ಮಂಡ್ಯ: ಕೇಂದ್ರ ಸಚಿವರು ಹಾಗೂ ಮಂಡ್ಯ ಲೋಕಸಭೆ ಸದಸ್ಯರು ಆಗಿರುವ ಹೆಚ್.ಡಿ. ಕುಮಾರ ಸ್ವಾಮಿ(H D Kumaraswamy) ಅವರ ಸೂಚನೆ ಮೇರೆಗೆ 'ಟೀಂ ಹೆಚ್'ಡಿಕೆ'(Team HDK) ಯುವಕರು ಇಲ್ಲಿನ ಮಹಿಳಾ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ಅನ್ನು ವಿತರಿಸಿದರು.
ಸಚಿವರ ನಿಗದಿತ ಕಾರ್ಯಕ್ರಮ ಪಟ್ಟಿಯ ಪ್ರಕಾರ ಶನಿವಾರ (ನ.14) ಕಾಲೇಜಿನಲ್ಲಿ ನಡೆಯಲಿದ್ದ ಮಕ್ಕಳ ದಿನಾಚರಣೆ(Children's Day) ಹಾಗೂ ಕರ್ನಾಟಕ ರಾಜ್ಯೋತ್ಸವ(Karnataka Rajyotsava) ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಬೇಕಿತ್ತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರು ಅಧಿಕೃತವಾಗಿ ಸಚಿವರನ್ನು ಆಹ್ವಾನಿಸಿದ್ದರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸಚಿವರು ಕೂಡ ಅವರಿಗೆ ತಿಳಿಸಿದ್ದರು.
ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾಲೇಜು ಕಾರ್ಯಕ್ರಮಕ್ಕೆ ಬರಿಗೈನಲ್ಲಿ ತೆರಳಬಾರದು ಎಂದು ತೀರ್ಮಾನಿಸಿದ್ದ ಸಚಿವರು, ಸುಮಾರು ವಿದ್ಯಾರ್ಥಿನಿಯರಿಗೆ ಉತ್ಕೃಷ್ಟ ಗುಣಮಟ್ಟದ ಕುಡಿಯುವ ನೀರಿನ ಬಾಟಲಿಯನ್ನು ವಿಶೇಷ ಕೊಡುಗೆಯಾಗಿ ನೀಡಬೇಕು ಎಂದು ಭಾವಿಸಿ, ಅದರಂತೆ ನೀರಿನ ಬಾಟಲಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿಸಿ ತರಿಸಿದ್ದರು.
ಇದನ್ನೂ ಓದಿ: HD Kumaraswamy: ಮೈಶುಗರ್ ಶಾಲೆ ಅಭಿವೃದ್ಧಿಗೆ 10 ಕೋಟಿ ರೂ. ಶೀಘ್ರ ರಿಲೀಸ್- HDK ಭರವಸೆ
ಈ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ರಾಜಕೀಯ ಹಿತಾಸಕ್ತಿಗಳು ತಮ್ಮ ಕೈಚಳಕ ತೋರಿಸಿ, ಕಾರ್ಯಕ್ರಮ ನಡೆಸಬಾರದು ಎಂದು ಕಾಲೇಜಿನ ಪ್ರಾಂಶುಪಾರ ಮೇಲೆ ಒತ್ತಡ ಹೇರಿವೆ. ಈ ಒತ್ತಡ ಮತ್ತು 'ರಾಜಕೀಯ ಕೈ ಚಳಕ'ದ ಮುಲಾಜಿಗೆ ಮಣಿದ ಪ್ರಾಂಶುಪಾಲರು ಸಚಿವರ ಆಪ್ತರಿಗೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ಶೈಕ್ಷಣಿಕ ಚಟುವಟಿಕೆಗಳ ನೆಪ ಹೇಳಿದ ಪ್ರಾಂಶುಪಾಲರು, ರಾಜಕೀಯ ಒತ್ತಡದ ವಿಷಯವನ್ನು ಮರೆ ಮಾಚಲು ಯತ್ನಿಸಿದರು.
