ್ಲವಂತೆ. ಬೆನ್ನು ನೋವೆಂದು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಾದ ವೇಳೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದೇ ದಿನ ರಾತ್ರಿ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ವೇಳೆ ಆಕೆ ಬಾಯಿ ಬಿಟ್ಟಿದ್ದು, ಸಹೋದರ ತನ್ನ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾಳೆ. ಅಲ್ಲದೆ ಆತ ಮದುವೆಯಾಗುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Woman thrown off Terrace: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಟೆರೇಸ್‍ನಿಂದ ಪತ್ನಿಯನ್ನು ತಳ್ಳಿದ ಪತಿ
ಘಟನೆ ವಿವರ
ಸಂತ್ರಸ್ತೆ ಗರ್ಭಿಣಿಯಾಗಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ. ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಸಂಶಯಗೊಂಡ ವೈದ್ಯರು ಪರೀಕ್ಷಿಸಿದಾಗ ಆಕೆ ತುಂಬು ಗರ್ಭಿಣಿ ಎನ್ನುವ ವಿಚಾರ ಗೊತ್ತಾಯ್ತು.
ಅದೇ ದಿನ ರಾತ್ರಿ ಆಕೆ ಮಗುವಿಗೆ ಜನ್ಮ ನೀಡಿದಳು. ಈ ವೇಳೆ ಆಕೆ ತನ್ನ ಸಹೋದರನ ಕಾಮ ಕಾಂಡವನ್ನು ಒಂದೊಂದಾಗಿ ಬಿಚ್ಚಿಟ್ಟಳು. ಫೆಬ್ರವರಿಯಲ್ಲಿ ಸಹೋದರ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಜತೆಗೆ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದನಂತೆ.
ಈ ಬಗ್ಗೆ ಮನೆಯವರಿಗೆ ತಿಳಿಸುವುದಾಗಿ ಅಪ್ರಾಪ್ತೆ ಹೇಳಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ. ಸಂತ್ರಸ್ತೆಯ ತಂದೆ ಎರಡನೇ ಮದುವೆಯಾಗಿದ್ದು, ಅವರು ಓರ್ವ ಮಗಳು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64(2)(ಎಂ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಾತು ಬಾರದ ವಿದ್ಯಾರ್ಥಿನಿಗೆ ಶಿಕ್ಷಕನ ಲೈಂಗಿಕ ಕಿರುಕುಳ
ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಶಿಕ್ಷಕನೊಬ್ಬ ಮಾತು ಬಾರದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಸುಮಾರು 13 ವರ್ಷಗಳ ಬಳಿಕ ಬೆಳಕಿಗೆ ಬಂದಿತ್ತು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Physical Abuse: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ; ನಾಲ್ವರು ಅಂದರ್
ವಿದ್ಯಾರ್ಥಿನಿಗೆ ಮಾತನಾಡಲು ಬರದಿದ್ದರಿಂದ ಇದನ್ನೇ ಆರೋಪಿ ಲಾಭವಾಗಿ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಳ್ಳೇಗಾಲದಲ್ಲಿ 2012-2013ನೇ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವೇಳೆ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಚಾರವನ್ನು 1 ವಾರದ ಹಿಂದೆ ಶಾಲೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಸಂತ್ರಸ್ತೆ ಬಿಚ್ಚಿಟ್ಟಿದ್ದಾಳೆ. ಬಳಿಕ ಶಾಲೆಯ ಸಿಇಒ ದೂರು ನೀಡಿದ್ದರು.