ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HD Kumaraswamy: ನನ್ನ ಹೇಳಿಕೆಯಿಂದ ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ: ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಇತ್ತೀಚೆಗೆ ಸಿಎಂ ಬದಲಾವಣೆ ಕೂಗು ಜೋರಾದ ವೇಳೆ ಡಿ.ಕೆ.ಶಿವಕುಮಾರ್‌ ಪರ ಆದಿಚುಂಚನಗಿರಿ ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ ಎಂದು ಹೇಳಿದ್ದರು. ಇದೀಗ ತಮ್ಮ ಹೇಳಿಕೆಯಿಂದ ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ ಎಂದು ತಿಳಿಸಿದ್ದಾರೆ.

ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ ಎಚ್.ಡಿ. ಕುಮಾರಸ್ವಾಮಿ

ಮಂಡ್ಯ ಕೃಷಿಮೇಳದಲ್ಲಿ ನಿರ್ಮಲಾನಂದನಾಥ ಶ್ರೀಗಳ ಜತೆ ಎಚ್‌.ಡಿ. ಕುಮಾರಸ್ವಾಮಿ. -

Prabhakara R
Prabhakara R Dec 6, 2025 5:34 PM

ಮಂಡ್ಯ, ಡಿ.6: ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ನೀಡಿದ್ದ ಹೇಳಿಕೆಯಿಂದ ನಿರ್ಮಲಾನಂದನಾಥ ಶ್ರೀಗಳಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಹೇಳಿದರು. ಮಂಡ್ಯದ ವಿಸಿ ಫಾರಂನಲ್ಲಿ ನಡೆಯುತ್ತಿರುವ ಕೃಷಿ ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಮಾತನಾಡಿದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಷ್ಟು ವಿದ್ಯಾವಂತರಾದ ಮತ್ತೊಬ್ಬ ಸ್ವಾಮೀಜಿಗಳು ಇಲ್ಲ. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದಿದ್ದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಗೌರವ ಉಳಿಸಲಿಕ್ಕೆ ಬೀದಿಗೆ ಬಂದವರು. ಅವರಿಗೆ ದೇವೇಗೌಡರು ಸಿಎಂ ಆಗಲಿ ಎನ್ನುವುದು ಮನಸ್ಸಿನಲ್ಲಿತ್ತು. ನನ್ನನ್ನು ಕಂಡರೂ ಅವರಿಗೆ ತುಂಬಾ ವಾತ್ಸಲ್ಯವಿತ್ತು. ನನ್ನಿಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಅಪಚಾರವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳು ಏನು ನಡೆಯುತ್ತಿವೆ ಎಂದು ಎಲ್ಲರಿಗೂ ಗೊತ್ತು. ಈ‌ ಬಗ್ಗೆ ನಮ್ಮ ನಿರ್ಮಲಾನಂದನಾಥ ಶ್ರೀಗಳು ಮಾತನಾಡಿದ್ದಾರೆ. ಅವರು ಮಾತಾಡಿದ್ದಕ್ಕೆ ಇನ್ಯಾರೋ ಮಾತಾಡಿದ್ದಾರೆ. ನಮ್ಮ ಸ್ವಾಮೀಜಿಯಷ್ಟು ಓದಿಕೊಂಡವರು, ಶಿಕ್ಷಣ ಪಡೆದವರು ಮತ್ತೊಬ್ಬರು ಇಲ್ಲ. ಸ್ವಾಮೀಜಿಗಳು ಅವರದ್ದೆ ಆದ ಕಲ್ಪನೆಗಳನ್ನು ಹೊಂದಿರುತ್ತಾರೆ. ಇಂತಹ ಸ್ವಾಮೀಜಿಗಳು ಇಲ್ಲಿಗೆ ಬರಬಾರದು. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದೆ. ನಮ್ಮ ಹಾಗೂ ದೊಡ್ಡ ಸ್ವಾಮೀಜಿಗಳ ಸಂಬಂಧ ಹಲವರಿಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಸಮನ್ಸ್​ಗೆ ಹೈಕೋರ್ಟ್ ತಡೆ

ಎಚ್‌.ಡಿ.ಕುಮಾರಸ್ವಾಮಿ ಏನು ಹೇಳಿದ್ದರು?

ರಾಜ್ಯದಲ್ಲಿ ಇತ್ತೀಚೆಗೆ ಸಿಎಂ ಬದಲಾವಣೆ ಕೂಗು ಜೋರಾದ ವೇಳೆ ಡಿ.ಕೆ.ಶಿವಕುಮಾರ್‌ ಪರ ಆದಿಚುಂಚನಗಿರಿ ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, "ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ಈ ರೀತಿ ಜಾತಿ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗ ಮಾಡಿಕೊಳ್ಳುವುದು ಯಾವುದೇ ರಾಜಕಾರಣಿಗಳಿಗೆ ಶೋಭೆ ತರಲ್ಲ ಎಂದು ಡಿಕೆಶಿ ವಿರುದ್ಧ ಟೀಕಿಸಿದ್ದರು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಶಾಸಕ ಬಾಲಕೃಷ್ಣ ಸೇರಿ ಹಲವರು ಎಚ್‌ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಮಂಡ್ಯ ಕೃಷಿ ಮೇಳದ ಊಟದ ವೆಚ್ಚ ಭರಿಸಿದ ಕೇಂದ್ರ ಸಚಿವರು

ಮಂಡ್ಯ: ನಗರದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು, ಮಕ್ಕಳಿಗೆ ಮೂರು ದಿನಗಳ ಕಾಲ ಊಟಕ್ಕೆ ಆಗುವ ವೆಚ್ಚವನ್ನು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಭರಿಸಿದ್ದಾರೆ.

ಕೃಷಿ ಮೇಳದಲ್ಲಿ ಶನಿವಾರ ಪಾಲ್ಗೊಂಡಿದ್ದ ಸಚಿವರು, ಮೇಳದಲ್ಲಿ ಭೋಜನಕ್ಕಾಗಿ ಜನರಿಂದ ಹಣ ಪಡೆದು ಊಟ ನೀಡುತ್ತಿದ್ದ ಸಂಘಟಕರು, ಮಕ್ಕಳ ಊಟಕ್ಕೆ 20 ರೂಪಾಯಿ, ಹಿರಿಯರ ಊಟಕ್ಕೆ 30 ರೂಪಾಯಿ ಚಾರ್ಜ್‌ ಮಾಡುತ್ತಿದ್ದರು.

ಈ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಸ್ಪಂದಿಸಿದ ಸಚಿವರು; ಊಟಕ್ಕೆ ಹಣ ಪಡೆಯಬೇಡಿ. ಮೂರು ದಿನದ ಅಷ್ಟೂ ಊಟದ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರಲ್ಲದೆ, ಸ್ಥಳದಲ್ಲಿಯೇ ಕೃಷಿ ಮೇಳ ಸಂಘಟಕರಿಗೆ ಹಣವನ್ನು ನೀಡಿದರು.