ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Navavrundavana: ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನವು ಇಷ್ಟು ದಿನಗಳ ಕಾಲ ಕುರುಕ್ಷೇತ್ರ ದಂತಿದ್ದದ್ದು ನಿಜ. ಈಗ ಅದಕ್ಕೆ ಶಾಂತಿ ಲಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಈ ಶಾಂತಿ ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಸ್ತುತ ನಡೆದಿರುವ ಉತ್ತರಾದಿ ಮಠ ಮತ್ತು ರಾಯರ ಮಠಗಳ ನಡುವಿನ ಒಪ್ಪಂದವಷ್ಟೇ ಸಾಕಾಗುವುದಿಲ್ಲ.

ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

-

Ashok Nayak
Ashok Nayak Jan 8, 2026 7:46 AM

ಡಾ.ಕೆ.ಗಿರಿಧರ ಆಚಾರ್ಯ

ಭಾರತ ಸರಕಾರದಿಂದ ಸೀನಿಯರ್ ಫೆಲೋಶಿಪ್ ಪಡೆದ ಸಂಶೋಧಕರು

ವಿಶ್ವವಾಣಿಯಲ್ಲಿ ಬಂದ ‘ಕುರುಕ್ಷೇತ್ರ’ವಾಗಿದ್ದ ನವವೃಂದಾವನ ಇನ್ನು ‘ಧರ್ಮಕ್ಷೇತ್ರ’! ಎಂಬ ಲೇಖನವು ಮಾಧ್ವ ಸಮಾಜದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ದಶಕ ಗಳಿಂದ ನಡೆಯುತ್ತಿದ್ದ ಉತ್ತರಾದಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠಗಳ ನಡುವಿನ ಕಾನೂನು ಹೋರಾಟವು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿರುವುದು ಸ್ವಾಗತಾರ್ಹ ಸಂಗತಿ.

ಆದರೆ, ಈ ಲೇಖನದಲ್ಲಿ ವ್ಯಕ್ತವಾಗಿರುವ ಆಶಯ ಮತ್ತು ವಾಸ್ತವದ ನಡುವೆ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಲೇಖಕರು ಆಶಿಸಿದಂತೆ ನವವೃಂದಾವನವು ನಿಜವಾಗಿಯೂ ಶಾಶ್ವತವಾದ ‘ಧರ್ಮಕ್ಷೇತ್ರ’ವಾಗಬೇಕಾದರೆ, ಕೇವಲ ಎರಡು ಮಠಗಳ ಒಪ್ಪಂದ ಸಾಲದು. ಅದಕ್ಕೆ ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಸಂಬಂಧ ಹೊಂದಿ ರುವ ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ಶ್ರೀಪಾದರಾಜ ಮಠಗಳನ್ನೂ ಒಳಗೊಳ್ಳುವ ಅಗತ್ಯವಿದೆ ಎಂಬುದನ್ನು ಚರ್ಚಿಸೋಣ.

ಲೇಖನದಲ್ಲಿ ವ್ಯಕ್ತವಾಗಿರುವಂತೆ, ನವವೃಂದಾವನವು ಇಷ್ಟು ದಿನಗಳ ಕಾಲ ಕುರುಕ್ಷೇತ್ರ ದಂತಿದ್ದದ್ದು ನಿಜ. ಈಗ ಅದಕ್ಕೆ ಶಾಂತಿ ಲಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಈ ಶಾಂತಿ ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಸ್ತುತ ನಡೆದಿರುವ ಉತ್ತರಾದಿ ಮಠ ಮತ್ತು ರಾಯರ ಮಠಗಳ ನಡುವಿನ ಒಪ್ಪಂದವಷ್ಟೇ ಸಾಕಾಗುವುದಿಲ್ಲ.

