ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂಗಡಿಯೊಂದರಲ್ಲಿ ಸಿಹಿ ತಿಂಡಿಗಳ ಮೇಲೆ ಓಡಾಡಿದ ಇಲಿ; ಮಾಲೀಕರಿಗೆ ತಿನ್ನಿಸಿ ಎಂದ ನೆಟ್ಟಿಗರು

Rats Spotted Crawling on Food: ಅಂಗಡಿಯಲ್ಲಿ ಸಿಹಿ-ತಿಂಡಿಗಳ ಮೇಲೆ ಇಲಿಯೊಂದು ಮುಕ್ತವಾಗಿ ಓಡಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಕೋಲ್ಕತ್ತಾದ ಸೀಲ್ಡಾ ರೈಲು ನಿಲ್ದಾಣದ ಜನಪ್ರಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಅಂಗಡಿಯೊಂದರಲ್ಲಿ ಸಿಹಿ ತಿನಿಸುಗಳ ಮೇಲೆ ಓಡಾಡಿದ ಇಲಿ

-

Priyanka P
Priyanka P Oct 6, 2025 5:19 PM

ಕೋಲ್ಕತಾ: ಅಂಗಡಿಯೊಂದರೊಳಗೆ ತಹೇವಾರಿ ಸಿಹಿ ತಿಂಡಿಗಳ ಮೇಲೆ ಇಲಿಯೊಂದು ಮುಕ್ತವಾಗಿ ಓಡಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಕೋಲ್ಕತಾದ (Kolkata) ಸೀಲ್ಡಾ ರೈಲು ನಿಲ್ದಾಣದ ಜನಪ್ರಿಯ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಇದು ಹಲವರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಪ್ರಯಾಣಿಕರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಜತೆಗೆ ಸೋಂಕು ಹರಡುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳು ರೈಲ್ವೆಯ (Railway) ಆಹಾರ ಸುರಕ್ಷತಾ ಮಾನದಂಡಗಳನ್ನು ಟೀಕಿಸಿವೆ. ಹಾಗೆಯೇ ಅಂಗಡಿ ಮಾಲೀಕರ ನಿರ್ಲಕ್ಷ್ಯವನ್ನು ನೆಟ್ಟಿಗರು ಖಂಡಿಸಿದ್ದಾರೆ.

ಕೋಲ್ಕತಾದ ಸೀಲ್ಡಾ ರೈಲು ನಿಲ್ದಾಣದಲ್ಲಿರುವ ಹಳೆಯ ಅಂಗಡಿಯೊಂದರ ಕ್ಲೋಸ್-ಅಪ್ ದೃಶ್ಯಾವಳಿಗಳನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಅಂಗಡಿಯು ವಿವಿಧ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದರೂ, ಆಹಾರವನ್ನು ಬಹಿರಂಗವಾಗಿ ಪ್ರದರ್ಶಿಸಲಾದ ಕೌಂಟರ್‌ನಾದ್ಯಂತ ಇಲಿ ಮುಕ್ತವಾಗಿ ಸುತ್ತಾಡುತ್ತಿರುವುದು ತಕ್ಷಣವೇ ಗ್ರಾಹಕರ ಗಮನ ಸೆಳೆದಿದೆ.

ಆಹಾರದ ಟ್ರೇಗಳ ಮೇಲೆ ಇಲಿಗಳು ಓಡಾಡುತ್ತಿರುವ ದೃಶ್ಯವು ಆತಂಕಕಾರಿಯಾಗಿದೆ. ದೃಶ್ಯಗಳಲ್ಲಿ ಯಾವುದೇ ಅಂಗಡಿ ಸಿಬ್ಬಂದಿ ಇಲಿಯನ್ನು ಓಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿಲ್ಲ. ವರದಿಗಳ ಪ್ರಕಾರ, ರೈಲ್ವೆ ಇಲಾಖೆಯು ದೂರು ದಾಖಲಿಸಲಾಗಿದೆ ಮತ್ತು ಅಂಗಡಿಯ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದೆ.

