ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mangaluru Lit Fest: ಮಂಗಳೂರು ಲಿಟ್‌ ಫೆಸ್ಟ್‌ 8ನೇ ಆವೃತ್ತಿಗೆ ಯಶಸ್ವಿ ಸಮಾರೋಪ: ಕಿಕ್ಕಿರಿದು ತುಂಬಿದ ಗೋಷ್ಠಿಗಳು, ಯುವಪೀಳಿಗೆ ಭಾಗಿ

ಎರಡು ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಾಹಿತ್ಯ ಆಸಕ್ತರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಯುವಕ ಯುವತಿಯರು ಎರಡು ದಿನಗಳು ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಂಭ್ರಮಿಸಿದ್ದು ಯುವ ಜನತೆಗೆ ಇನ್ನೂ ಪುಸ್ತಕದ ಅಭಿರುಚಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿತ್ತು. ಹಲವು ಪುಸ್ತಕದ ಮಳಿಗಗೆಳು, ಲೇಖಕರ ಜೊತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧ ಸಮಯಪಾಲನೆಯಿಂದ ಕಾರ್ಯಕ್ರಮ ನೆರವೇರಿತು.

ಮಂಗಳೂರು ಲಿಟ್‌ ಫೆಸ್ಟ್‌ 8ನೇ ಆವೃತ್ತಿಗೆ ಯಶಸ್ವಿ ಸಮಾರೋಪ: ಯುವಪೀಳಿಗೆ ಭಾಗಿ

ಮಂಗಳೂರು ಲಿಟ್‌ ಫೆಸ್ಟ್ -

ಹರೀಶ್‌ ಕೇರ
ಹರೀಶ್‌ ಕೇರ Jan 12, 2026 4:19 PM

ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ಅಪೂರ್ವ ಜನಸ್ಪಂದನೆ, ಸಾಹಿತ್ಯಾಸಕ್ತರ ಆಸಕ್ತಿಕರ ಭಾಗವಹಿಸುವಿಕೆ, ಗಂಭೀರ ಚರ್ಚೆಗಳ ಜರುಗುವಿಕೆಯಿಂದ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ ಅಲ್ಲಿ ಎರಡು ದಿನಗಳ ಕಾಲ ನಡೆದ 8ನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್‌ (Mangaluru Lit Fest) ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಕಾರ್ಯಕ್ರಮದ ಸಮಾರೋಪ ಗೋಷ್ಠಿಯಾಗಿ ‘ಭೈರಪ್ಪನವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ’ ಎಂಬ ನಡೆದಿದ್ದು, ಶತಾವಧಾನಿ ಗಣೇಶ್‌ ಹಾಗೂ ಜಿಬಿ ಹರೀಶ್‌ ವಿಶೇಷ ಸಂವಾದ ನಡೆಸಿದರು. ಭಾರತ್ ಫೌಂಡೇಷನ್ ಟ್ರಸ್ಟಿ ಸುನೀಲ್ ಕುಲಕರ್ಣಿ ಧನ್ಯವಾದ ಸಲ್ಲಿಸಿದರು.

ಎರಡು ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಾಹಿತ್ಯ ಆಸಕ್ತರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಯುವಕ ಯುವತಿಯರು ಎರಡು ದಿನಗಳು ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಂಭ್ರಮಿಸಿದ್ದು ಯುವ ಜನತೆಗೆ ಇನ್ನೂ ಪುಸ್ತಕದ ಅಭಿರುಚಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿತ್ತು. ಹಲವು ಪುಸ್ತಕದ ಮಳಿಗಗೆಳು, ಲೇಖಕರ ಜೊತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧ ಸಮಯಪಾಲನೆಯಿಂದ ಕಾರ್ಯಕ್ರಮ ನೆರವೇರಿತು.

ರಾಷ್ಟ್ರೀಯತೆ, ಪತ್ರಿಕೋದ್ಯಮ, ವಿಜ್ಞಾನ, ಸಾಹಿತ್ಯ, ಭೈರಪ್ಪನವರ ಚಿಂತನೆಯ ಕುರಿತು ಹಲವು ಚರ್ಚೆಗಳು ನಡೆದಿದ್ದು, ಎಲ್ಲ ಚರ್ಚೆಗಳನ್ನು ಬಹಳ ಗಂಭೀರವಾಗಿ ಕುಳಿತು ಪ್ರೇಕ್ಷಕರು ಆಸ್ವಾದಿಸಿದರು. ಒಂದೇ ಸಮಯಕ್ಕೆ ಮೂರು ಪ್ರತ್ಯೇಕ ವೇದಿಕೆಗಳಲ್ಲಿ ಗೋಷ್ಠಿಗಳಿದ್ದರೂ ಎಲ್ಲ ಕಡೆ ಸಭೆ ಬಹುತೇಕ ತುಂಬಿತ್ತು ಎನ್ನುವುದು ಖುಷಿಯ ಸಂಗತಿ.

ಎರಡನೇ ದಿನದ ಗೋಷ್ಠಿಗಳು:

ಮೊದಲನೇ ಗೋಷ್ಠಿಯಲ್ಲಿ ಬಾಹ್ಯಾಕಾಶದ ತಂತ್ರಜ್ಞಾನದ ಕುರಿತು ದುವ್ವೂರಿ ಸುಬ್ರಮಣ್ಯಂ ಹಾಗೂ ಪ್ರೊ. ಅಲೋಕ್‌ ಕುಮಾರ್‌ ಬೆಳಕು ಚೆಲ್ಲಿದರು. ಈ ಗೋಷ್ಠಿಯನ್ನು ಕಾರ್ತಿಕ್‌ ಸುಬ್ರಮಣ್ಯ ನಡೆಸಿಕೊಟ್ಟರು. ಇನ್ನೊಂದು ವೇದಿಕೆಯಲ್ಲಿ ಅರ್ಜುನ್‌ ಭಾರಧ್ವಾಜ್‌ ಹಾಗೂ ಬಿ.ಎನ್‌ ಶಂಕರ್‌ ನಡೆಸಿದ ಸಂವಾದದಲ್ಲಿ ಭೈರಪ್ಪನವರ ಸಾಹಿತ್ಯದಲ್ಲಿ ಕಲೆ, ರಸ, ಧ್ವನಿ ಮತ್ತು ಭಾರತೀಯತೆಯ ಕುರಿತು ಚರ್ಚೆ ಮಾಡಲಾಯಿತು. ಎರಡನೇ ಗೋಷ್ಠಿಯಲ್ಲಿ ದೇಶದ ಜಾಗತಿಕ ಸಂಬಂಧಗಳ ಕುರಿತಾಗಿ ವಿಜೇತ್‌ ಕನಹಳ್ಳೀ ನಡೆಸಿಕೊಟ್ಟ ಸಂವಾದದಲ್ಲಿ ಪ್ರೊಫೆಸರ್‌ ಡಾ. ಶ್ರೀರಾಮ್‌ ಸುಂದರ್ ಚೌಲಿಯಾ, ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಟಿ.ಎಸ್‌ ತಿರುಮೂರ್ತಿ ಮಾಹಿತಿ ಹಂಚಿಕೊಂಡರು. ಹಾಗೆಯೇ ನೆರೆಹೊರೆ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ರುಚಿರಾ ಕಾಂಬೋಜ್‌, ಡಾ. ಸರಸ್ವತಿ ರಾವ್‌ ಜೊತೆಗೆ ಡಾ. ಬಿದ್ಡಂಡ ಚೆಂಗಪ್ಪ ಮಾತುಕಥೆ ನಡೆಸಿದರು.

ಇನ್ನೊಂದು ವೇದಿಕೆಯಲ್ಲಿ ಸೈನಿಕರ ಜೀವನದ ಕಥೆಗಳನ್ನು ಕೇಳುವ ಅವಕಾಶ ಏರ್ಪಡಿಸಲಾಗಿತ್ತು. ಸೈನಿಕರ ಕುಟುಂಬವನ್ನು ಭೇಟಿ ಮಾಡಿ ಕಥೆ ಕೇಳಿದ ವಿಕಾಸ್‌ ಮಾನಸ್‌ ಹಾಗೂ ಸೇನೆಗೆ ಸೇರಲು ಸಹಾಯ ಆಗುವಂತೆ ತರಬೇತಿ ನೀಡಲು ಸಹಕಾರ ಮಾಡುತ್ತಿರುವ ಆಕಾಶ್‌ ರಾಜ್‌ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭೈರಪ್ಪನವರ ಕಾದಂಬರಿಗಳಲ್ಲಿ ಸಾಮಾಜಿಕ ಒಳನೋಟಗಳ ಕುರಿತು ಜಿಬಿ ಹರೀಶ್‌ ಹಾಗೂ ದಿವಾಕರ್‌ ಹೆಗಡೆ ಸೂಕ್ಷ್ಮ ಚಿತ್ರಣ ನೀಡಿದರು. ಚಿತ್ರರಂಗದಲ್ಲಿ ಹೇಗೆ ಪರಂಪರೆಯನ್ನು ತರಬಹುದು ಹಾಗೂ ಹೇಗೆ ಕಾಣುತ್ತಿದ್ದೇವೆ ಎನ್ನುವುದರ ಕುರಿತು ವಿಸ್ತಾರವಾಗಿ ಬಾಸುಮ ಕೊಡಗು ಹಾಗೂ ಶ್ರೀರಾಜ್‌ ಗುಡಿ ಚರ್ಚೆ ಮಾಡಿದರು.

ಇದರ ಜೊತೆಗೆ ಕನ್ನಡದ ಸೃಜನಶೀಲ ಜವಾಬ್ದಾರಿ ಗೋಷ್ಠಿಯಲ್ಲಿ ನಟಿ ಮಾಳವಿಕಾ ಅವಿನಾಶ್‌ ಹಾಗೂ ನಿರ್ದೇಶಕ ಪಿ. ಶೇಷಾದ್ರಿ ಸಿನಿಮಾಗಳಲ್ಲಿ ಇರುವ ಸಾಮಾಜಿಕ ಜವಾಬ್ದಾರಿ ಕುರಿತು ಮಾಹಿತಿ ಹಂಚಿಕೊಂಡರು. ಈ ಗೋಷ್ಠಿಯನ್ನು ಪಲ್ಲವಿ ರಾಜ್‌ ಕಾರಂತ್‌ ನಡೆಸಿದರು. ಪತ್ರಿಕೋದ್ಯಮದ ಸೂಕ್ಷ್ಮತೆಗಳು ಹಾಗೂ ಜವಾಬ್ದಾರಿಗಳ ಕುರಿತಾಗಿ ವಿಸ್ತೃತವಾಗಿ ಎಎನ್‌ಐ ಮುಖ್ಯ ಸಂಪಾದಕಿ ಸ್ಮಿತಾ ಪ್ರಕಾಶ್‌ ಹೇಳಿದರು. ಸುರಭಿ ಹೊದಿಗೆರೆ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.

ಪುಸ್ತಕ ಚರ್ಚೆ ಮತ್ತು ಭಾಷೆಯ ಮಹತ್ವ:

ವಿಶ್ವೇಶ್ವರ ಭಟ್‌ ಬರೆದ ʼಬದುಕುಳಿದವರು ಕಂಡಂತೆʼ ಕೃತಿಯಲ್ಲಿರುವ ವಿಶೇಷತೆಗಳ ಬಗ್ಗೆ ಹಾಗೂ ಇಸ್ರೇಲ್‌ ದುರಂತದ ಬಗ್ಗೆ ಚರ್ಚೆ ನಡೆಸಲಾಯಿತು. ಶ್ರೀಕಾಂತ್‌ ಶೆಟ್ಟಿ ಈ ಗೋಷ್ಠಿಯನ್ನು ನಡೆಸಿಕೊಟ್ಟರು. ಹಾಗೆಯೇ ಜಯಂತ್‌ ಕೋಡ್ಕಣಿ ಹಾಗೂ ಮನುಜ ವೀರಪ್ಪ ʼರೆಡ್‌ ಚೆರ್ರಿಸ್‌ ಆನ್‌ ದ ಕೆನರಾ ಕೋಸ್ಟ್:‌ ದ ಕ್ರಿಕೆಟ್‌ ಇನ್‌ ಮಂಗಳೂರು ಆಂಡ್‌ ಉಡುಪಿʼ ಪುಸ್ತಕದ ಕುರಿತು ಚರ್ಚೆ ಮಾಡಲಾಯಿತು. ಕುಮಾರವ್ಯಾಸ ಭಾರತದ ಕೆಲವು ಅಧ್ಯಾಯಗಳ ವಾಚನ ಮತ್ತು ಅದಕ್ಕೆ ವ್ಯಾಖ್ಯಾನವನ್ನೂ ನೀಡಲಾಯಿತು. ಸಮುದ್ಯತಾ ಮತ್ತೂರು ಹಾಗೂ ಪ್ರಸಾದ್‌ ಭಾರಧ್ವಾಜ ವಾಚನ ಮಾಡಿದರೆ ಪಾದೇಕಲ್ಲು ವಿಷ್ಣು ಭಟ್‌ ವ್ಯಾಖ್ಯಾನ ನೀಡಿದರು.

ಗಮನ ಸೆಳೆದ ಅಂಶಗಳು:

ಹರಟೆ ಕಟ್ಟೆ ವೇದಿಕೆಯಲ್ಲಿ ಚಿಣ್ಣರ ಅಂಗಳ ಎಂಬ ಕಾರ್ಯಕ್ರಮ ಸಂಸ್ಕೃತ ಭಾರತಿ ತಂಡದಿಂದ ನಡೆಸಿಕೊಡಲಾಯಿತು. ಸಂಸ್ಕೃತದಲ್ಲಿ ಸಂಖ್ಯಾ ವಾಚನ ಹಾಗೂ ಹಲವು ಆಕರ್ಷಕ ಚಟುವಟಿಕೆಗಳು ಏರ್ಪಡಿಸಲಾಗಿತ್ತು. ಗೋಷ್ಠಿಗಳು ನಡುವೆ ಚಿತ್ರ ಕಲಾವಿದ ಬಿ.ಎನ್‌ ಆಚಾರ್ಯ ಆಕರ್ಷಕ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಮೆಮೊರಿ ವಾಲ್ ಬಳಿ ಸಾಹಿತ್ಯಾಸಕ್ತರು ತಮ್ಮ ಮೆಚ್ಚಿನ ಲೇಖಕರ ಪುಸ್ತಕಕ್ಕೆ ಸಹಿ ಪಡೆಯುವುದು, ಅವರ ಜೊತೆ ನಿಂತು ಫೋಟೊ ತೆಗೆಸಿಕೊಳ್ಳುವುದು ಹಲವರಿಗೆ ನೆನಪಾಗಿ ಉಳಿಯುವ ಕ್ಷಣವಾಯಿತು. ಲೇಖಕರು ಕೂಡ ಓದುಗರ ಜೊತೆ ನಗು ಮುಖದಿಂದ ಮಾತನಾಡಿ ಸಹಿ ಹಾಕಿದರು. ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಪಾಂಡಾ ಡೈರಿ, ಹೂವಿನ ಡೈರಿ, ಪಾಂಡಾ ಪೆನ್, ಹೂವಿನ ಪೆನ್ ಮತ್ತು ಮುದ್ದಾದ ಪೆನ್ಸಿಲ್‌ಗಳು ಸಾಹಿತ್ಯಾಸಕ್ತರ ಗಮನ ಸೆಳೆದವು. ರಾಣಿ ಅಬ್ಬಕ್ಕ ಜೀವನವನ್ನು ಆಧರಿಸಿದ ಬೊಂಬೆ ಆಟವನ್ನು ಉಜ್ವಲ ಕೃಷ್ಣ ಈಗಿನ ಯುವಜನತೆಗೆ ಆಕರ್ಷಕವಾಗವಂತೆ ಪ್ರಸ್ತುತಪಡಿಸಿದರು. ಶತಾವಧಾನಿ ಆರ್.‌ ಗಣೇಶ್‌ ಅವರ ಜೊತೆಗಿನ ಮುಕ್ತ ಸಂವಾದ ಕಾರ್ಯಕ್ರಮದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿತ್ತು.