ಬಟ್ಟೆ ವ್ಯಾಪಾರದಲ್ಲಿ ನಷ್ಟ; ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು
ಮಂಡ್ಯದ ನೆಹರು ನಗರದಲ್ಲಿ ಘಟನೆ ನಡೆದಿದೆ. ವ್ಯಾಪಾರದಲ್ಲಿ ನಷ್ಟದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಪಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
-
ಮಂಡ್ಯ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮಂಡ್ಯದ (Mandya) ನೆಹರು ನಗರದಲ್ಲಿ ನಡೆದಿದೆ. ಮೃತರನ್ನು ಪ್ರಭಾಕರ್, ಅವರ ಪತ್ನಿ ಜ್ಯೋತಿ ಹಾಗೂ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ, ಜ್ಯೋತಿ ಹಾಗೂ ಸಂತೋಷ್ ಅವರು ಕಳೆದ ರಾತ್ರಿ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಇವರಿಬ್ಬರ ಸಾವಿಗೆ ನಿಖರವಾದ ಕಾರಣ ಏನೆಂಬುದು ಗೊತ್ತಾಗಿಲ್ಲ. ಆದರೆ, ಈ ಘಟನೆ ನಡೆದ ಬೆನ್ನಲ್ಲೇ ಇಂದು ಮುಂಜಾನೆ ಕುಟುಂಬದ ಮುಖ್ಯಸ್ಥ ಪ್ರಭಾಕರ್ ಅವರು ತಮ್ಮದೇ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವ್ಯಾಪಾರದಲ್ಲಿ ನಷ್ಟದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಪಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಗ
ಮೃತಪಟ್ಟ ವ್ಯಾಪಾರಿಯ ಪುತ್ರ ಸಂತೋಷ್ ಅವರಿಗೆ ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು ಎನ್ನಲಾಗಿದೆ. ಹೊಸ ಬಾಳಿಗೆ ಕಾಲಿಟ್ಟಿದ್ದ ಯುವಕ ಹಾಗೂ ಆತನ ಪೋಷಕರು ಹೀಗೆ ದಿಢೀರನೆ ಸಾವಿನ ಹಾದಿ ಹಿಡಿದಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಡೆತ್‌ನೋಟ್ ಪತ್ತೆ
ಮಂಡ್ಯ ಎಸ್ಪಿ ಶೋಭರಾಣಿ ಅವರು ನೀಡಿರುವ ಹೇಳಿಕೆಯ ಪ್ರಕಾರ, ಪ್ರಭಾಕರ್ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಸರ್ಕಾರದ ನೀತಿಗಳ ವಿರುದ್ಧ ಮತ್ತು ಖಾಸಗಿ ಫೈನಾನ್ಸ್‌ಗಳ ವಿರುದ್ಧ ಗಂಭೀರ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ! 225 ಜಿಲೆಟಿನ್ ವಶಕ್ಕೆ
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಬಿಟ್ಟಾಗಿನಿಂದ ನಮ್ಮ ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿದುಹೋಗಿದೆ. ಜನರು ಮಾರುಕಟ್ಟೆಗೆ ಬರುವುದು ಕಮ್ಮಿಯಾಗಿದೆ. ಇದರಿಂದ ತೀವ್ರ ನಷ್ಟ ಅನುಭವಿಸುತ್ತಿದ್ದೇನೆ ಮತ್ತು ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗುತ್ತಿಲ್ಲ. ಖಾಸಗಿ ಫೈನಾನ್ಸ್‌ಗಳವರು ಸಾಲ ಕಟ್ಟದಿದ್ದರೆ ಮನೆ ಬಳಿ ಬಂದು ಮಾನ ಹರಾಜು ಹಾಕುತ್ತಿದ್ದಾರೆ. ಸಾಲದ ಕಿರುಕುಳ ತಾಳಲಾರದೆ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ" ಎಂದು ಪ್ರಭಾಕರ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.