ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಪಿಎಸ್‌ಸಿಯಲ್ಲಿ ಭಾರಿ ಅಕ್ರಮದ ವಾಸನೆ; ಪಶು ವೈದ್ಯಾಧಿಕಾರಿ ಹುದ್ದೆ 80 ಲಕ್ಷ ರುಪಾಯಿಗೆ ಸೇಲ್‌?

ಅತ್ತ ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ಧ ಹೋರಾಟ ಭುಗಿಲೆದ್ದಿದ್ದರೆ ಇತ್ತ ರಾಜ್ಯದಲ್ಲಿ ಕೆಪಿಎಸ್‌ಸಿಯಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಗೋಲ್ಮಾಲ್‌ ನಡೆದಿದೆ ಎಂದು ಬಹಿರಂಗಪಡಿಸುವ ಆಡಿಯೊ ಹೊರ ಬಂದಿದೆ. ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರುಪಾಯಿ ಡೀಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಎಸ್‌ಸಿಯಲ್ಲಿ ಅಕ್ರಮ: ಪಶು ವೈದ್ಯಾಧಿಕಾರಿ ಹುದ್ದೆಗೆ 80 ಲಕ್ಷ ರು.?

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jul 23, 2026 5:03 PM

ಬೆಂಗಳೂರು, ಜು. 23: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಗೋಲ್ಮಾಲ್‌ ನಡೆದಿದೆ ಎಂದು ಬಹಿರಂಗಪಡಿಸುವ ಆಡಿಯೊ, ವಿಡಿಯೊ ಹೊರ ಬಂದಿದ್ದು ಭಾರಿ ಸಂಚಲನ ಸೃಷ್ಟಿಸಿದೆ. ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರುಪಾಯಿ ಡೀಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಕೂಡಲೇ ಈ ಅಕ್ರಮ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಸಮಗ್ರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ದಲ್ಲಾಳಿಗಳು ಮತ್ತು ಇದರ ಹಿಂದಿರುವ ಕಾಣದ ಕೈಗಳನ್ನು ಜೈಲಿಗಟ್ಟಬೇಕು. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಸದ್ಯ ಹಿರ ಬಿದ್ದಿರುವ ಆಡಿಯೊ, ವಿಡಿಯೊದಲ್ಲಿ ಉದ್ಯೋಗಾರ್ಥಿಗಳನ್ನು ಸಂಪರ್ಕಿಸಿ ಏಜೆಂಟರು ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ಅಭ್ಯರ್ಥಿಗಳು ನಡೆಸಿದ ಸ್ಟ್ರಿಂಗ್‌ ಆಪರೇಷನ್‌ನಲ್ಲಿ ಈ ವಿವರ ಬಹಿರಂಗವಾಗಿದೆ. ಪೋಸ್ಟಿಂಗ್‌ ಬೇಕೆಂದರೆ ಕಾಸ್ಟ್‌ ಆಗುತ್ತೆ ಎಂದು ಏಜೆಂಟರು ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಜೆಡಿಎಸ್‌ ಎಕ್ಸ್‌ ಪೋಸ್ಟ್‌ ಇಲ್ಲಿದೆ:



ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಜನವರಿ 8ರಂದು ಲಿಖಿತ ಪರೀಕ್ಷೆ ನಡೆದಿತ್ತು. ಜುಲೈ 17ರಂದು ಫಲಿತಾಂಶ ಹೊರಬಿದ್ದಾಗ ಅಭ್ಯರ್ಥಿಗಳಿಗೆ ಅಚ್ಚರಿ ಕಾದಿತ್ತು. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಇದರ ಹಿಂದೆ ಇತ್ತೀಚೆಗಷ್ಟೇ ಅಮಾನತ್ತಾದ ಕೆಪಿಎಸ್‌ಸಿ ಸದಸ್ಯ ಶಿವಶಂಕರಪ್ಪ ಸಾಹುಕಾರ್ ಅವರ ಕೈವಾಡವಿದೆ ಎನ್ನಲಾಗಿದೆ.

ಮೊಹಮ್ಮದ್ ಆರಿಫ್ ಎಂಬ ಮಧ್ಯವರ್ತಿ ಕಾಂತಕುಮಾರ್ ಎಂಬವವರ ಜತೆ ಫೋನ್‌ನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ವಿಡಿಯೊ ಈಗ ವೈರಲ್ ಆಗಿದೆ. ಶಿವಶಂಕರಪ್ಪ ಸಂಬಂಧಿಕರು ಮೆರಿಟ್ ಅಂಕ ಗಳಿಸಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ.

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ಆದೇಶ

ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಆಕ್ರೋಶ

ಸದ್ಯ ಈ ವಿಚಾರವನ್ನು ಜೆಡಿಎಸ್‌ ಪ್ರಸ್ತಾವಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದೆ. ಈ ಬಗ್ಗೆ ಜೆಡಿಎಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ʼʼಕಾಂಗ್ರೆಸ್‌ ಆಡಳಿತದಲ್ಲಿ KPSC ಎಂದರೆ - K- ಕಾಸು ಕೊಟ್ಟರಷ್ಟೇ, P-ಪೋಸ್ಟಿಂಗ್, S-ಸರ್ವಿಸ್, C-ಕಮಿಷನ್. ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೆಪಿಎಸ್‌ಸಿ ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರುಪಾಯಿ ಡೀಲ್ ಆಗಿರುವ ಆಡಿಯೊ ಬಹಿರಂಗವಾಗಿರುವುದು ಕಮಿಷನ್‌ ಕಾಂಗ್ರೆಸ್‌ ಸರ್ಕಾರದ 'ರೇಟ್ ಕಾರ್ಡ್' ದಂಧೆಗೆ ತಾಜಾ ಉದಾಹರಣೆʼʼ ಎಂದು ಹೇಳಿದೆ.

ʼʼಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಬಡ ಹಾಗೂ ಪ್ರತಿಭಾವಂತ ಯುವಕರ ಭವಿಷ್ಯದ ಜತೆ ಈ ಎಟಿಎಂ ಸರ್ಕಾರ ಚೆಲ್ಲಾಟವಾಡುತ್ತಿದೆ. ದುಡ್ಡು ಕೊಟ್ಟವರಿಗೆ ಮಾತ್ರ ಸರ್ಕಾರಿ ಕೆಲಸ ಎಂದರೆ, ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು ಮುಖ್ಯಮಂತ್ರಿಗಳೇ? ರಾಜ್ಯ ಸರ್ಕಾರ ಕೂಡಲೇ ಈ ಅಕ್ರಮ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಸಮಗ್ರವಾದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ದಲ್ಲಾಳಿಗಳು ಮತ್ತು ಇದರ ಹಿಂದಿರುವ ಕಾಣದ ಕೈಗಳನ್ನು ಜೈಲಿಗೆ ಅಟ್ಟಬೇಕು. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕುʼʼ ಎಂದು ಆಗ್ರಹಿಸಿದೆ. ವಿಧಾನಸಭಾ ಠಾಣೆಯಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ದೂರು ದಾಖಲಿಸಿದ್ದು, ನೇಮಕಾತಿ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.