ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ; ಪ್ರಸ್ತಾವಿತ ಜಾಗ ಪರಿಶೀಲಿಸಿದ ಅಧಿಕಾರಿಗಳು

Mandya News: ಮಂಡ್ಯ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಹೇಳಿರುವ ಪ್ರಸ್ತಾವಿತ ಜಾಗವನ್ನು ಆ ಸಂಸ್ಥೆಯ ಉನ್ನತಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿರುವ ಜಾಗ ಪರಿಶೀಲಿಸಿದ ಅಧಿಕಾರಿಗಳು.

ಮಂಡ್ಯ, ಮಾ.16: ಮಂಡ್ಯ ಜಿಲ್ಲೆಯಲ್ಲಿ (Mandya News) ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿರುವ ಪ್ರಸ್ತಾವಿತ ಜಾಗವನ್ನು ಆ ಸಂಸ್ಥೆಯ ಉನ್ನತಾಧಿಕಾರಿಗಳು ಸೋಮವಾರ ಪರಿಶೀಲಿಸಿದರು. ಸಂಸ್ಥೆಯ ಹಿರಿಯ ಉಪನಿರ್ದೇಶಕರಾದ ವಿ.ಎ. ಪಂಖಾವಾಲ, ಡಾ. ಬಿ.ವಿ. ಶ್ಯಾಮಸುಂದರ ಹಾಗೂ ಹಿರಿಯ ಪ್ರಧಾನ ವ್ಯವಸ್ಥಾಪಕ ಗಿರೀಶ್‌ ತನವಾಡೆ ಅವರು ಮಂಡ್ಯದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಸರಾಳು ಸಮೀಪದಲ್ಲಿರುವ ಮದ್ದಿಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿಯ ಜಾವನ್ನು ಖುದ್ದು ವೀಕ್ಷಿಸಿದರು.

ಈ ಎರಡು ಗ್ರಾಮಗಳ ಬಳಿ ಸುಮಾರು 110 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಎಆರ್‌ಎಐ ತಂಡವು ಈ ಭೂಮಿಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿತು. ಅಲ್ಲದೆ, ಜಾಗಕ್ಕೆ ಸಂಬಂಧಿತ ಅಗತ್ಯ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಕಲೆ ಹಾಕಿತು. ಈ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುಕೂಲವಾಗಿವೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದದರು. ಈ ತಂಡದ ವರದಿಯ ನಂತರ ತಾಂತ್ರಿಕ ನಿಪುಣರ ತಂಡವು ಈ ಭೂಮಿಗಳನ್ನು ಪರಿಶೀಲನೆ ನಡೆಸಲಿದೆ.

Mandya

ಭೂಮಿಯ ಸ್ವರೂಪ, ರಸ್ತೆ ಸಂಪರ್ಕ, ನೀರು, ವಿದ್ಯುತ್‌ ಸೇರಿ ಮೂಲಸೌಕರ್ಯಗಳ ಸಂಯೋಜನೆ ಸುಲಭ ಸಾಧ್ಯವೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಅಲ್ಲದೆ, ತ್ವರಿತವಾಗಿ ತಾಂತ್ರಿಕ ತಂಡವೂ ಸ್ಥಳಕ್ಕೆ ಭೇಟಿ ಕಾರ್ಯಸಾಧ್ಯತಾ ವರದಿಯನ್ನು ನೀಡಲಿದೆ ಎಂದು ಹೇಳಿತು.

ಜಿಲ್ಲಾಧಿಕಾರಿಗಳ ಜತೆ ಭೆಟಿಯಾದ ಎಆರ್‌ಎಐ ತಂಡ

ಸದರಿ ಭೂಮಿಯನ್ನು ವೀಕ್ಷಿಸಿದ ನಂತರ ಎಆರ್‌ಎಐ ಅಧಿಕಾರಿಗಳ ತಂಡವು ಮಂಡ್ಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಗತ್ಯವಿರುವ ಭೂಮಿ ಹೇಗಿರಬೇಕು ಎಂಬ ಪ್ರಾಥಮಿಕವಾಗಿ ಜಿಲ್ಲಾಧಿಕಾರಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ, ಎಆರ್‌ಎಐ ತಂಡವು ಬಸರಾಳು ಭೂಮಿಯನ್ನು ಪ್ರಾಥಮಿಕ ಪರಿಶೀಲನೆ ನಡೆಸಿದೆ. ಬಸರಾಳು ಹತ್ತಿರದ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ಹೇಳಿದೆಯೇ ವಿನಾ ಅಲ್ಲಿಯೇ ಕಾರ್ಯ ಸಾಧ್ಯತೆ ಆಗುತ್ತದೆಯೇ ಎಂಬುದನ್ನು ಹೇಳಿಲ್ಲ. ಅಲ್ಲದೆ, ಈಗ ಬಂದಿರುವ ಮೂವರು ಅಧಿಕಾರಿಗಳ ತಂಡವು ಇಪ್ಪತ್ತು ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿ ಪರಿಶೀಲನೆ ನಂತರ ತಾಂತ್ರಿಕ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.‌

HD Kumaraswamy: ಉಪನಗರ ವರ್ತುಲ ರಸ್ತೆ ಭೂ ಪರಿಹಾರ ನೀಡಿಕೆ ಸದ್ಯದಲ್ಲೇ: ಸುಳಿವು ನೀಡಿದ ಸಚಿವ ಎಚ್‌ಡಿಕೆ

ಸಚಿವರ ಕನಸು ಈಡೇರುವುದಕ್ಕೆ ದೊಡ್ಡ ಹೆಜ್ಜೆ

ಮಂಡ್ಯದಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದ ಜನತೆಗೆ ಭರವಸೆ ನೀಡಿದ್ದರು. ಇದೇ ಮಾರ್ಚ್‌ 14ರಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಸಭೆಯಲ್ಲಿ ಮಾತನಾಡುತ್ತಾ, ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿದ್ದರು. ಅದಾದ ಎರಡು ದಿನಗಳಲ್ಲಿಯೇ ಆ ಸಂಸ್ಥೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ ₹ 500 ಕೋಟಿ, ನಂತರದ ದಿನಗಳಲ್ಲಿ ಇನ್ನೂ ₹ 500 ಕೋಟಿ ಹೂಡಿಕೆ ಮಾಡಲಾಗುವುದು. ಇದರಿಂದ ಮಂಡ್ಯದ ಅಭಿವೃದ್ಧಿಗೆ ಬಲ ಬರುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದರು.