ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಕುರುಕ್ಷೇತ್ರʼವಾಗಿದ್ದ ನವ ವೃಂದಾವನ ಇನ್ನು ʼಧರ್ಮಕ್ಷೇತ್ರʼ

ಕಳೆದ ಐದಾರು ದಶಕಗಳಿಂದ ಮಾಧ್ವ ಸಮುದಾಯದ ಉಭಯ ಮಠಗಳ ನಡುವೆ ಕುರುಕ್ಷೇತ್ರವಾಗಿ ಪರಿಣಮಿಸಿದ್ದ ಹಂಪಿ ಸಮೀಪದ ಆನೆಗುಂದಿಯ ನವವೃಂದಾವನ ಗಡ್ಡೆಯನ್ನು ಇನ್ನು ಮುಂದಿನ ದಿನದಲ್ಲಿ ಧರ್ಮಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥರು ಘೋಷಿಸಿದಾಗ ನೆರೆದಿದ್ದ ಉಭಯ ಮಠಗಳ ಸಹಸ್ರಾರು ಮಂದಿ ಭಕ್ತರು ಕರತಾಡನ ದೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು.

ʼಕುರುಕ್ಷೇತ್ರʼವಾಗಿದ್ದ ನವ ವೃಂದಾವನ ಇನ್ನು ʼಧರ್ಮಕ್ಷೇತ್ರʼ

-

Ashok Nayak
Ashok Nayak Jan 4, 2026 12:06 PM

ನಂಜನಗೂಡು ಮೋಹನ್

ಬೆಂಗಳೂರು: ಕಳೆದ ಐದಾರು ದಶಕಗಳಿಂದ ಮಾಧ್ವ ಸಮುದಾಯದ ಉಭಯ ಮಠಗಳ ನಡುವೆ ಕುರುಕ್ಷೇತ್ರವಾಗಿ ಪರಿಣಮಿಸಿದ್ದ ಹಂಪಿ ಸಮೀಪದ ಆನೆಗುಂದಿಯ ನವವೃಂದಾವನ ಗಡ್ಡೆಯನ್ನು ಇನ್ನು ಮುಂದಿನ ದಿನದಲ್ಲಿ ಧರ್ಮಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥರು ಘೋಷಿಸಿದಾಗ ನೆರೆದಿದ್ದ ಉಭಯ ಮಠಗಳ ಸಹಸ್ರಾರು ಮಂದಿ ಭಕ್ತರು ಕರತಾಡನದೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಪೂರ್ವನಿಯೋಜಿತ ಕಾರ್ಯಕ್ರಮದಂತೆ ಬಸವನಗುಡಿಯ ಉತ್ತರಾದಿಮಠಕ್ಕೆ ಸೇರಿದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ಸನ್ನಿಽಯಲ್ಲಿ ಉಭಯ ಶ್ರೀಪಾದಂ ಗಳವರು ಒಂದೇ ವೇದಿಕೆಯಲ್ಲಿ ಕುಳಿತು ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿ ಘಟನೆಯನ್ನು ಇತಿಹಾಸದ ಪುಟಕ್ಕೆ ಸೇರ್ಪಡೆಗೊಳಿಸಿ ದರು.

ಉಭಯ ಮಠಗಳ ನಡುವಿನ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಸೌಹಾರ್ದಯುತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಒಮ್ಮತದ ಭರವಸೆಯನ್ನು ಉಭಯ ಶ್ರೀಗಳು ತಮ್ಮ ಶಿಷ್ಯ ಕೋಟಿಗೆ ಬಹು ಸಂಭ್ರಮದಿಂದ ತಿಳಿಯಪಡಿಸಿದರು.

ರಾಜಿ ಸೂತ್ರ ಮತ್ತು ಸಂಧಾನದ ಈ ಸುಸಂದರ್ಭದಲ್ಲಿ ಉಭಯ ಮಠದ ಭಕ್ತರು ಮಠ ಮತ್ತು ಪೀಠಾ ಧಿಪತಿಗಳ ನಿರ್ಧಾರವನ್ನು ಸ್ವಾಗತಿಸಬೇಕು ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಯಾರ ಕುರಿತೂ ಅವಹೇಳನಕಾರಿಯಾದ ಹೇಳಿಕೆಗಳನ್ನು, ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಎಂದು ಇಬ್ಬರೂ ಶ್ರೀಗಳು ಮಠದ ಶಿಷ್ಯರು ಹಾಗೂ ಅಭಿಮಾನಿಗಳಲ್ಲಿ ತಾಕೀತು ಮಾಡಿದರು.