ಇದನ್ನೂ ಓದಿ:Navavrundavana: ʼಕುರುಕ್ಷೇತ್ರʼವಾಗಿದ್ದ ನವ ವೃಂದಾವನ ಇನ್ನು ʼಧರ್ಮಕ್ಷೇತ್ರʼ

ಏಕೆಂದರೆ, ಸದ್ಯದ ಒಪ್ಪಂದವು ಶ್ರೀ ಕವೀಂದ್ರ ತೀರ್ಥರು ಮತ್ತು ಶ್ರೀ ವಾಗೀಶ ತೀರ್ಥರ ಆರಾಧನೆಗೆ ಮಾತ್ರ ಸೀಮಿತವಾಗಿರುತ್ತದೆ. ಏಕೆಂದರೆ ಈ ವೃಂದಾವನಗಳು ಉತ್ತರಾದಿ ಮಠ ಮತ್ತು ರಾಯರ ಮಠಗಳಿಗೆ ಮಾತ್ರ ಸಂಬಂಧಿಸಿದ್ದು ಆಗಿವೆ. ಆದ್ದರಿಂದ ಆ ಎರಡು ಆರಾಧನೆಗಳಿಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳಲು ಸರ್ವವಿಧವಾದ ಅಧಿಕಾರವು ಆ ಮಠಗಳಿಗೆ ಇದೆ.

ಆದರೆ ಇಲ್ಲಿ ಮರೆತಿರುವ ಅಥವಾ ಕಡೆಗಣಿಸಲಾಗಿರುವ ಪ್ರಮುಖ ಅಂಶವೆಂದರೆ ಶ್ರೀ ಪದ್ಮನಾಭ ತೀರ್ಥರ ಆರಾಧನೆಯ ವಿಚಾರ. ಶ್ರೀ ಪದ್ಮನಾಭ ತೀರ್ಥರು ಕೇವಲ ಈ ಎರಡು ಮಠಗಳಿಗೆ ಮಾತ್ರವಲ್ಲದೆ, ಶ್ರೀಮಧ್ವಾಚಾರ್ಯರಿಂದ ನೇರವಾಗಿ ಬಂದಂತಹ ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ಪದ್ಮನಾಭ ತೀರ್ಥರಿಂದಲೇ ಪ್ರವೃತ್ತವಾದ ಶ್ರೀ ಶ್ರೀಪಾದರಾಜ ಮಠಕ್ಕೂ ಗುರುಗಳಾಗಿದ್ದಾರೆ.

ಹೀಗಿರುವಾಗ, ಮೂಲ ಗುರುಗಳಾದ ಪದ್ಮನಾಭ ತೀರ್ಥರ ಆರಾಧನೆಯ ವಿಷಯದಲ್ಲಿ, ಅವರ ಪರಂಪರೆಯ ಪ್ರಮುಖ ಮಠಗಳನ್ನು ಹೊರಗಿಟ್ಟು ಮಾಡಿಕೊಳ್ಳುವ ಯಾವುದೇ ಒಪ್ಪಂದವು ಅಪೂರ್ಣವಾಗುತ್ತದೆ. ಈ ನಾಲ್ಕು ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ಗೌರವ ಸಿಗುವಂತಹ ಒಪ್ಪಂದ ಏರ್ಪಟ್ಟರೆ ಮಾತ್ರ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಸಾಧ್ಯ. ಇಲ್ಲದಿದ್ದರೆ, ಇದು ಮುಂದಿನ ಪೀಳಿಗೆಗೂ ವರ್ಗಾವಣೆಯಾಗುವ ಒಂದು ಜಟಿಲ ಸಮಸ್ಯೆಯಾಗಿಯೇ ಉಳಿಯುವ ಅಪಾಯವಿದೆ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ನವವೃಂದಾವನ ಗಡ್ಡೆಯ ಮೇಲೆ ವ್ಯಾಸರಾಜ ಮಠಕ್ಕೆ ಇರುವ ಅಧಿಕಾರ ಮತ್ತು ಸಂಬಂಧ ಎಷ್ಟು ಗಾಢವಾದುದು ಎಂಬುದು ಅರಿವಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶ್ರೀ ವ್ಯಾಸರಾಜರು ರಾಜಗುರು ಗಳಾಗಿ ಅತ್ಯುನ್ನತ ಸ್ಥಾನದಲ್ಲಿದ್ದರು.

