ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basangouda Patil Yatnal: ಮದ್ದೂರಿನಲ್ಲಿ ಹಿಂದೂ ಫೈರ್‌ ಬ್ರ್ಯಾಂಡ್‌ ಯತ್ನಾಳ್‌ ಗರ್ಜನೆ; ಹೊಸ ಪಕ್ಷ ಘೋಷಣೆ

ಮಂಡ್ಯ ಜಿಲ್ಲೆಯ ಮದ್ದೂರಿಗೆ ಭೇಟಿ ನೀಡಿದ ಹಿಂದೂ ಫೈರ್ ಬ್ರ್ಯಾಂಡ್, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಘೋಷಿಸಿದ್ದಾರೆ. ʼʼನಾನು ಪ್ರತಾಪ್‌ ಸಿಂಹ ಸೇರಿ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ. ಜೆಸಿಬಿ ನಮ್ಮ ಪಕ್ಷದ ಗುರುತುʼʼ ಎಂದು ಅವರು ಹೇಳಿದ್ದಾರೆ.

ಮಂಡ್ಯ: ಮದ್ದೂರು ಪಟ್ಟಣದಲ್ಲಿ (Maddur) ಆಯೋಜಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಬಳಿಕ ಉದ್ವಿಗ್ನಗೊಂಡಿದ್ದ ಪರಿಸ್ಥಿತಿ ಇದೀಗ ನಿಯಂತ್ರಣಕ್ಕೆ ಬಂದಿದೆ. ಈ ಮಧ್ಯೆ ಗುರುವಾರ (ಸೆಪ್ಟೆಂಬರ್ 11) ಹಿಂದೂ ಫೈರ್ ಬ್ರ್ಯಾಂಡ್, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮದ್ದೂರಿಗೆ ಭೇಟಿ ನೀಡಿ ಹೊಸ ಪಕ್ಷ ಘೋಷಿಸಿದ್ದಾರೆ. ಆ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ʼʼನಾನು ಪ್ರತಾಪ್‌ ಸಿಂಹ ಸೇರಿ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ. ಜೆಸಿಬಿ ನಮ್ಮ ಪಕ್ಷದ ಗುರುತುʼʼ ಎಂದು ಅವರು ಗುಡುಗಿದ್ದಾರೆ.

ಸೆಪ್ಟೆಂಬರ್‌ 10ರಂದು ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರು, ಕಾರ್ಯಕರ್ತರು ಮದ್ದೂರಿನಲ್ಲಿ ಬೃಹತ್‌ ಶೋಭಾಯಾತ್ರೆ ನಡೆಸಿ ಶಕ್ತಿ ಪ್ರದರ್ಶಿಸಿದ್ದರು. ಅದರ ಬೆನ್ನಲ್ಲೇ ಯತ್ನಾಳ್‌ ಇದೀಗ ಮದ್ದೂರಿನಲ್ಲಿ ಸಂಚಲನ ಮೂಡಿಸಿದ್ದಾರೆ. ಯತ್ನಾಳ್‌ ಭೇಟಿ ವೇಳೆಯೂ ಸಾವಿರಾರು ಸಂಖ್ಯೆಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದರು. ರಾಮ ಮಂದಿರ ಬಳಿ ಭಾಷಣ ಮಾಡಿದ ಯತ್ನಾಳ್​, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.



ಈ ಸುದ್ದಿಯನ್ನೂ ಓದಿ: Maddur Stone Pelting: ಮದ್ದೂರು ಕಲ್ಲು ತೂರಾಟ ಪ್ರಕರಣ; 22 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹೊಸ ಪಕ್ಷ ಘೋಷಣೆ

ʼʼನಾವು ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ. ನಮ್ಮ ಚಿಹ್ನೆಯಾಗಿ ಜೆಸಿಬಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಅಕ್ರಮ ಮಸೀದಿಗಳನ್ನು ನೆಲಸಮ ಮಾಡುತ್ತೇವೆ. ಕರ್ನಾಟಕದಲ್ಲೂ ಯೋಗಿ ಆದಿತ್ಯನಾಥ್‌ ಮಾದರಿಯ ಆಡಳಿತ ತರುವುದು ನಮ್ಮ ಗುರಿʼʼ ಎಂದರು.

