Holi Festival : ಬಣ್ಣಗಳ ಹಬ್ಬ ಹೋಳಿ; ಈ ಹಬ್ಬದ ಇತಿಹಾಸ ಏನು? ಯಾಕೆ ಆಚರಿಸುತ್ತಾರೆ ಗೊತ್ತಾ?
ವಸಂತ ಋತುವಿನ ಆಗಮನವನ್ನು ಸಾರುವ ಹೋಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಲಿಕಾ ದಹನದ ಮೂಲಕ ಕೆಟ್ಟತನದ ನಾಶವನ್ನು ಸಂಕೇತಿಸಿ, ನಂತರ ಬಣ್ಣಗಳ ಓಕುಳಿಯಾಟದಲ್ಲಿ ಜನರು ಸಂತೋಷ ಹಂಚಿಕೊಳ್ಳುತ್ತಾರೆ. ಹಿರಣ್ಯಕಶಿಪು–ಪ್ರಹ್ಲಾದ ಮತ್ತು ಶಿವ–ಮನ್ಮಥ ಪ್ರಸಂಗಗಳು ಹಬ್ಬದ ಪೌರಾಣಿಕ ಹಿನ್ನೆಲೆಯಾಗಿದ್ದು, ಭಕ್ತಿ, ಸತ್ಯ ಮತ್ತು ಧರ್ಮದ ಜಯವನ್ನು ಈ ಹಬ್ಬ ಸಾರುತ್ತದೆ.
ಹೋಳಿ ಹಬ್ಬ -
ಬೆಂಗಳೂರು: ದೇಶದಾದ್ಯಂತ ಹೋಳಿ ಹಬ್ಬವನ್ನು(Holi Festival) ಇಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಜಾತಿ–ಮತ ಭೇದವಿಲ್ಲದೆ ಜನರು ಒಂದಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಿದ್ದಾರೆ. ವಸಂತ ಋತುವಿನ ಆಗಮನವನ್ನು ಸೂಚಿಸುವ ಈ ಹಬ್ಬವು ಚಳಿಗಾಲದ ಅಂತ್ಯವನ್ನು ಸಾರುತ್ತದೆ.
ಹೋಳಿ ಆಚರಣೆ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲ ದಿನ “ಹೋಲಿಕಾ ದಹನ” ನಡೆಸಿ ಕೆಟ್ಟದನ್ನು ನಾಶ ಮಾಡುವುದನ್ನು ಸಂಕೇತಿಸಲಾಗುತ್ತದೆ. ಎರಡನೇ ದಿನ ಜನರು ಬಣ್ಣಗಳನ್ನು ಎರಚಿಕೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಆಚರಿಸುತ್ತಾರೆ. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಹಂಚಿಕೊಳ್ಳುತ್ತಾರೆ.
ಹೀಗೆ ಜಾತಿ–ಮತ ಭೇದವಿಲ್ಲದೆ ಎಲ್ಲಾರು ಒಂದಾಗಿ ಹೊಸ ಚೈತನ್ಯವನ್ನು ಸ್ವಾಗತಿಸುವ ಹೋಳಿ ಹಬ್ಬದ ಆಚರಣೆ, ಇತಿಹಾಸ ಹಾಗೂ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.
ಎರಡು ದಿನಗಳ ಆಚರಣೆ
ಹೋಳಿ ಹಬ್ಬ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ನಡೆಯುತ್ತದೆ.
ಮೊದಲ ದಿನ ರಾತ್ರಿ “ಹೋಲಿಕಾ ದಹನ” ಆಚರಿಸಲಾಗುತ್ತದೆ. ಮರದ ಕಟ್ಟೆಗಳು ರಾಶಿ ಮಾಡಿ ಅಗ್ನಿ ಹಚ್ಚಿ, ಕೆಟ್ಟದ ನಾಶವನ್ನು ಸಂಕೇತಿಸುತ್ತಾರೆ. ಕೆಲವೆಡೆ ಹೊಸ ಬೆಳೆಗಳ ಕಾಳುಗಳನ್ನು ಅಗ್ನಿಯಲ್ಲಿ ಹಾಕಿ ಸಮೃದ್ಧಿಗಾಗಿ ಪ್ರಾರ್ಥಿಸುವ ಸಂಪ್ರದಾಯವೂ ಇದೆ.
ಎರಡನೇ ದಿನ ಜನರು ಪರಸ್ಪರ ಬಣ್ಣ ಎರಚಿಕೊಂಡು ಹಬ್ಬವನ್ನು ಸಂಭ್ರಮಿಸುತ್ತಾರೆ. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಹಂಚಿಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಭಾಗಗಳಲ್ಲಿ ಜನಪದ ಗೀತೆ–ನೃತ್ಯಗಳು ಹಬ್ಬದ ಕಳೆ ಹೆಚ್ಚಿಸುತ್ತವೆ.
ಕಾಮನ ಹುಣ್ಣಿಮೆ ಆಚರಣೆ
ಕರ್ನಾಟಕದ ಹಲವೆಡೆ ಹೋಳಿಯನ್ನು “ಕಾಮನ ಹುಣ್ಣಿಮೆ” ಎಂದು ಕರೆಯುತ್ತಾರೆ. ಕಾಮದೇವನ ಪ್ರತಿಮೆಯನ್ನು ನಿರ್ಮಿಸಿ ಅಲಂಕರಿಸಿ ಊರಿನ ಪ್ರಮುಖ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮಂಗಳ ವಾದ್ಯಗಳೊಂದಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆ ಶಿವ–ಮನ್ಮಥ ಪ್ರಸಂಗವನ್ನು ಸ್ಮರಿಸುತ್ತದೆ.