ಚಕ್ರವರ್ತಿ ಶ್ರೀ ಕೃಷ್ಣದೇವ ರಾಯನಿಗೆ ಬಂದೊದಗಿದ್ದ ‘ಕುಹ ಯೋಗ’ ಎಂಬ ಗಂಡಾಂತರ ವನ್ನು ಪರಿಹರಿಸಲು, ಸ್ವತಃ ವ್ಯಾಸರಾಜರೇ ಕರ್ನಾಟಕ ಸಿಂಹಾಸನ ವನ್ನು ಏರಿ ಆರು ತಿಂಗಳ ಕಾಲ ಸಾಮ್ರಾಜ್ಯವನ್ನು ಆಳಿದರು ಎಂಬುದು ಇತಿಹಾಸದಲ್ಲಿ ದಾಖಲಾದ ಸತ್ಯ. ಇಡೀ ಸಾಮ್ರಾಜ್ಯವನ್ನೇ ಗುರುಗಳ ಪಾದಕ್ಕೆ ಅರ್ಪಿಸಲು ಸಿದ್ಧನಿದ್ದ ಕೃಷ್ಣದೇವರಾಯನ ಕಾಲದಲ್ಲಿ, ತುಂಗಭದ್ರೆಯ ಸಣ್ಣ ನಡುಗಡ್ಡೆಯನ್ನು ತಮ್ಮ ಮಠದ ಸುಪರ್ದಿಗೆ ತೆಗೆದು ಕೊಳ್ಳುವುದು ವ್ಯಾಸರಾಜರಿಗೆ ಕಷ್ಟದ ವಿಷಯವೇ ಆಗಿರಲಿಲ್ಲ. ಅಂದಿನ ರಾಜಾಜ್ಞೆಗಳು ಮತ್ತು ಗೌರವಗಳು ಇದಕ್ಕೆ ಸಾಕ್ಷಿಯಾಗಿವೆ.

ಇದಕ್ಕೆ ಪುಷ್ಟಿ ನೀಡುವಂತೆ, ನವವೃಂದಾವನದಲ್ಲಿ ಇಂದಿಗೂ ಇರುವ ಏಕೈಕ ಕಲ್ಲಿನ ಕಟ್ಟಡವನ್ನು ವ್ಯಾಸರಾಜ ಮಹಲ್ ಎಂದೇ ಕರೆಯಲಾಗುತ್ತದೆ. ಇದು ಆ ಜಾಗದ ಮೇಲೆ ವ್ಯಾಸರಾಜ ಮಠಕ್ಕೆ ಇದ್ದ ಐತಿಹಾಸಿಕ ಹಿಡಿತ ಮತ್ತು ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿದೆ.‌

ಕಾಲಾಂತರದಲ್ಲಿ ಸ್ವತಃ ಶ್ರೀ ವ್ಯಾಸರಾಜರು ಇದೇ ಪವಿತ್ರ ಕ್ಷೇತ್ರದಲ್ಲಿ ವೃಂದಾವನಸ್ಥ ರಾದರು. ಅವರಿಗಿಂತ ಮೊದಲು ಅವರ ಪ್ರಿಯ ಶಿಷ್ಯರು ಮತ್ತು ಮಹಾ ವಿರಕ್ತರೂ ಆದ ಶ್ರೀ ಗೋವಿಂದ ಒಡೆಯರು ಕೂಡ ಇಲ್ಲಿಯೇ ವೃಂದಾವನಸ್ಥರಾಗಿದ್ದಾರೆ.

ತದನಂತರದ ಕಾಲದಲ್ಲಿ ವ್ಯಾಸರಾಜರ ಶಿಷ್ಯರಾದ ಶ್ರೀ ಶ್ರೀನಿವಾಸ ತೀರ್ಥರು ಮತ್ತು ಅವರ ಶಿಷ್ಯರಾದ ಶ್ರೀ ರಾಮತೀರ್ಥರ ಬೃಂದಾವನಗಳೂ ಇಲ್ಲಿಯೇ ಸ್ಥಾಪಿತವಾಗಿವೆ. ಒಟ್ಟಾರೆ ಯಾಗಿ ನವವೃಂದಾವನದಲ್ಲಿರುವ ಒಂಬತ್ತು ಪವಿತ್ರ ಬೃಂದಾವನಗಳಲ್ಲಿ ಐದು ಬೃಂದಾ ವನಗಳು ನೇರವಾಗಿ ಶ್ರೀ ವ್ಯಾಸರಾಜ ಮಠದ ಪರಂಪರೆಗೆ ಸೇರಿದ ಯತಿಗಳದ್ದಾಗಿವೆ.

