ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru Dasara: ಚಾಮುಂಡೇಶ್ವರಿ ತಾಯಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ, ಮೈಸೂರು ದಸರಾ ಜಂಬೂಸವಾರಿ ಆರಂಭ

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಾಮುಂಡೇಶ್ವರಿ ತಾಯಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂದಿ ಪೂಜೆಯ ನಂತರ ಮೆರವಣಿಗೆ ಪ್ರಾರಂಭವಾಗಿ, ಅಂಬಾರಿ ಮೇಲೆ ಚಾಮುಂಡೇಶ್ವರಿ ತಾಯಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಅಭಿಮನ್ಯು ಆರನೇ ಬಾರಿಗೆ ಅಂಬಾರಿ ಹೊರುತ್ತಿದ್ದಾನೆ.

ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ, ದಸರಾ ಜಂಬೂಸವಾರಿ ಆರಂಭ

-

ಹರೀಶ್‌ ಕೇರ ಹರೀಶ್‌ ಕೇರ Oct 2, 2025 4:15 PM

ಮೈಸೂರು: ಮೈಸೂರು ದಸರಾ (Mysuru Dasara) ಅದ್ದೂರಿಯಾಗಿ ನಡೆಯುತ್ತಿದ್ದು, ಜಂಬೂ ಸವಾರಿ ಆರಂಭವಾಗಿದೆ. ಮೈಸೂರು ಅರಮನೆಯಿಂದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಸುವರ್ಣ ಪ್ರತಿಮೆಯನ್ನು ಹೊತ್ತ ಅಭಿಮನ್ಯು ಆನೆ ಹೆಜ್ಜೆ ಹಾಕಲು ಆರಂಭಿಸಿದೆ. ದೇವಿಯನ್ನು ಹೊತ್ತ ಜಂಬೂಸವಾರಿ ಮೆರವಣಿಗೆ ರಾಜಬೀದಿಯಲ್ಲಿ ಸಾಗಲಿದೆ. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬಂದಿದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಾಮುಂಡೇಶ್ವರಿ ತಾಯಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂದಿ ಪೂಜೆಯ ನಂತರ ಮೆರವಣಿಗೆ ಪ್ರಾರಂಭವಾಗಿ, ಅಂಬಾರಿ ಮೇಲೆ ಚಾಮುಂಡೇಶ್ವರಿ ತಾಯಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಏಳು-ಎಂಟು ಬಾರಿ ದಸರಾವನ್ನು ಉದ್ಘಾಟಿಸಿದ ವಿಷಯವನ್ನು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಇದು ಆಲ್ ಟೈಮ್ ರೆಕಾರ್ಡ್ ಆಗಿರಬಹುದು, ಆದರೆ ತಮಗೆ ದಾಖಲೆ ಮಾಡುವ ಆಸಕ್ತಿಯಿಲ್ಲ ಎಂದರು.

ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಮತ್ತು ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೇಲೆಯೂ ದಸರಾ ಉತ್ಸವಗಳಲ್ಲಿ ಪಾಲ್ಗೊಂಡಿರುವುದನ್ನು ಅವರು ಸ್ಮರಿಸಿದರು. ಜನರ ಆಶೀರ್ವಾದದಿಂದ ಇಷ್ಟು ವರ್ಷ ಮುಖ್ಯಮಂತ್ರಿಯಾಗಿ ದಸರಾ ಮಹೋತ್ಸವವನ್ನು ಆಚರಿಸುವ ಸೌಭಾಗ್ಯ ದೊರೆತಿದೆ. ಇದು ನಾಡಹಬ್ಬ, ಜನರ ಹಬ್ಬ. ಜನರು ಖುಷಿಯಾದಾಗ ಸರ್ಕಾರಕ್ಕೂ ಖುಷಿಯಾಗುತ್ತದೆ, ಜನರು ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಸರ್ಕಾರವೂ ಸಂತಸಪಡುತ್ತದೆ ಎಂದು ಹೇಳಿದರು.

ಜಂಬೂ ಸವಾರಿ

ವಿಜಯದಶಮಿಯ 416ನೇ ಐತಿಹಾಸಿಕ ಜಂಬೂ ಸವಾರಿ ಈಗ ನಡೆಯುತ್ತಿದೆ. 6ನೇ ಬಾರಿ ಕ್ಯಾಪ್ಟನ್​​​ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ನಾಡಿನ ಗಮನ ಸೆಳೆಯುತ್ತಿದ್ದಾಳೆ. ಇದಕ್ಕೂ ಮುನ್ನ, ಮಧ್ಯಾಹ್ನದಿಂದಲೇ ಹಲವಾರು ಸ್ತಬ್ಧಚಿತ್ರಗಳು ಅರಮನೆಯ ಅಂಗಳದಿಂದ ಮೆರವಣಿಗೆಯ ಮುಂದುಗಡೆಯಲ್ಲಿ ಹೊರಟಿವೆ.

ಮೈಸೂರು ದಸರಾದ ವೈಭವ ಹೆಚ್ಚಿಸಲು ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆಯೊಂದಿಗೆ ಆರಂಭವಾಗಿದೆ. ಒಟ್ಟು 58 ಸ್ತಬ್ಧಚಿತ್ರಗಳು ಈ ಬಾರಿಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿವೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸ್ತಬ್ಧಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಮೆರವಣಿಗೆಯಲ್ಲಿ ಶಕ್ತಿ ಯೋಜನೆಯ ಸ್ತಬ್ಧಚಿತ್ರವು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವ ಈ ಯೋಜನೆಯ ಯಶಸ್ಸನ್ನು ಸ್ತಬ್ಧಚಿತ್ರವು ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತಿದೆ.

ಇದನ್ನೂ ಓದಿ: Mysuru Dasara 2025: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ; ಎಷ್ಟೊತ್ತಿಗೆ ಆರಂಭ? ಸಂಭ್ರಮ ಹೇಗಿದೆ ಗೊತ್ತಾ?