ಪೌರಾಣಿಕ ಹಿನ್ನೆಲೆ
ಹೋಳಿ ಹಬ್ಬದ ಆಚರಣೆಗೆ ಎರಡು ಪ್ರಮುಖ ಕಥೆಗಳು ಸಂಬಂಧಿಸಿದ್ದವೆ.
ಹಿರಣ್ಯಕಶಿಪು – ಪ್ರಹ್ಲಾದ ಕಥೆ
ಹಿರಣ್ಯಕಶಿಪು ತೀವ್ರ ತಪಸ್ಸು ಮಾಡಿ ವಿಶೇಷ ವರ ಪಡೆದನು. ತನ್ನನ್ನೇ ದೇವರೆಂದು ಘೋಷಿಸಿ, ತನ್ನ ಮಗ ಪ್ರಹ್ಲಾದನನ್ನು ವಿಷ್ಣು ಭಕ್ತಿಯಿಂದ ದೂರ ಮಾಡಲು ಅನೇಕ ಯತ್ನಗಳನ್ನು ಮಾಡಿದನು. ವಿಷಪ್ರಯೋಗ, ಆನೆಗಳಿಂದ ತುಳಿಯಿಸುವುದು ಸೇರಿದಂತೆ ಹಲವು ಪ್ರಯತ್ನಗಳನ್ನೂ ಪ್ರಹ್ಲಾದ ಭಗವಂತನ ನಾಮಸ್ಮರಣೆಯಿಂದ ಎದುರಿಸಿದನು.
ಕೊನೆಗೆ ಹಿರಣ್ಯಕಶಿಪು ತನ್ನ ತಂಗಿ ಹೋಲಿಕಾಳ ಸಹಾಯದಿಂದ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಡಲು ಯತ್ನಿಸಿದನು. ಆದರೆ ದುಷ್ಟ ಉದ್ದೇಶದಿಂದ ಬೆಂಕಿಗೆ ಕುಳಿತ ಹೋಲಿಕಾ ದಹನಗೊಂಡು, ಪ್ರಹ್ಲಾದ ದೇವರ ಕೃಪೆಯಿಂದ ರಕ್ಷಿಸಲ್ಪಟ್ಟನು. ಈ ಘಟನೆಗೆ ಸ್ಮರಣಾರ್ಥವಾಗಿ “ಹೋಲಿಕಾ ದಹನ” ಆಚರಣೆ ನಡೆಯುತ್ತದೆ. ಇದು ಅಹಂಕಾರ ಮತ್ತು ಅಧರ್ಮದ ನಾಶವನ್ನು ಸೂಚಿಸುತ್ತದೆ.
Holi 2026: ಹೋಳಿ ಆಡಿದ ಮೇಲೆ ತ್ವಚೆ ಕಾಪಾಡಿಕೊಳ್ಳುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ
ಶಿವ – ಮನ್ಮಥ ಪ್ರಸಂಗ
ತಾರಕಾಸುರನ ಸಂಹಾರಕ್ಕಾಗಿ ಶಿವ–ಪಾರ್ವತಿ ವಿವಾಹ ಅಗತ್ಯವಿತ್ತು. ಶಿವನು ತಪಸ್ಸಿನಲ್ಲಿ ಲೀನನಾಗಿದ್ದರಿಂದ ದೇವತೆಗಳ ಮನವಿಗೆ ಸ್ಪಂದಿಸಿ ಮನ್ಮಥನು ಹೂಬಾಣ ಹಾರಿಸಿದನು. ಇದರಿಂದ ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಭಸ್ಮಗೊಳಿಸಿದನು.
ಮನ್ಮಥನ ಪತ್ನಿ ರತಿ ಪ್ರಾರ್ಥಿಸಿದ ಬಳಿಕ, ಶಿವನು ಮನ್ಮಥನನ್ನು “ಅನಂಗ” ರೂಪದಲ್ಲಿ ಲೋಕದಲ್ಲಿ ಇರಲು ಅನುಗ್ರಹಿಸಿದನು. ಈ ಘಟನೆ ಫಾಲ್ಗುಣ ಪೂರ್ಣಿಮೆಯಂದು ನಡೆದಿತೆಂದು ನಂಬಿಕೆ ಇದೆ. ಅದರಿಂದಲೇ ಈ ದಿನವನ್ನು “ಕಾಮನ ಹುಣ್ಣಿಮೆ” ಎಂದು ಕರೆಯಲಾಗುತ್ತದೆ.
ಇನ್ನು ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ. ಇದು ಕೆಟ್ಟದ ಮೇಲೆ ಒಳ್ಳೆಯದ ಜಯವನ್ನು ಸಾರುವ ಹಬ್ಬ. ದ್ವೇಷ, ಅಹಂಕಾರ, ದುಷ್ಟ ಆಲೋಚನೆಗಳನ್ನು ದಹಿಸಿ, ಪ್ರೀತಿ–ಸೌಹಾರ್ದ ಮತ್ತು ಏಕತೆಯಿಂದ ಬದುಕಬೇಕೆಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ.
ಸಮಾಜದಲ್ಲಿ ಶಾಂತಿ, ಸಂತೋಷ ಮತ್ತು ಸಹೋದರತ್ವ ಬೆಳೆಸುವ ಹಬ್ಬವೇ ಹೋಳಿ.