ಹೀಗಿದ್ದರೂ, ಆ ಮಠವನ್ನು ಹೊರಗಿಟ್ಟು ಮಾಡಿಕೊಳ್ಳುವ ಯಾವುದೇ ತೀರ್ಮಾನವು ಇತಿಹಾಸಕ್ಕೆ ಮಾಡುವ ಅಪಚಾರವಾಗಬಹುದು.

ವಿಜಯನಗರ ಸಾಮ್ರಾಜ್ಯದ ಪತನದ ನಂತರದ ರಾಜಕೀಯ ಸ್ಥಿತ್ಯಂತರಗಳು ಮಠದ ಭೌಗೋಳಿಕ ನೆಲೆಯ ಮೇಲೂ ಪರಿಣಾಮ ಬೀರಿದವು. ತಾಳಿಕೋಟೆ ಕದನದ ನಂತರ ವಿಜಯನಗರ ಸಾಮ್ರಾಜ್ಯವು ಪೆನುಗೊಂಡೆಗೆ (ಇಂದಿನ ಆಂಧ್ರಪ್ರದೇಶ) ಸ್ಥಳಾಂತರ ಗೊಂಡಿತು.

ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳು ರಾಜಾಶ್ರಯದ ಕಾರಣ ದಿಂದ ಸಾಮ್ರಾಜ್ಯದ ಜೊತೆಯ ಸಾಗಬೇಕಾಯಿತು. ಇದಕ್ಕೆ ಸಾಕ್ಷಿಯಾಗಿ ಶ್ರೀ ರಾಮತೀರ್ಥರ ಶಿಷ್ಯರಾದ ಶ್ರೀ ಲಕ್ಷ್ಮೀಕಾಂತ ತೀರ್ಥರ ಬೃಂದಾವನವನ್ನು ಪೆನುಗೊಂಡದಲ್ಲಿ ಕಾಣಬಹುದು. ಮುಂದೆ ಸಾಮ್ರಾಜ್ಯವು ಪೆನುಗೊಂಡದಿಂದ ವೇಲೂರಿಗೆ (ತಮಿಳುನಾಡು) ಸ್ಥಳಾಂತರವಾದಾಗಲೂ ಮಠದ ಪರಂಪರೆ ಅಲ್ಲಿಯೂ ಮುಂದುವರಿಯಿತು.

ವೇಲೂರಿನಲ್ಲಿ ಶ್ರೀಪತಿ ತೀರ್ಥರು ಮತ್ತು ಕಂಬಾಲೂರು ರಾಮಚಂದ್ರ ತೀರ್ಥರ ಬೃಂದಾವನಗಳಿರುವುದು ಈ ವಲಸೆಯ ಹಾದಿಯನ್ನು ಸ್ಪಷ್ಟಪಡಿಸುತ್ತದೆ. ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ಅಸ್ತಂಗತವಾದ ನಂತರ, ತಂಜಾವೂರಿನ ನಾಯಕ ರಾಜರ ಆಶ್ರಯದಲ್ಲಿ ಮಠವು ಮುಂದುವರಿಯಿತು.

ಹೀಗಾಗಿ ನಂತರದ ಯತಿಗಳ ಬೃಂದಾವನಗಳು ಶ್ರೀರಂಗಂ ಮತ್ತು ಕುಂಭಕೋಣಂನಂತಹ ತಮಿಳುನಾಡಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹೀಗೆ ಸುಮಾರು ಇನ್ನೂರು ವರ್ಷಗಳ ಕಾಲ ಮಠವು ಮೂಲ ನವವೃಂದಾವನದಿಂದ ಭೌಗೋಳಿಕವಾಗಿ ದೂರ ಉಳಿಯು ವಂತಾಯಿತು.

