ಮಂಡ್ಯ: ಮಂಗಳೂರಿನಿಂದ ಬೆಂಗಳೂರಿಗೆ (Bus Accident) ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು-ಬೆಂಗಳೂರು ಹೈವೇಯಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಬಳಿ ಅಳವಡಿಸಿದ್ದ ಸೈನ್ ಬೋರ್ಡ್ಗೆ ಬಸ್ ಡಿಕ್ಕಿಯಾಗಿದೆ. ಬಸ್‌ನಲ್ಲಿ ಓರ್ವ ಪ್ರಯಾಣಿಕರು ಹಾಗೂ ಬಸ್ ಕ್ಲೀನರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಬೆಂಗಳೂರಿನ ನಿವಾಸಿ ಕಸ್ತೂರಿ ಶಾನ್ ಬಾಗ್ (64), ಬಸ್ ಕ್ಲೀನರ್ ಅಶೋಕ್ (25) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಬೆಂಕಿ
ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ (Udupi) ಘಟನೆ ಸಂಭವಿಸಿದ್ದು, ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಅದೃಷ್ಟವಶಾತ್ (Bus Fire Accident) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಡುಪಿಯಿಂದ ಸಾಗರದತ್ತ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ನಿರ್ವಾಹಕರು ತಕ್ಷಣ ಸಮಯಪ್ರಜ್ಞೆ ಮೆರೆದು ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ನಡೆದಿದೆ. ಮೃತರನ್ನು ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆ ನಿವಾಸಿಗಳಾದ ಸಿದ್ದಾರ್ಥ (27), ಹಸನ್ಮುಖಿ (29) ಹಾಗೂ ಯಶೋಧಾ ಬಾಯಿ (51) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸೌಂದರ್ಯ (26), ಸಿಂಧು (24) ಹಾಗೂ ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.