CM Siddaramaiah: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದ ಮರಿಸ್ವಾಮಿ ಯಾರು?
Who is Mariswamy: ‘ಮರಿಸ್ವಾಮಿಯೇ ನನ್ನ ಆಶ್ರಯದಾತ. ನಾನು, ನನ್ನ ಮಕ್ಕಳು ಮೈಸೂರಿಗೆ ಬಂದಾಗ ಆಶ್ರಯ, ಅನ್ನ-ಆಹಾರ ನೀಡಿದ್ದು ಅವನೇ. ಮರಿಸ್ವಾಮಿ ಯಾರೆಂದು ನಿಮಗೆ ಗೊತ್ತೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಗೆಳೆಯನ ಬಗ್ಗೆ ಹೇಳಿದ್ದರು. ಸಿದ್ದರಾಮಯ್ಯ ಮತ್ತು ಮರಿಸ್ವಾಮಿ ಅವರದ್ದು 5 ದಶಕಗಳ ಸ್ನೇಹವಾಗಿದೆ.

-


ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೊಸ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ಡಿಸೆಂಬರ್ನಲ್ಲಿ ಸರಳವಾಗಿ ಗೃಹಪ್ರವೇಶ ನಡೆಯಲಿದೆ. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸಿಎಂ ಅವರು, ಮೈಸೂರಿನಲ್ಲಿ ತನಗೊಬ್ಬ ಅನ್ನದಾತ ಹಾಗೂ ಆಶ್ರಯದಾತ ಇರುವ ಬಗ್ಗೆ ಹೇಳಿಕೊಂಡಿದ್ದರು. ಇಲ್ಲಿಯವರೆಗೆ ಅವರಿದ್ದ ಮನೆ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರದ್ದು ಎಂದು ಸಿಎಂ ಹೇಳಿದ್ದರು. ಇನ್ನು ಸಿದ್ದರಾಮಯ್ಯ ಮತ್ತು ಮರಿಸ್ವಾಮಿ ಅವರದ್ದು ಬರೋಬ್ಬರಿ 50 ವರ್ಷಕ್ಕೂ ಮೀರಿದ ಸ್ನೇಹವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದದ್ದು ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ.

‘ಮರಿಸ್ವಾಮಿಯೇ ನನ್ನ ಆಶ್ರಯದಾತ. ನಾನು, ನನ್ನ ಮಕ್ಕಳು ಮೈಸೂರಿಗೆ ಬಂದಾಗ ಆಶ್ರಯ, ಅನ್ನ-ಆಹಾರ ನೀಡಿದ್ದು ಅವನೇ. ಮರಿಸ್ವಾಮಿ ಯಾರೆಂದು ನಿಮಗೆ ಗೊತ್ತೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಗೆಳೆಯನ ಬಗ್ಗೆ ಹೇಳಿದ್ದರು. ಸಿದ್ದರಾಮಯ್ಯ ಮತ್ತು ಮರಿಸ್ವಾಮಿ ಅವರದ್ದು 5 ದಶಕಗಳ ಸ್ನೇಹವಾಗಿದೆ. ಸಿದ್ದರಾಮಯ್ಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಮರಿಸ್ವಾಮಿ ಬಗ್ಗೆ ಸಿದ್ದರಾಮಯ್ಯ ಅವರ ಆಪ್ತರನ್ನು ಹೊರತುಪಡಿಸಿದರೆ, ಯಾರಿಗೂ ತಿಳಿದಿಲ್ಲ.

ಸಿದ್ದರಾಮಯ್ಯ ಆಪ್ತ ಸ್ನೇಹಿತ ಮರಿಸ್ವಾಮಿ ಯಾರು?
ಮರಿಸ್ವಾಮಿ ಅವರು ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಸುಗ್ಗನಹಳ್ಳಿ ಗ್ರಾಮದವರು. ಅವರ ತಾಯಿ ಮನೆ ಮೈಸೂರು ತಾಲೂಕು ಕುಪ್ಪೆಗಾಲ ಗ್ರಾಮದಲ್ಲಿದೆ. ಅಂದರೆ ಸಿಎಂ ಸಿದ್ದರಾಮಯ್ಯ ಬಾಲ್ಯದಲ್ಲಿ ಓದಿದ ಶಾಲೆ ಇರುವ ಗ್ರಾಮ. ಇನ್ನು ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಇರುವುದು ಸಹ ಇದೇ ಕುಪ್ಪೆಗಾಲ ಗ್ರಾಮದ ಪಕ್ಕದಲ್ಲಿ. ಅಸಲಿಗೆ ಸಿದ್ದರಾಮಯ್ಯ ಹಾಗೂ ಮರಿಸ್ವಾಮಿ ಅವರ ಸೋದರ ಮಾವ ಕೆಂಪಯ್ಯ ಕ್ಲಾಸ್ಮೇಟ್ಗಳು ಆಗಿದ್ದರು. ಮರಿಸ್ವಾಮಿ ಅವರಿಗೂ ಸಿದ್ದರಾಮಯ್ಯ ಅವರಿಗೂ ಸುಮಾರು 6 ರಿಂದ 7 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಮರಿಸ್ವಾಮಿ ಅವರು ಎಂಎ ಓದಿದ್ದಾರೆ.