ಸುಮಾರು 1800ರ ಸುಮಾರಿಗೆ, ಟಿಪ್ಪು ಸುಲ್ತಾನನ ಮರಣಾನಂತರ ಮೈಸೂರು ಒಡೆಯರ ಆಳ್ವಿಕೆ ಪುನಃ ಸ್ಥಾಪನೆಯಾದಾಗ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಶ್ರೀ ಪೂರ್ಣಯ್ಯ ನವರು ವ್ಯಾಸರಾಜ ಮಠದ ಪೀಠಾಽಪತಿಗಳನ್ನು ಗೌರವಪೂರ್ವಕವಾಗಿ ಆಹ್ವಾನಿಸಿದರು. ಮೈಸೂರು ಅರಸರು ವಿಜಯನಗರದ ಸಾಮಂತರಾಗಿದ್ದರಿಂದ, ರಾಜಗುರುಗಳ ಪರಂಪರೆಯ ಬಗ್ಗೆ ಅವರಿಗೆ ಅಪಾರ ಗೌರವವಿತ್ತು.

ಪೂರ್ಣಯ್ಯನವರ ಪ್ರಾರ್ಥನೆಯ ಮೇರೆಗೆ ತಂಜಾವೂರಿನಲ್ಲಿದ್ದ ಮಠವು ಮೈಸೂರಿಗೆ ಸಮೀಪವಿರುವ ಕಾವೇರಿ ತಟದ ಸೋಸಲೆಗೆ ಬಂದು ನೆಲೆಸಿತು. ಸ್ವಾತಂತ್ರ್ಯ ಬರುವವರೆಗೂ ಮಠವು ಸೋಸಲೆಯಲ್ಲಿಯೇ ಕಾರ್ಯಾಚರಿಸುತ್ತಿತ್ತು.

ಈ ದೀರ್ಘ ಕಾಲಘಟ್ಟದಲ್ಲಿ, ಅಂದರೆ ಮಠವು ತಮಿಳುನಾಡು ಮತ್ತು ಸೋಸಲೆಯಲ್ಲಿ ನೆಲೆಸಿzಗ, ಭೌಗೋಳಿಕವಾಗಿ ದೂರವಿದ್ದ ಆನೆಗೊಂದಿಯ ನವವೃಂದಾವನ ಗಡ್ಡೆಯ ಮೇಲ್ವಿಚಾರಣೆಯಲ್ಲಿ ಸಹಜವಾಗಿಯೇ ವ್ಯತ್ಯಯ ಉಂಟಾಯಿತು. ಆಗಿನ ಸಾರಿಗೆ ಸಂಪರ್ಕದ ಕೊರತೆ ಮತ್ತು ರಾಜಕೀಯ ಸ್ಥಿತ್ಯಂತರಗಳ ನಡುವೆ ಅನೇಕ ಅಮೂಲ್ಯವಾದ ಐತಿಹಾಸಿಕ ದಾಖಲೆಗಳು ನಷ್ಟವಾದವು.

ಆದಾಗ್ಯೂ, ಸ್ವಾತಂತ್ರ್ಯಪೂರ್ವದಲ್ಲಿ ಆನೆಗೊಂದಿಯ ನವಾಬರು ವ್ಯಾಸರಾಜ ಮಠಕ್ಕೆ ಪತ್ರ ಬರೆದು, ನಡುಗಡ್ಡೆಯಲ್ಲಿರುವ ‘ವ್ಯಾಸರಾಜ ಮಹಲ್’ಗೆ ಕಂದಾಯ ಕಟ್ಟುವಂತೆ ನೋಟಿಸ್ ನೀಡುತ್ತಿದ್ದರು ಎಂಬುದು ಉ‌ಲ್ಲೇಖಾರ್ಹ.

