ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಬಗ್ಗೆ ಮಹತ್ವದ ಅಪ್‌ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಹೇಳಿದ್ದೇನು?
Bengaluru's Second Airport: ರಾಜ್ಯ ಸರ್ಕಾರದಿಂದ ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಇದುವರೆಗೂ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಸಂಸದ ಪಿ.ಸಿ. ಮೋಹನ್ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಉತ್ತರ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜು. 27: ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru's Second Airport) ಬಗ್ಗೆ ರಾಜ್ಯದಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆಡಳಿತರೂಢ ಕಾಂಗ್ರೆಸ್ ಮತ್ತು ವಿಪಕ್ಷಗಳ ನಡುವೆ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ಬಗ್ಗೆ ವಾದ-ವಿವಾದ ಆರಂಭವಾಗಿದೆ. ಇದೀಗ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ರಾಜ್ಯ ಸರ್ಕಾರದಿಂದ 2ನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಇದುವರೆಗೂ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಸಂಸದ ಪಿ.ಸಿ. ಮೋಹನ್ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಉತ್ತರ ನೀಡಿದ್ದಾರೆ. ''2ನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ 3 ಸ್ಥಳಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧ್ಯಯನ ನಡೆಸಿತ್ತು. ಈ ಅಧ್ಯಯನ ವರದಿಯನ್ನು ಕೆಲವು ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆ ಬಳಿಕ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ'' ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕನಕಪುರದಲ್ಲಿ ಬೇಡ, ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ: ಸಿಎಂ ಡಿಕೆಶಿಗೆ ವಿಜಯೇಂದ್ರ ಆಗ್ರಹ
ರಾಜ್ಯ ಸರ್ಕಾರವು ಸ್ಥಳವೊಂದನ್ನು ಅಂತಿಮ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದೆ. ಆ ಸಭೆಯಲ್ಲಿ ಮೂರರಲ್ಲಿ ಒಂದು ಸ್ಥಳ ಗುರುತಿಸಲು ಅಧ್ಯಯನ ನಡೆಸುವಂತೆ ಖಾಸಗಿ ಏರೋಸ್ಪೇಸ್ ಸಂಶೋಧನಾ ಸಂಸ್ಥೆಗೆ ಸೂಚನೆ ನೀಡಲಾಗಿದೆ. ಈ ಸ್ಥಳ ಅಂತಿಮವಾದ ಬಳಿಕ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ತುಮಕೂರಿನಲ್ಲಿ ಆಗುತ್ತ?
ಸದ್ಯ ಕನಕಪುರ ಮತ್ತು ತುಮಕೂರು ರೇಸ್‌ನಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಉತ್ಸುಕರಾಗಿದ್ದರೆ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ತುಮಕೂರಿನಲ್ಲೇ ಆಗಲಿ ಎಂದಿದ್ದಾರೆ. ಕನಕಪುರದಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದರು. ಉದ್ದೇಶಿತ ವಿಮಾನ ನಿಲ್ದಾಣವನ್ನು ಕನಕಪುರದಲ್ಲಿ ನಿರ್ಮಿಸುವ ಬದಲು ತುಮಕೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಾಪಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದರು.
ಬೆಂಗಳೂರು ವಿಮಾನ ನಿಲ್ದಾಣ ಈಗ ಮತ್ತಷ್ಟು ಸ್ಮಾರ್ಟ್; ಅಪಘಾತ ತಡೆಗೆ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಜಾರಿ
ಇನ್ನು ವಿಜಯೇಂದ್ರ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದ ಜಿ. ಪರಮೇಶ್ವರ್ ʼʼನಾನೂ ತುಮಕೂರಿಗೆ ಏರ್‌ಪೋರ್ಟ್ ಎಂದಿದ್ದೇನೆ. ಟೆಕ್ನಿಕಲ್ ಕಮಿಟಿ ಸದಸ್ಯರು 2 ಜಾಗ ನೋಡಿದ್ದಾರೆ. ಸಚಿವ ಎಂ.ಬಿ ಪಾಟೀಲ್ ನೆಲಮಂಗಲ, ಬಿಡದಿ ಅಂತ ಹೇಳಿದ್ದಾರೆ. ಎರಡು ಸ್ಥಳಗಳನ್ನ ಪರೀಕ್ಷಿಸಿದ್ದಾರೆ. ಅದಾದ ಮೇಲೆ DGCA ಸಿಬ್ಬಂದಿಯೂ ಪರಿಶೀಲನೆ ಮಾಡಬೇಕು. ತುಮಕೂರಿನಿಂದ ಅನೇಕ ಜಿಲ್ಲೆಗಳಿಗೆ ಪ್ರಯಾಣ ಮಾಡುವವರು ಇದ್ದಾರೆ. ಅಂತಿಮವಾಗಿ ಏರ್‌ಪೋರ್ಟ್ ಎಲ್ಲಿ ನಿರ್ಮಾಣ ಆಗಬೇಕು ಎಂಬುದು ಟೆಕ್ನಿಕಲ್ ಕಮಿಟಿಗೆ ಬಿಟ್ಟ ವಿಚಾರ. ಸರ್ಕಾರ ಅಂತಿಮವಾಗಿ ಏನು ಕ್ರಮ ತೆಗೆದು ಕೊಳ್ಳಲಿದೆ ನೋಡೋಣ;ʼ ಎಂದು ಹೇಳಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.