ಮಂಡ್ಯ: ಕೆಆರ್‌ಎಸ್ ಅಣೆಕಟ್ಟಿನ (KRS) ಬಳಿ ಆಯೋಜಿಸಲಾಗಿದ್ದಕಾವೇರಿ ಆರತಿ (Cauvery Arathi) ಕಾರ್ಯಕ್ರಮದ ದಿನಾಂಕ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಅ.11 ರಿಂದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಬೇಕಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವವರಿದ್ದರು. ಆದರೆ ಇದೀಗ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಇದೀಗ ಪರಿಷ್ಕೃತ ದಿನಾಂಕದಂತೆ, ಅಕ್ಟೋಬರ್ 18 ರಿಂದ 23 ರವರೆಗೆ ಸತತವಾಗಿ ಕೆಆರ್‌ಎಸ್ ಡ್ಯಾಂ ಬಳಿ ಕಾವೇರಿ ಆರತಿ ಜರುಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 11ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಅಂದು ಸಿಎಂ ಅವರಿಗೆ ಬೇರೆಡೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಉತ್ತರ ಭಾರತದ ಗಂಗಾ ಆರತಿಯ ಮಾದರಿಯಲ್ಲಿ ದಕ್ಷಿಣದ ಜೀವನದಿ ಕಾವೇರಿಗೂ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷದಿಂದ 'ಕಾವೇರಿ ಆರತಿ'ಯನ್ನು ಪ್ರಾರಂಭಿಸಲಾಯಿತು. ಹಿಂದಿನ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು.
DK Shivakumar: ದೇಶದಲ್ಲೇ 2ನೇ ಅತಿ ಶ್ರೀಮಂತ ಶಾಸಕ ಡಿಕೆ ಶಿವಕುಮಾರ್! ಈ ಪಟ್ಟಿಯಲ್ಲಿ ಕರ್ನಾಟಕದ ಶಾಸಕರೇ ಹೆಚ್ಚು
ಕಾವೇರಿ ನದಿಗೆ ಸಾಂಪ್ರದಾಯಿಕ ಶಂಖನಾದ, ವೇದಮಂತ್ರ ಘೋಷಗಳೊಂದಿಗೆ ಪ್ರತಿದಿನ ಸಂಜೆ 6:45 ರಿಂದ 7:45 ರವರೆಗೆ ಮಹಾ ಆರತಿ ನೆರವೇರಲಿದೆ. ಹೆಚ್ಚಿನ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಎಲ್ಲರಿಗೂ ವೀಕ್ಷಣೆ ಸುಲಭವಾಗಿಸಲು ಜಲಾಶಯದ ಸುತ್ತಮುತ್ತ ಬೃಹತ್ ಎಲ್‌ಇಡಿ (LED) ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ. ಪೂಜಾ ಕಾರ್ಯಕ್ರಮಗಳ ನಂತರ ಪ್ರತಿದಿನ ಸಂಜೆ ಪ್ರವಾಸಿಗರನ್ನು ಆಕರ್ಷಿಸಲು ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಮತ್ತು ಹಾಸ್ಯ ಉತ್ಸವಗಳನ್ನು ಆಯೋಜಿಸಲಾಗಿದೆ. ಇಡೀ ಬೃಂದಾವನ ಆವರಣವನ್ನು ಆಕರ್ಷಕ ದೀಪಾಲಂಕಾರದಿಂದ ಸಜ್ಜುಗೊಳಿಸಲಾಗುತ್ತಿದ್ದು, ಕಾವೇರಿ ಆರತಿ ಉತ್ಸವವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.