ಇದು ಆ ಜಾಗದ ಒಡೆತನ ಯಾರಿಗೆ ಸೇರಿತ್ತು ಎಂಬುದಕ್ಕೆ ಪ್ರಬಲ ಸಾಕ್ಷಿಯಾಗಿತ್ತು. ಆದರೆ ಕಾಲ ಕ್ರಮೇಣ ನೋಟಿಸ್‌ಗಳು ನಿಂತುಹೋದವು ಮತ್ತು ಆಡಳಿತಾತ್ಮಕ ದಾಖಲೆಗಳು ಬೇರೆಯವರ ಹೆಸರಿಗೆ ವರ್ಗಾವಣೆಯಾದವು. ಇದರ ಪರಿಣಾಮವಾಗಿ, ಐದು ಜನ ಶ್ರೇಷ್ಠ ಯತಿಗಳ ಬೃಂದಾವನಗಳನ್ನು ಹೊಂದಿದ್ದರೂ, ಇಂದು ವ್ಯಾಸರಾಜ ಮಠವು ವರ್ಷದ ಕೇವಲ 12 ದಿನಗಳನ್ನು (ಆರಾಧನಾ ದಿನಗಳು) ಹೊರತುಪಡಿಸಿ ಉಳಿದ ದಿನಗಳಲ್ಲಿ ಅಲ್ಲಿಗೆ ಪ್ರವೇಶಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಆರಾಧನೆ ಮತ್ತು ಪೂಜಾ ಹಕ್ಕುಗಳ ಕುರಿತು ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ಉತ್ತರಾದಿ ಮಠದ ನಡುವೆ ವಿವಾದಗಳು ಪ್ರಾರಂಭವಾಗಿ ನ್ಯಾಯಾಲಯದ ಮೆಟ್ಟಿಲೇರಿದವು. ದುರದೃಷ್ಟವಶಾತ್, ಶತಮಾನಗಳ ಹಿಂದೆ ನಡೆದ ಸ್ಥಳಾಂತರ ಮತ್ತು ಅವ್ಯವಸ್ಥೆಗಳಿಂದಾಗಿ ವ್ಯಾಸರಾಜ ಮಠದ ಬಳಿ ಜಾಗದ ಒಡೆತನವನ್ನು ಸಾಬೀತುಪಡಿಸುವ ಸಮರ್ಪಕ ದಾಖಲೆಗಳು ಇರಲಿಲ್ಲ.

ಇದರ ಪರಿಣಾಮವಾಗಿ, ನ್ಯಾಯಾಲಯವು ಆ ಸ್ಥಳವು ಉತ್ತರಾದಿ ಮಠಕ್ಕೆ ಸೇರಿದೆ ಎಂದು ತೀರ್ಪು ನೀಡಿತು. ಅಷ್ಟೇ ಅಲ್ಲದೆ, ವ್ಯಾಸರಾಜ ಮಠದ ಪೀಠಾಧಿಪತಿಗಳಾಗಲಿ ಅಥವಾ ಶಿಷ್ಯರಾಗಲಿ, ನಿಗದಿತ ಆರಾಧನಾ ದಿನಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಗಡ್ಡೆಗೆ ಪ್ರವೇಶಿಸಬಾರದೆಂದು ಪ್ರತಿಬಂಧಕವನ್ನೂ ವಿಧಿಸಿತು. ನ್ಯಾಯಾಲಯದ ಈ ತೀರ್ಪು ಒಂದು ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ.

ತೀರ್ಪಿನ ಅನ್ವಯ, ವ್ಯಾಸರಾಜ ಮಠದವರು ತಮ್ಮದೇ ಪರಂಪರೆಯ ಗುರುಗಳಿಗೆ ನಿತ್ಯ ಪೂಜೆ ಸಲ್ಲಿಸುವುದರಿಂದ ವಂಚಿತರಾಗಿದ್ದಾರೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನೀಡಿದೆ. ಆದರೆ, ಈ ಪ್ರತಿಬಂಧಕದ ಮೂಲಕ, ಪೂಜ್ಯ ಗುರುಗಳ ಸನ್ನಿಧಾನದಲ್ಲಿ ಪೂಜೆ ಮಾಡುವ ಹಕ್ಕನ್ನು ಮೊಟಕು ಗೊಳಿಸಿರುವುದು ಆಶ್ಚರ್ಯ ಮತ್ತು ಆತಂಕದ ವಿಷಯವಾಗಿದೆ.