ಇದಕ್ಕೂ ಮುನ್ನ ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆಯ ಕುರಿತಾದ ವಿವಾದ ಬಗೆಹರಿಸುವಲ್ಲಿ ಕೈಗೊಳ್ಳಲಾಗಿರುವ ಪರಸ್ಪರ ಒಡಂಬಡಿಕೆಯ ಒಪ್ಪಂದಕ್ಕೆ ಉಭಯ ಶ್ರೀಗಳು ಮತ್ತು ಮಠಗಳ ಪ್ರಮುಖ ಶಿಷ್ಯರು ಸಹಿ ಹಾಕಿದರು.

ನಂತರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು, ಉತ್ತರಾದಿ ಮಠಕ್ಕೆ ಸೇರಿದ ಬಸವನಗುಡಿಯ ದಿಗ್ವಿಜಯ ಲಕ್ಷ್ಮೀನರಸಿಂಹ ಸನ್ನಿಽಗೆ ಆಗಮಿಸಿದರು. ನೆರೆದಿದ್ದ ಸಾವಿರಾರು ಭಕ್ತರು ಹರ್ಷೋದ್ಗಾರ ದೊಂದಿಗೆ ಮಂತ್ರಾಲಯದ ಶ್ರೀಗಳನ್ನು ಸ್ವಾಗತಿಸಿದರು. ದೇವಾಲಯದ ದೊಡ್ಡ ಪ್ರಾಂಗಣ ಕಿಕ್ಕಿರಿದ್ದಿತ್ತು.

ಇದನ್ನೂ ಓದಿ: Vishweshwar Bhat Column: ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ ಕಟ್ಟಬಹುದೆಂಬುದಕ್ಕೆ ಇಸ್ರೇಲ್‌ ನಿದರ್ಶನ

ಉಭಯ ಮಠಗಳ ಸಮಾಗಮಕ್ಕೆ ಸಾಕ್ಷಿಯಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿರುವ ಉಭಯ ಮಠಗಳು ಉಳಿದೆಲ್ಲ ಮಠಗಳಿಗೆ ಮಾದರಿಯಾಗಿವೆ. ಇದೇ ರೀತಿ ವಿವಾದಗಳನ್ನು ಮುಂದಿಟ್ಟುಕೊಂಡಿರುವ ಇತರೆ ಮಠಗಳಿಗೆ ಕಣ್ತೆರೆಯು ವಂತೆ ಮಾಡಿದೆ.

ರಾಷ್ಟ್ರ, ಧಾರ್ಮಿಕ ಜಗತ್ತು ಮತ್ತು ಹಿಂದೂ ಧರ್ಮದ ಸಂಘಟನೆ, ಸನಾತನ ಧರ್ಮದ ರಕ್ಷಣೆಯ ನಿಟ್ಟಿನಲ್ಲಿ ಉಭಯ ಶ್ರೀಗಳು ಕೈಗೊಂಡ ಈ ಗಟ್ಟಿ ನಿರ್ಧಾರ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಮಾಧ್ವ ಮಠಗಳು ಅಥವಾ ಇನ್ನಿತರೆ ಧಾರ್ಮಿಕ ಮಠಮಾನ್ಯಗಳು, ಸಂಸ್ಥೆಗಳು ವಿವಾದಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಆಗಬಾರದು.

ಈ ನಿಟ್ಟಿನಲ್ಲಿ ಮಂತ್ರಾಲಯ ಮತ್ತು ಉತ್ತರಾದಿ ಮಠದ ಶ್ರೀಗಳು ನಾಯಕತ್ವ ವಹಿಸಬೇಕು ಎಂದು ಮನವಿ ಮಾಡಿದರು. ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸುಜಯೇಂದ್ರ ತೀರ್ಥರ ಕನಸನ್ನು ಪ್ರಸ್ತುತ ಪೀಠಾಧಿಪತಿಗಾಳದ ಸತ್ಯಾತ್ಮ ತೀರ್ಥ ಹಾಗೂ ಸುಬುಧೇಂದ್ರ ತೀರ್ಥರು ನನಸಾಗಿಸಿ, ಸಮುದಾಯಕ್ಕೆ ಬಹುದೊಡ್ಡ ಉಪಕಾರವನ್ನು ಮಾಡಿದ್ದಾರೆ ಎಂದು ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಸ್ಮರಿಸಿದರು. ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀಧರ್ ರಾವ್, ದಿನೇಶ್ ಕುಮಾರ್ ಮಾತನಾಡಿದರು.