ಇವರ ನಡುವೆ ಪರಿಚಯ ಬೆಳೆದಿದ್ದು ಹೇಗೆ?
ಮರಿಸ್ವಾಮಿ ಅವರಿಗೆ ಸಿದ್ದರಾಮಯ್ಯ ಪರಿಚಯವಾಗಿದ್ದೇ ಆಕಸ್ಮಿಕ ಎನ್ನಬಹುದು. ಶ್ರೀರಂಗಪಟ್ಟಣದಲ್ಲಿ ತಂದೆ ಮನೆಯಲ್ಲಿದ್ದ ಮರಿಸ್ವಾಮಿ ಅವರನ್ನು ಕಲಿಕೆಗಾಗಿ ತಾಯಿ ಮನೆ ಕುಪ್ಪೆಗಾಲಕ್ಕೆ ಕಳುಹಿಸಲಾಗಿತ್ತು. ಮರಿಸ್ವಾಮಿ ಅವರನ್ನು ಓದಿಸಿದ್ದು ಅವರ ಸೋದರ ಮಾವ ಹಾಗೂ ಸಿದ್ದರಾಮಯ್ಯ ಅವರ ಕ್ಲಾಸ್ಮೇಟ್ ಕೆಂಪಯ್ಯ. ಹೀಗೆ ಸೋದರ ಮಾವನ ಮನೆಗೆ ಹೋದವರಿಗೆ ಓದು ಮಾತ್ರವಲ್ಲ, ಗೆಳೆಯ ಸಿದ್ದರಾಮಯ್ಯ ಸಿಕ್ಕಿದ್ದರು.

1970ರ ಸಮಯದಲ್ಲಿ ಸಿದ್ದರಾಮಯ್ಯ ಅವರು ಮರಿಸ್ವಾಮಿ ಸೋದರ ಮಾವ ಕೆಂಪಯ್ಯ ಮನೆಗೆ ಬರುತ್ತಿದ್ದರು. ಆದರೂ ಮರಿಸ್ವಾಮಿ ಎಂದೂ ಸಿದ್ದರಾಮಯ್ಯರನ್ನು ಮಾತನಾಡಿಸಿರಲಿಲ್ಲ. ಆದರೆ ಒಮ್ಮೆ ಮೈಸೂರಿನ ಹಾರ್ಡವಿಕ್ ಶಾಲೆಯಲ್ಲಿ ಮರಿಸ್ವಾಮಿ ಆಕಸ್ಮಿಕವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಿದ್ದ ಮರಿಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೇ ಮಾತನಾಡಿಸಿದ್ದರು.

ಮರಿಸ್ವಾಮಿ ಅವರು ಏನಯ್ಯಾ ಇಲ್ಲಿ ಎಂದು ಮಾತನಾಡಿಸಿದ್ದರು. ಆಗ ಸಿದ್ದರಾಮಯ್ಯ ಎಲ್ಎಲ್ಬಿ ಫೈನಲ್ ಇಯರ್ನಲ್ಲಿದ್ದರು. ಮರಿಸ್ವಾಮಿ ತಾವು ಪರೀಕ್ಷೆ ಬರೆಯಲು ಬಂದಿರುವುದಾಗಿ ಹೇಳಿದ್ದರು. ಆಗ ಸಿದ್ದರಾಮಯ್ಯ, ಮರಿಸ್ವಾಮಿಗೆ ಪರೀಕ್ಷಾ ಕೇಂದ್ರ ಹುಡುಕಲು ಸಹಾಯ ಮಾಡಿದ್ದರು. ಅವತ್ತು ಆರಂಭವಾದ ಇವರಿಬ್ಬರ ಸ್ನೇಹ ಇಂದಿಗೂ ಮುಂದುವರಿದಿದೆ.

ಸದ್ಯ ಮೈಸೂರಿನ ಟಿಕೆ ಬಡಾವಾಣೆಯಲ್ಲಿರುವ ಮರಿಸ್ವಾಮಿ ಮನೆಯಲ್ಲೇ ಸಿಎಂ ಸಿದ್ದರಾಮಯ್ಯ ಬಾಡಿಗೆಗೆ ಇರುವುದು. ಅದು ಮರಿಸ್ವಾಮಿ ಅವರ ಸ್ವಂತ ಮನೆಯಾದರೂ ಎಲ್ಲರೂ ಅದನ್ನು ಸಿದ್ದರಾಮಯ್ಯ ಅವರ ಮನೆ ಎಂದೇ ಭಾವಿಸಿರುವುದು ಹಾಗೂ ಕರೆಯುವುದು. ಇದರಲ್ಲಿ ಏನು ವಿಶೇಷ ಇಲ್ಲ ಬಿಡಿ. ಯಾಕೆಂದರೆ ಈ ಮನೆಯನ್ನು ಮರಿಸ್ವಾಮಿ ಕಟ್ಟಿಸಿದ್ದೇ ಸಿದ್ದರಾಮಯ್ಯ ಅವರಿಗಾಗಿ.

ಇವರಿಬ್ಬರ ಸ್ನೇಹ ಗಟ್ಟಿಯಾಗಿದ್ದೇ ಮನೆಯ ವಿಚಾರವಾಗಿ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಾಗ ಮಾತನಾಡಿಸಿ ಸಹಾಯ ಮಾಡಿದ ಸಿದ್ದರಾಮಯ್ಯ ಅವರು ತದನಂತರ ಮರಿಸ್ವಾಮಿ ಅವರಿಗೆ ಆಪ್ತರಾಗಿಬಿಟ್ಟರು. ಪ್ರಪ್ರಥಮ ಬಾರಿ 70ರ ದಶಕದಲ್ಲಿ ಮರಿಸ್ವಾಮಿ ಮೈಸೂರಿನ ಡಿ ಸುಬ್ಬಯ್ಯ ರಸ್ತೆಯ ಹಾಸ್ಟೆಲ್ನಲ್ಲಿ ಇದ್ದರು. ಆಗ ಸಿದ್ದರಾಮಯ್ಯ ಅಲ್ಲಿಗೆ ಬಂದು ಮರಿಸ್ವಾಮಿ ಜತೆ ರೂಮ್ನಲ್ಲಿ ಉಳಿದಕೊಂಡರು. ಅಲ್ಲಿಂದ ಸಿದ್ದರಾಮಯ್ಯ ಅವರಿಗೆ ಮನೆ ಮಾಡಿಕೊಡುವ ಜವಾಬ್ದಾರಿ ಮರಿಸ್ವಾಮಿ ಹೆಗಲೇರಿತು.

ಹಾಸ್ಟೆಲ್ ನಂತರ ಸಿದ್ದರಾಮಯ್ಯ ಅವರಿಗಾಗಿ ಮರಿಸ್ವಾಮಿ ಮೊದಲು ಮನೆ ಮಾಡಿದ್ದು ಟಿಕೆ ಬಡಾವಣೆಯಲ್ಲಿ. ಅಲ್ಲಿ ಎಂಐಜಿ ಮನೆಯನ್ನು ಮರಿಸ್ವಾಮಿ ಬಾಡಿಗೆಗೆ ಪಡೆದರು. ಅಲ್ಲಿ ಮರಿಸ್ವಾಮಿ ಹಾಗೂ ಸಿದ್ದರಾಮಯ್ಯ ವಾಸಿಸತೊಡಗಿದರು. ಕೆಲ ವರ್ಷಗಳ ನಂತರ ಅಲ್ಲಿಂದ ಎಸ್ಬಿಎಂ ಬಡಾವಣೆಗೆ ಶಿಫ್ಟ್ ಆದರೂ ತದನಂತರ ಇವರಿಬ್ಬರ ಜರ್ನಿ ರಾಮಕೃಷ್ಣ ನಗರ ಸೇರಿ ವಿವಿಧೆಡೆ ಮುಂದುವರಿದಿತ್ತು. ಹೀಗೆ ಪದೇ ಪದೇ ಮನೆ ಬದಲಾಯಿಸುವ ಬದಲು ಏಕೆ ಸ್ವಂತ ಮನೆ ಮಾಡಬಾರದು ಅಂತಾ ಮರಿಸ್ವಾಮಿ ಅವರಿಗೆ ಅನಿಸಿತು. ಆಗಲೇ ರೂಪುಗೊಂಡಿದ್ದು ಟಿಕೆ ಬಡಾವಣೆಯ ಈಗ ಇರುವ ಮನೆ. ಮರಿಸ್ವಾಮಿ ಅವರು ಈ ಮನೆ ಕಟ್ಟಿದ್ದೇ ಸಿದ್ದರಾಮಯ್ಯ ಅವರಿಗಾಗಿ.

ಇನ್ನು ಊಟದ ವಿಚಾರ ಬಂದರೆ ಸಿದ್ದರಾಮಯ್ಯ ಅವರಿಗೆ ಏನು ಬೇಕು? ಏನು ಬೇಡ ? ಎಲ್ಲವೂ ಮರಿಸ್ವಾಮಿಗೆ ಗೊತ್ತಿದೆ. ಉಪ್ಪು, ಹುಳಿ, ಖಾರ ಯಾವ ಸಮಯಕ್ಕೆ, ಯಾವ ಊಟ, ತಿಂಡಿ ಬೇಕು ಅದರ ಇಂಚಿಂಚೂ ಮಾಹಿತಿ ಮರಿಸ್ವಾಮಿ ಅವರ ಬಳಿ ಇದೆ. ಮರಿಸ್ವಾಮಿ ತಾವು ಎಂದೂ ತಾವು ಮಾಡಿದ ಕೆಲಸಕ್ಕೆ ಪ್ರಚಾರ ಬಯಸಿದವರಲ್ಲ. ಮರಿಸ್ವಾಮಿ ಎಂದೂ, ಎಲ್ಲಿಯೂ ತಮಗೆ ಸಿದ್ದರಾಮಯ್ಯ ಗೊತ್ತು ಎಂದು ಹೇಳಿಕೊಂಡವರಲ್ಲ.