ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಬಿಗ್‌ ರಿಲೀಫ್‌; ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ

Mekedatu Project: ಯೋಜನೆ ಜಾರಿಗೆ ಕರ್ನಾಟಕವು ತಮಿಳುನಾಡು, ಕೇರಳಂ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ. ಜತೆಗೆ ಗಡಿಯೊಳಗೆ ನೀರು ಬಳಕೆಗೆ ಕರ್ನಾಟಕಕ್ಕೆ ಪೂರ್ಣ ಅಧಿಕಾರ ಇದೆ ಎಂದಿದೆ.

ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಜಯ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jul 27, 2026 10:18 PM

ದೆಹಲಿ, ಜು. 27: ಕರ್ನಾಟಕದ ಮಹತ್ವದ ಮೇಕೆದಾಟು ಯೋಜನೆಗೆ (Mekedatu Project) ಸಂಬಂಧಿಸಿ ಮಹತ್ವದ ಬೆಳವಣಿಗೆ ಸಂಬಂಧಿಸಿದ್ದು, ಕೇಂದ್ರದಿಂದ ರಾಜ್ಯಕ್ಕೆ ಗುಡ್‌ನ್ಯೂಸ್‌ ಸಿಕ್ಕಿದೆ. ಯೋಜನೆ ಜಾರಿಗೆ ಕರ್ನಾಟಕವು ತಮಿಳುನಾಡು, ಕೇರಳಂ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಸೋಮವಾರ (ಜುಲೈ 27) ನಡೆದ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ. ʼʼಗಡಿಯೊಳಗೆ ನೀರು ಬಳಕೆಗೆ ಕರ್ನಾಟಕಕ್ಕೆ ಪೂರ್ಣ ಅಧಿಕಾರ ಇದೆ. ಸುಪ್ರೀಂ ಕೋರ್ಟ್ (Supreme Court)​​​​ ತನ್ನ ತೀರ್ಪಿನಲ್ಲಿ ಎಲ್ಲೂ ಒಪ್ಪಿಗೆ ಪಡೆಯಲು ಹೇಳಿಲ್ಲʼʼ ಎಂದು ಹೇಳಿದ್ದಾರೆ.

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಲು ಕರ್ನಾಟಕವು ತಮಿಳುನಾಡು, ಕೇರಳಂ ಅಥವಾ ಪುದುಚೇರಿಯಿಂದ ಅನುಮತಿ ಪಡೆಯಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.

ರಾಜ್ಯದ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಸುತ್ತಮುತ್ತಲಿನ ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಪದೇ ಪದೆ ಅಡ್ಡಗಾಲು ಹಾಕುತ್ತಿದೆ. ಇದೀಗ ಕೇಂದ್ರ ಸ್ಪಷ್ಟನೆ ಮೂಲಕ ರಾಜ್ಯದ ಬಹುದೊಡ್ಡ ಅಡ್ಡಿಯೊಂದು ನಿವಾರಣೆಯಾದಂತಾಗಿದೆ.

ಮೇಕೆದಾಟು ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ʼʼ2007ರ ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ತೀರ್ಪಿನ 18ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಆದೇಶಕ್ಕೆ ಧಕ್ಕೆಯಾಗದಂತೆ ತಮ್ಮ ಗಡಿಯೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಹಕ್ಕು ರಾಜ್ಯಗಳಿಗೆ ಇದೆʼʼ ಎಂದು ರಾಜ್ ಭೂಷಣ್ ಚೌಧರಿ ವಿವರಿಸಿದ್ದಾರೆ.

ಮೇಕದಾಟು ವಿಚಾರವಾಗಿ ಪ್ರಧಾನಿಯನ್ನು ಸಂಪರ್ಕಿಸಿದ್ದ ವಿಜಯ್‌

ಮೇಕದಾಟು ಯೋಜನೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗೆ ಚರ್ಚೆ ನಡೆಸಿದ್ದರು. ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿ ಸಲ್ಲಿಸಿರುವ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಿರಸ್ಕರಿಸುವಂತೆ ಪತ್ರ ಬರೆದಿದ್ದರು. ಕರ್ನಾಟಕ ಸಲ್ಲಿಸಿರುವ ಡಿಪಿಆರ್ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್‌ನ 2018ರ ಅಂತರ್ ರಾಜ್ಯ ಜಲ ವಿವಾದದ ತೀರ್ಪಿಗೆ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.

ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕ ವಿರುದ್ಧ ಸಮರ ಸಾರಿದ ದಳಪತಿ ವಿಜಯ್‌

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡು, ಕರ್ನಾಟಕ, ಕೇರಳಂ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಂಟಾಗಿರುವ ವಿವಾದದಲ್ಲಿ ಮೇಕೆದಾಟು ಯೋಜನೆಯು ಕೂಡ ಒಂದು. ಈ ಯೋಜನೆಯಿಂದ ಕೆಳಮಟ್ಟದ ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ತಮಿಳುನಾಡಿನ ವಾದ.