ʼʼಪ್ರತಾಪ್ ಸಿಂಹ, ನಾವೆಲ್ಲ ಹಿಂದೂಗಳ ಪರ ಮಾತಾಡುತ್ತೇವೆ. ನಾವು ಪ್ರತಾಪ್ ಸಿಂಹ ಒಂದಾಗಿ ಹೊಸ ಸರ್ಕಾರ ತರುತ್ತೇವೆʼʼ ಎಂದು ಹೇಳಿದರು. ʼʼಸಿಎಂ ಸಿದ್ದರಾಮಯ್ಯ ಅವರದ್ದು ಔರಂಗಜೇಬ್ ಸರ್ಕಾರ. ಈ ಸರ್ಕಾರದಲ್ಲಿ ಸಾಬರಿಗೆ ಗುತ್ತಿಗೆಯಲ್ಲೂ ಮೀಸಲಾತಿ ಕೊಟ್ಟಿದೆ. ವಕ್ಫ್ ದೇಣಿಗೆ ಕೊಡುತ್ತಿರುವ ಮುಸ್ಲಿಂ ಸರ್ಕಾರ ಬೇಕ? ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬ ಬೇಕೋ ಹೇಳಿ. ನನಗೆ ಆಶೀರ್ವಾದ ಮಾಡಿದ್ರೆ ರಾಜ್ಯಾದ್ಯಂತ ತಲೆ ಎತ್ತಿರುವ ಅಕ್ರಮ ಮಸೀದಿ ತೆರವುಗೊಳಿಸುತ್ತೇನೆʼʼ ಎಂದು ವಾಗ್ದಾನ ನೀಡಿದರು.

ʼʼನಾನು ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಾಡುವವರನ್ನು ಇಲ್ಲವಾಗಿಸುತ್ತೇನೆ. ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮೀಸಲಿರಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತಬೇಕು. 2028ಕ್ಕೆ ವಿಧಾನಸೌಧದ ಎದುರು ಎಲ್ಲರೂ ಭಗವಧ್ವಜ ತರಬೇಕುʼʼ ಎಂದು ಕರೆ ನೀಡಿದರು.

ಹಿಂದೂ ಕಾರ್ಯಕರ್ತೆಯ ಮೇಲೆ ಎಫ್‌ಐಆರ್‌

ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ ಹಿಂದೂ ಕಾರ್ಯಕರ್ತರು ಸೆಪ್ಟೆಂಬರ್‌ 8ರಂದು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನಲ್ಲಿ ಏಟು ತಿಂದಿದ್ದ ಜ್ಯೋತಿ ಎನ್ನುವ ಯುವತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಲಾಠಿ ಏಟು ಬಿದ್ದ ನೋವಿನಲ್ಲಿ ಜ್ಯೋತಿ ರಸ್ತೆ ಮೇಲೆಯೇ ಕಿರುಚಾಡಿ, ಗೋಗರೆದಿದ್ದಳು. ಅಲ್ಲದೆ ಸಿಎಂ ಸಿದ್ದರಾಮಯ್ಯಗೆ ಬೈದಿದ್ದಳು. ಇದೀಗ ಮದ್ದೂರು‌ ಠಾಣೆ ಪಿಐ ಶಿವಕುಮಾರ್ ದೂರು ಆಧರಿಸಿ ಜ್ಯೋತಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಯತ್ನಾಳ್‌ ಕೂಡ ಜ್ಯೋತಿ ಅವರನ್ನು ಮಾತನಾಡಿದರು.