ವಿಡಿಯೊ ವೀಕ್ಷಿಸಿ:

ಇನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯಗಳನ್ನು ನೋಡಿ ಕಿಡಿಕಾರಿದ್ದಾರೆ. ಒಬ್ಬ ವ್ಯಕ್ತಿ, ಇಂತಹ ಹಾಳಾದ ಆಹಾರವನ್ನು ಅಂಗಡಿ ಮಾಲೀಕರಿಗೆ ತಿನಿಸಬೇಕು ಎಂದು ಹೇಳಿದ್ದಾರೆ. ನಾನು ನಿನ್ನೆಯಷ್ಟೇ ಈ ಅಂಗಡಿಯಿಂದ ಸ್ಯಾಂಡ್‌ವಿಚ್‌ ಖರೀದಿಸಿದೆ. ಈಗ ಈ ರೀಲ್ ಅನ್ನು ನೋಡುತ್ತಿದ್ದೇನೆ ಎಂದು ಮತ್ತೊಬ್ಬ ವ್ಯಕ್ತಿ ಕಳವಳ ವ್ಯಕ್ತಪಡಿಸಿದಾರೆ.

ರೈಲ್ವೆ ನಿಲ್ದಾಣಗಳ ಅನೈರ್ಮಲ್ಯದ ಸ್ಥಿತಿಯನ್ನು ಹಲವು ಮಂದಿ ಎತ್ತಿ ತೋರಿಸಿದ್ದಾರೆ. ಅದು ರೈಲ್ವೆ ನಿಲ್ದಾಣವಾಗಿದ್ದರೆ, ಖಂಡಿತವಾಗಿಯೂ ಅದು ಅನೈರ್ಮಲ್ಯದಿಂದ ಕೂಡಿರುತ್ತದೆ ಎಂದು ಒಬ್ಬ ಬಳಕೆದಾರರು ಹೇಳಿದರು. ಅದಕ್ಕಾಗಿಯೇ ಆಹಾರವು ತುಂಬಾ ರುಚಿಕರವಾಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ಕಿರಿದಾದ ರಸ್ತೆಯಲ್ಲಿ ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ; ನೋಡುಗರು ನಿಬ್ಬೆರಗು, ಇಲ್ಲಿದೆ ವೈರಲ್ ವಿಡಿಯೊ

ಭಾರತೀಯ ರೈಲ್ವೆಯಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಭಾರತೀಯ ರೈಲ್ವೆಗಳು ಅತ್ಯಂತ ಅನೈರ್ಮಲ್ಯ ಆಹಾರವನ್ನು ನೀಡುತ್ತವೆ. ಅದು ರೈಲುಗಳಲ್ಲಿರಲಿ ಅಥವಾ ನಿಲ್ದಾಣಗಳಲ್ಲಿನ ಸ್ಟಾಲ್‌ಗಳಲ್ಲಿರಲಿ, ಅವು ಅನೈರ್ಮಲ್ಯದಿಂದ ಕೂಡಿರುತ್ತವೆ. ತಿನಿಸುಗಳ ಒಳಗೆ ಜಿರಳೆಗಳು ಮತ್ತು ಇಲಿಗಳು ಓಡಾಡುವುದನ್ನು ನಾನು ನೋಡಿದ್ದೇನೆ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.

ಕೆಲವು ಸಮಯದ ಹಿಂದೆ, ಲಖನೌನಲ್ಲಿರುವ ಜನಪ್ರಿಯ ಸಿಹಿತಿಂಡಿಗಳ ಅಂಗಡಿಯೊಳಗೆ ಇಲಿಗಳು ಟ್ರೇಗಳ ಮೇಲೆ ಮುಕ್ತವಾಗಿ ಓಡುತ್ತಿರುವ ವಿಡಿಯೊ ನೆಟ್ಟಿಗರನ್ನು ಬೆಚ್ಚಿಬೀಳಿಸಿತ್ತು. ಮೂಲತಃ ಆಹಾರ ಯೂಟ್ಯೂಬರ್ ಟೇಸ್ಟ್ ಆಫ್ ಸ್ಟ್ರೀಟ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೊದಲ್ಲಿ, ಸ್ಥಳೀಯ ಖಾದ್ಯವಾದ ಮಖನ್ ಮಲೈ ತಯಾರಿಸುವ ದೃಶ್ಯವನ್ನು ತೋರಿಸಲಾಗಿದೆ. ಈ ವೇಳೆ ಎಲ್ಲಿಂದಲೋ ಬಂದ ಇಲಿಗಳು ಸಿಹಿ ತಿನಿಸು ತಯಾರಿಸುತ್ತಿದ್ದ ಟ್ರೇಗಳಾದ್ಯಂತ ಓಡಾಡಿವೆ. ಇದು ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟು ