ಕೊಪ್ಪಳ : ಕೊಪ್ಪಳದ (Koppala news) ಗವಿಮಠದಲ್ಲಿ (Gavimath) ಧರ್ಮಸೌಹಾರ್ದವನ್ನು ಒತ್ತಿ ಹೇಳುವಂಥ ಘಟನೆಯೊಂದು ನಡೆದಿದೆ. ಮುಸ್ಲಿಂ ಮಹಿಳೆಯೊಬ್ಬರು ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತಿದ್ದಾರೆ. ಇವರು ಪ್ರತಿದಿನ ಆಗಮಿಸಿ ನಾಗದೇವರ ಕಲ್ಲಿನ ಮುಂದೆ ತುಸು ಹೊತ್ತು ಧ್ಯಾನ ಮಾಡಿ ತೆರಳುತ್ತಿದ್ದಾರೆ. ತಾವು ಕೊಪ್ಪಳ ಗವಿಮಠದ ಸ್ವಾಮೀಜಿಗಳ ನಿರ್ದೇಶನದಂತೆ ಧ್ಯಾನ (Meditation) ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ಅವರು ಗವಿಮಠದಲ್ಲಿ ಪ್ರತಿದಿನ ನಿರಂತರ 1 ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಆವರಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುವುದು ಕಂಡುಬರುತ್ತಿದೆ. ಗವಿಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೇ ಮಹಿಳೆ ಧ್ಯಾನ ಮಾಡುತ್ತಿದ್ದಾರೆ. ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಹೇಳಿದ್ದಾರೆ.
ತಾನು ಮುಸ್ಲಿಂ ಆದರೇನಂತೆ, ಎಲ್ಲ ದೇವರು ಒಂದೇ ಎನ್ನುವ ಹಸೀನಾಗೆ ಮಠದಲ್ಲಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆಯಂತೆ. ಮಾನಸಿಕ ವೇದನೆ ಮತ್ತು ದುಗುಡದಿಂದ ಬಳಲುತ್ತಿದ್ದಾಗ ಅಜ್ಜಾರು (ಸ್ವಾಮೀಜಿ) ಮಠದಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡುವಂತೆ ಹೇಳಿದ್ದರು. ಕಳೆದ 13 ವರ್ಷಗಳಿಂದ ಮಠಕ್ಕೆ ಬರುತ್ತಿದ್ದೇನೆ ಎಂದು ಹಸೀನಾ ಹೇಳುತ್ತಾರೆ.
ಇದನ್ನೂ ಓದಿ: Koppal News: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಗವಿಮಠದ ಶ್ರೀಗಳು ಬೆಂಬಲ