ವ್ಯಾಸರಾಜ ಮಠದ ಪ್ರಕರಣದ ನಂತರ, ಶ್ರೀ ಉತ್ತರಾದಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠಗಳ ನಡುವೆ ಮಾಲೀಕತ್ವದ ವಿವಾದ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿ, ನವವೃಂದಾವನ ಗಡ್ಡೆಯು ಯಾವುದೇ ಮಠದ ಸ್ವತ್ತಲ್ಲ, ಅದು ಸರಕಾರದ ಜಾಗ ಎಂದು ಘೋಷಿಸಿದೆ.

ಸದ್ಯ ಈ ತೀರ್ಪನ್ನು ಪ್ರಶ್ನಿಸಿ ಉತ್ತರಾದಿ ಮಠವು ಸುಪ್ರೀ ಕೋರ್ಟ್ ಮೇಲ್ಮನವಿ ಸಲ್ಲಿಸಿದೆ. ಇಲ್ಲಿ ಒಂದು ಸಂಭಾವ್ಯ ಸನ್ನಿವೇಶವನ್ನು ಗಮನಿಸಬೇಕು. ಒಂದು ವೇಳೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದು, ಆ ಜಾಗವು ಸರಕಾರದ ಸ್ವತ್ತು ಎಂದು ಅಂತಿಮ ತೀರ್ಪು ನೀಡಿದರೆ, ಆಗ ಉತ್ತರಾದಿ ಮಠಕ್ಕೆ ಈ ಹಿಂದೆ ಸಿಕ್ಕಿದ್ದ ಮಾಲೀಕತ್ವದ ಹಕ್ಕು ರದ್ದಾಗುತ್ತದೆ. ಯಾವಾಗ ಆ ಜಾಗ ಸರಕಾರದ ಸ್ವತ್ತು ಎಂದು ಸಾಬೀತಾಗುತ್ತದೆಯೋ, ಆಗ ಸಹಜವಾಗಿಯೇ ಶ್ರೀ ವ್ಯಾಸರಾಜ ಮಠಕ್ಕೂ ಅಲ್ಲಿ ಪ್ರವೇಶಿಸಲು ಮತ್ತು ಪೂಜೆ ಸಲ್ಲಿಸಲು ಮರು-ಅವಕಾಶ ದೊರೆಯುತ್ತದೆ.

ಕಳೆದುಹೋದ ಹಕ್ಕುಗಳು ಮತ್ತೆ ಜೀವ ಪಡೆಯುತ್ತವೆ. ಆಗ ಲೇಖಕರು ವರ್ಣಿಸಿದ ಧರ್ಮ ಕ್ಷೇತ್ರವು ಮತ್ತೆ ಹಕ್ಕುಗಳ ಹೋರಾಟದ ಕುರುಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯ ವಿಲ್ಲ. ಆದ್ದರಿಂದ, ನವವೃಂದಾವನವು ನಿಜವಾದ ಅರ್ಥದಲ್ಲಿ ಶಾಂತಿಯ ತೋಟವಾಗ ಬೇಕಾದರೆ, ಕೇವಲ ತಾತ್ಕಾಲಿಕ ತೇಪೆ ಹಚ್ಚುವ ಕೆಲಸವಾಗಬಾರದು. ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ಶ್ರೀಪಾದರಾಜ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಾಲ್ಕು ಪ್ರಮುಖ ಮಠಗಳ ಸಮ್ಮುಖದಲ್ಲಿ ಒಂದು ಸಮಗ್ರವಾದ ಒಪ್ಪಂದ ಏರ್ಪಡಬೇಕು. ಎಲ್ಲಾ ಯತಿಗಳಿಗೂ, ಎಲ್ಲಾ ಪರಂಪರೆಗಳಿಗೂ ಸಮಾನ ಗೌರವ ಮತ್ತು ಪೂಜಾ ಅವಕಾಶ ಸಿಗುವಂತಾಗಬೇಕು. ಆಗ ಮಾತ್ರ ನವವೃಂದಾವನದ ಪಾವಿತ್ರ್ಯತೆ ಉಳಿಯಲು ಮತ್ತು ಭವಿಷ್ಯದ ಪೀಳಿಗೆಗೆ ಮಾದರಿಯಾಗಲು ಸಾಧ್ಯ.