ವಿಷಯ ತಿಳಿದು ಅತೀವ ಬೇಸರ ಮಾಡಿಕೊಂಡ ಸಚಿವರು; ಕಾರ್ಯಕ್ರಮ ರದ್ದಾದರೆ ಏನಂತೆ, ನೀರಿನ ಬಾಟಲಿಗಳನ್ನು ವಿದ್ಯಾರ್ಥಿನಿಯರಿಗೆ ತಲುಪಿಸಿ. ಅವರೆಲ್ಲರಿಗೂ ಶುಭಾಶಯಗಳನ್ನು ತಿಳಿಸಿ ಎಂದು ತಮ್ಮ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.
ಅದರಂತೆ ಇಂದು ಬೆಳಗ್ಗೆ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ನೇತೃತ್ವದಲ್ಲಿ ಕಾಲೇಜಿಗೆ ತೆರಳಿದ 'ಟೀಂ ಹೆಚ್'ಡಿಕೆ' ತಂಡದ ಯುವಕರು ಎಲ್ಲಾ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲಿಗಳನ್ನು ವಿತರಿಸಿದರು.
ರಾಜಕೀಯ ಒತ್ತಡದ ವಿರುದ್ಧ ಜೆಡಿಎಸ್ ಕಿಡಿ: ಕೇಂದ್ರ ಸಚಿವರ ಕಾರ್ಯಕ್ರಮ ರದ್ದಾಗುವಂತೆ 'ಕೈಚಳಕ' ತೋರಿದ ರಾಜಕೀಯ ಹಿತಾಸಕ್ತಿಯ ವಿರುದ್ಧ ಜೆಡಿಎಸ್ ಸಾಮಾಜಿಕ ಜಾಲತಾಣ(JDS Social Media) ವಿಭಾಗದ ರಾಜ್ಯಾಧ್ಯಕ್ಷ ಚಂದನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಕೇಂದ್ರ ಸಚಿವರ ಸೂಚನೆ ಮೇರೆಗೆ ನೀರಿನ ಬಾಟಲಿ ಗಳನ್ನು ವಿತರಣೆ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ವಿತರಣೆ ಕಾರ್ಯಕ್ರಮ ಇದಾಗಿತ್ತು. ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ವಿತರಣೆ ಮಾಡಲು ಆಗಮಿಸಬೇಕಿದ್ದ ಕೇಂದ್ರ ಸಚಿವರು ಬಾರದಂತೆ ಕೆಲವರು ತಡೆದಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಏಕಾಏಕಿ ಕಾರ್ಯಕ್ರಮ ರದ್ದುಗೊಳಿಸಿರುವ ಕಾಲೇಜು ಮುಖ್ಯಸ್ಥರ ಕ್ರಮ ಸರಿ ಇಲ್ಲ. ಇಂಥ ಷಡ್ಯಂತ್ರದ ವಿರುದ್ಧ ನಮ್ಮ ಆಕ್ರೋಶವಿದೆ ಎಂದು ಹೇಳಿದರು.
ಈ ಕಾರ್ಯಕ್ರಮ ರದ್ದಾಗಲು ಮಂಡ್ಯ ಶಾಸಕ ರವಿ ಗಣಿಗ(Mandya MLA Ravi Ganiga) ಅವರೇ ಕಾರಣ. ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಕಾರ್ಯಕ್ರಮ ರದ್ದಾಗುವಂತೆ ನೋಡಿಕೊಂಡಿದ್ದಾರೆ. ಇಂತಹ ಪ್ರವೃತ್ತಿ ತಪ್ಪು. ಮಕ್ಕಳಿಗೆ ಒಳ್ಳೆಯದಾಗುವ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಜನರ ಭಾವನೆಗಳನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು. ಎಲ್ಲದರಲ್ಲೂ ಕಲ್ಲು ಹುಡುಕುವ ಕೆಲಸ ಮಾಡಬಾರದು. ವಿದ್ಯಾರ್ಥಿಗಳಿಗೆ ಒಳ್ಳೆಯದಾಗಬೇಕಾದರೆ ಅವರು ಸಹಕಾರ ನೀಡಬೇಕು. ಎಲ್ಲಾ ವಿಷಯಗಳಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಒಳ್ಳೆಯ ರೀತಿಯಲ್ಲಿ ರಾಜಕಾರಣ ಮಾಡೋಣ ಎಂದು ಚಂದನ್ ಹೇಳಿದರು.