ಅದಕ್ಕೂ ಮೊದಲು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಹಿಂದೂ ಧರ್ಮ ಹತ್ತು ಹಲವಾರು ಕಡೆ ಗಳಿಂದ ಘಾಸಿಗೊಳಗಾಗುತ್ತಿರುವ ಈ ಸಮಯದಲ್ಲಿ ಉಭಯ ಮಠಗಳ ಶ್ರೀಗಳು ಧಾರ್ಮಿಕ ಕ್ಷೇತ್ರದ ನೇತೃತ್ವವನ್ನು ವಹಿಸಿ ಆಸ್ತಿಕ ಸಮುದಾಯಕ್ಕೆ ಮಾರ್ಗದರ್ಶಕ ರಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿರುವ ನಾವೆಲ್ಲರೂ ಪುಣ್ಯವಂತರು ಎಂದು ಅಭಿಪ್ರಾಯಪಟ್ಟರು.

Petha 2

ಉಭಯ ಶ್ರೀಗಳ ನಡುವೆ ನಡೆದ ಒಡಂಬಡಿಕೆಯ ಸಮಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ದಿನೇಶ್ ಕುಮಾರ್, ಶ್ರೀಧರ ರಾವ್, ಮಂತ್ರಾ ಲಯದ ಪಂಡಿತ ರಾಜಗಿರಿಯಾಚಾರ್ಯ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಪತ್ರಕರ್ತ ನಂಜನಗೂಡು ಮೋಹನ್, ಕಿರಣ್ ಕುಮಾರ್, ನಿರ್ಮಾಣ್ ಪ್ರಮೋಟರ್ಸ್‌ನ ನಾಗೇಂದ್ರ, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬಣ್ಣ, ರಾಜಾಗಿರಿ ಆಚಾರ್ಯರು, ಕೂಸನೂರು ಆಚಾರ್ಯರು, ಗುತ್ತಲ ರಂಗಾಚಾರ್ಯರು, ವಿದ್ಯಾಸಿಂಹ ಆಚಾರ್ಯ ರು, ವ್ಯಾಸನಕೆರೆ ಪ್ರಭಂಜನಾಚಾರ್ಯರು, ಆನಂದ ತೀರ್ಥ ಆಚಾರ್ಯ ನಾಗಸಂಪಿಗೆ, ಮೊಖಾಶಿ ಮಧ್ವಾಚಾರ್ಯರು, ವಿ.ಸತ್ಯಧ್ಯಾನ ಆಚಾರ್ಯ, ವಿ. ವಿದ್ಯಾಧೀಶ ಆಚಾರ್ಯ, ಮಂತ್ರಾ ಲಯದ ಡಾ ವಾದಿರಾಜ ಆಚಾರ್ಯ, ರಾಜಾ ಅಪ್ರಮೇಯ ಆಚಾರ್ಯ, ರಾಜಾಸೂರಿಂದ್ರ ಆಚಾರ್ಯ ಮತ್ತಿತರರು ಉಪಸ್ಥಿತ ರಿದ್ದರು.

ಇಂದು ಮಾಧ್ವರ ಪಾಲಿಗೆ ಸುದಿನ

ಸಮಗ್ರ ಮಾಧ್ವ ಸಮಾಜದ ಗೆಲುವು. ಇಂದು ಮಾಧ್ವರ ಪಾಲಿಗೆ ಸುದಿನ ಎಂದೇ ಭಾವಿಸುತ್ತೇವೆ.

- ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಭೀಮನಕಟ್ಟೆ ಮಠ, ಭೀಮನ ಕಟ್ಟೆ

*

ಸಾತ್ವಿಕ ಸಮಾಗಮ

ಉಭಯ ಮಠಗಳ ಸಮಾಗಮ ನಮಗೆ ಸಂತೋಷ ತಂದಿದೆ. ಇದೊಂದು ಐತಿಹಾಸಿಕ ಕ್ಷಣ ಮಾಧ್ಯ ಪರಂಪರೆಯ ಎಲ್ಲ ಯತಿಗಳು ಒಟ್ಟಾಗಿ ಇರುವುದನ್ನು ಕಣ್ಣಾರೆ ಕಾಣುವ ಅವಕಾಶ ಶಿಷ್ಯ ವರ್ಗದ್ದು, ಭಕ್ತವರ್ಗದ್ದು. ಇಂತಹ ಸಾತ್ವಿಕ ಸಮಾಗಮ ಬಹು ಹಿಂದೆಯೇ ಆಗಬೇಕಿತ್ತು. ಇಂತಹ ಸಾರ್ಥಕ ಕ್ಷಣಗಳು ಮಾತ್ರ ಸಮಾಜದ ಒಗ್ಗಟ್ಟಿಗೆ ಕಾರಣವಾಗಿದೆ. ಎಲ್ಲರಿಗೂ ಒಳಿತಾಗಲಿ ಎಂದು ನರಸಿಂಹ ದೇವರಲ್ಲಿ ಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.

- ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠ, ಉಡುಪಿ

*

ಭಕ್ತರ ಆತಂಕ ಮರೆಯಾಗಿದೆ

ಉಭಯ ಮಠಗಳ ಪೀಠಾಧಿಪತಿಗಳ ಸಮ್ಮಿಲನ ನಮಗೆ ಸಂತೋಷ ತಂದಿದೆ. ದಶಕಗಳಿಂದ ತಲೆದೋರಿದ್ದ ಸಮಸ್ಯೆ ದೂರವಾಗಿ ಭಕ್ತರ ಶಿಷ್ಯರ ಆತಂಕಗಳು ಮರೆಯಾಗಿದೆ. ಉಭಯ ಶ್ರೀಗಳ ನಡುವೆ ಸಂಧಾನ ಸಂತೋಷಕ್ಕೆ ಕಾರಣವಾಗಿದೆ. ನಮ್ಮ ಉಪಾಸ್ಯಮೂರ್ತಿ ಶ್ರೀ ಕೋದಂಡ ರಾಮದೇವರು ಹಾಗೂ ಪ್ರಾಣದೇವರು ಅನುಗ್ರಹಿಸಲಿ.

- ಶ್ರೀ ವಿದ್ಯೇಶ ಶ್ರೀಪಾದರು, ಭಂಡಾರ ಕೇರಿ ಮಠ, ಉಡುಪಿ

*

ಸಮಾಜ ಅಭಿವೃದ್ಧಿಗೆ ದಿಕ್ಸೂಚಿ

ಉಭಯ ಮಠಗಳ ಪೀಠಾಧಿಪತಿಗಳ ಸಮಾಗಮವಾಗಿರುವುದು ಮುಂದಿನ ದಿನಗಳಲ್ಲಿ ಮಾಧ್ವ ಸಮಾಜ ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ. ಅನೇಕ ವರ್ಷಗಳಿಂದ ಕಾಯುತ್ತಿದ್ದ, ಘಳಿಗೆ ಇದೀಗ ಬಂದಿದೆ. ಉತ್ತರೋತ್ತರವಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಮಾಧ್ವ ಸಮಾಜ ಕಾಣು ವಂತಾಗಲಿ ಎಂದು ಆಶಿಸುತ್ತೇವೆ.

- ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು, ಮುಳಬಾಗಿಲು ಶ್ರೀಪಾದರಾಜ ಮಠ

*

ಸ್ವಾಗತಾರ್ಹ ನಿರ್ಧಾರ

ಅನೇಕ ದಶಕಗಳಿಂದ ಎರಡೂ ಮಠಗಳ ಶಿಷ್ಯರು ಮತ್ತು ಭಕ್ತರು ಮಾತ್ರ ಅಲ್ಲದೆ ಸಮಗ್ರ ಮಾಧ್ವ ಸಮಾಜ ಇಂತಹದೊಂದು ಸುದಿನಕ್ಕಾಗಿ ಕಾಯುತ್ತಿತ್ತು. ಎಲ್ಲರ ಆಶಯವೂ ಈಗ ಭಗವಂತನ ಕೃಪೆಯಿಂದ ಈಡೇರಿದಂತಾಗಿದೆ. ಈ ಐತಿಹಾಸಿಕ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

-ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು

ಶ್ರೀ ಸುಬ್ರಹ್ಮಣ್ಯ ಮಠ, ವಿಷ್ಣುತೀರ್ಥ ಸಂಸ್ಥಾನ

*

ಐತಿಹಾಸಿಕ ನಿರ್ಧಾರ

ಉಭಯ ಮಠಗಳ ಸ್ವಾಮಿಗಳ ಸಮಾಗಮ ನಮಗೆ ಸಂತಸ ತಂದಿದೆ. ಉಡುಪಿ ಶ್ರೀ ಕೃಷ್ಣದೇವರ ಪೂಜೆಗೆ ಅನುಸರಿಸಲಾಗುವ ಪರ್ಯಾಯ ಕ್ರಮದ ಮಾದರಿಯಲ್ಲಿ ಗುರುಗಳ ಆರಾಧನೆಗೆ ಮುಂದಾ ಗಿರುವ ಕ್ರಮ ಅತ್ಯಂತ ಸಂತೋಷ ತರುವ ಐತಿಹಾಸಿಕ ನಿರ್ಧಾರ. ಇದು ಶಾಶ್ವತವಾಗಿ ಮುಂದು ವರೆಯಲಿ ಎಂದು ಶ್ರೀ ಕೃಷ್ಣ ಮುಖ್ಯಪ್ರಾಣರನ್ನು ಪ್ರಾರ್ಥಿಸುತ್ತೇವೆ.

-ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ, ಉಡುಪಿ

*

ಶಿಷ್ಯವರ್ಗಕ್ಕೆ ಸಂತೋಷ

ಮಾಧ್ವ ಪೀಠಾಧಿಪತಿಗಳ ಸಮಾಗಮ ಆಗುವುದು ಎಂದರೆ ಪೀಠಾಧಿಪತಿಗಳಿಗಿಂತಲೂ ಶಿಷ್ಯವರ್ಗಕ್ಕೆ ಭಕ್ತ ವರ್ಗಕ್ಕೆ ಹೆಚ್ಚಿನ ಸಂತೋಷ. ಸಾಧನೆಗೆ ಪೂರಕ ವಾತಾವರಣ ನಿರ್ಮಾಣವಾಗುವುದು ಇಂತಹ ಸಂದರ್ಭದಲ್ಲಿಯೇ. ಇಂದು ಉಭಯ ಪೀಠಾಧಿಪತಿಗಳ ಸಮಾಗಮ ಮತ್ತು ಒಡಂಬಡಿಕೆಗಳು ನಮಗೆ ಸಂತಸ ತಂದಿದೆ. ಎಲ್ಲರಿಗೂ ಒಳಿತಾಗಲಿ ಎಂದು ನಮ್ಮ ಉಪಾಸ್ಯ ಮೂರ್ತಿಯಲ್ಲಿ ಪ್ರಾರ್ಥಿಸುತ್ತೇವೆ.

-ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಶ್ರೀ ಶಿರೂರು ಮಠ, ಉಡುಪಿ

*

ಸಮಾಜಕ್ಕೆ ಉತ್ತಮ ಸಂದೇಶ

ಉಭಯ ಶ್ರೀಗಳ ನಿರ್ಧಾರ ಸಮಗ್ರ ಸಮಾಜಕ್ಕೆ ಅತ್ಯಂತ ಉತ್ತಮ ಸಂದೇಶ ನೀಡಿದೆ. ಪರ್ಯಾಯ ಕ್ರಮದಲ್ಲಿ ಆರಾಧನೆ ನಡೆಸುವ ಕ್ರಮ ಸ್ವಾಗತಾರ್ಹ. ವೃಂದಾವನದ ನಿಮಿತ್ತವಾಗಿ ದಶಕಗಳಿಂದ ನಡೆಯುತ್ತಿದ್ದ ವಿವಾದಕ್ಕೆ ವಿರಾಮ ವಾಗಿದೆ ಎನ್ನುವುದೇ ಖುಷಿಯ ಸಂಗತಿ. ಇನ್ನು ಮುಂದೆ ಭಕ್ತರು ಶಿಷ್ಯರು ಎಲ್ಲರೂ ಖುಷಿಯಿಂದ ಆರಾಧನೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಮಗ್ರ ಸಮಾಜ ಸಂಭ್ರಮಿಸುವಂತೆ ಮಾಡಿದೆ.

-ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠ ಉಡುಪಿ

*

ಒಡಂಬಡಿಕೆ ಸಂತಸ ತಂದಿದೆ

ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀಮದ್ವಾಚಾರ್ಯರು ನಿರ್ಣಯ ಕೊಡುತ್ತಿದ್ದಾರೆ. ಅಣ್ಣ ತಮ್ಮಂದಿರಲ್ಲಿ ವೈಮನಸ್ಸು ಹುಟ್ಟುವುದಿಲ್ಲ. ಒಂದೊಮ್ಮೆ ವೈಮನಸ್ಸು ಇದ್ದರೂ ಅದು ತನ್ನಿಂದ ತಾನೇ ದೂರವಾಗುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನ ಇಂದಿನ ಘಟನೆ. ಉಭಯ ಮಠಾಧೀಶರು ಪರ್ಯಾಯ ಪದ್ಧತಿಯಲ್ಲಿ ಆರಾಧನೆ ನೆರವೇರಿಸುವ ಒಡಂಬಡಿಕೆ ನಮಗೆ ಸಂತಸ ತಂದಿದೆ.

-ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ

*

ಸಮಾಜದ ಒಗ್ಗಟ್ಟಿಗೆ ಸಾಕ್ಷಿ

ಮಾಧ್ವರ ಮಾರ್ಗದರ್ಶನದಲ್ಲಿ ಹೊರಟ ಎಲ್ಲ ಮಠಗಳೂ ಭಗವತ್ ಸೇವೆಗೆ ಏಕಮಾರ್ಗದಲ್ಲಿ ನಡೆಯುವಂತಹ ಮಾತಿಗೆ ಸಾಕ್ಷಿಯಾದ ಕ್ಷಣಗಳಿವು. ಇಂತಹ ಘಟನೆಗಳು ಸಮಗ್ರ ಸಮಾಜದ ಒಗ್ಗಟ್ಟು ಸಾರುವಿಕೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇಂಥದೊಂದು ಉಪಕ್ರಮಕ್ಕೆ ನಾವು ಸಂತಸ ವ್ಯಕ್ತಪಡಿಸುತ್ತಾ ನಿರಂತರವಾಗಿ ಇದು ನಡೆಯುವಂತಾಗಲಿ ಶ್ರೀ ಕೃಷ್ಣದೇವರ ಪ್ರಾಣದೇವರ ಅನುಗ್ರಹವಿರಲಿ ಎಂದು ಹಾರೈಸುತ್ತೇವೆ

- ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಕಿರಿಯಪಟ್ಟ

*

ಮಠದಲೆ ಇತ್ಯರ್ಥವಾಗಿರುವುದು ಸಮಂಜಸ

ಉತ್ತರಾದಿ ಮಠಾಧೀಶರು ಮತ್ತು ಮಂತ್ರಾಲಯ ರಾಘವೇಂದ್ರ ಮಠಾಧೀಶರು ಸಮಾಜಕ್ಕೆ ತನ್ಮೂ ಲಕ ಬ್ರಾಹ್ಮಣ ಮತ್ತು ಹಿಂದೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಶ್ರೀ ಪದ್ಮ ನಾಭ ತೀರ್ಥರ ಚಿತ್ತಕ್ಕೆ ಬಂದದ್ದು ನಡೆದಿದೆ. ಒಂದೊಮ್ಮೆ ನ್ಯಾಯಾಲಯ ಈ ಕುರಿತಾಗಿ ಯಾವುದೇ ತೀರ್ಪು ನೀಡಿದ್ದರೂ ಅದು ಅಷ್ಟು ಸಮಂಜಸ ಎನಿಸುತ್ತಿರಲಿಲ್ಲ. ಇದು ಧಾರ್ಮಿಕ ವಿಷಯ. ಹಾಗಾಗಿ ಎರಡು ಮಠಗಳ ನಡುವಿನ ಸಮಸ್ಯೆ ಅಲ್ಲಿಯೇ ಇತ್ಯರ್ಥ ವಾಗಬೇಕು. ಈಗ ಹಾಗೆಯೇ ಇತ್ಯರ್ಥವಾಗಿದೆ. ಉತ್ತರಾದಿ ಮಠ ಮತ್ತು ರಾಘವೇಂದ್ರ ಮಠಗಳ ನಡುವಿನ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಂಡಿದ್ದಾರೆ. ನ್ಯಾಯಾಲಯದ ತೀರ್ಪಲ್ಲ ಇದು. ಶ್ರೀ ಪದ್ಮನಾಭ ತೀರ್ಥರೇ ನೀಡಿದ ತೀರ್ಪು. ಸಮಗ್ರ ಮಾಧ್ವ ಸಮಾಜ, ಬ್ರಾಹ್ಮಣ ಸಮಾಜ, ಹಿಂದೂ ಸಮಾಜದ ದೃಷ್ಟಿಯಿಂದ ಇದು ಅತ್ಯಂತ ಸ್ವಾಗತಾರ್ಹ. ಎಲ್ಲವೂ ಸರಿಯಾಗಲಿ ಎಲ್ಲರಿಗೂ ಒಳಿತಾಗಲಿ.

-ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು,

ಉಡುಪಿ ಶ್ರೀ ಅದಮಾರು ಮಠ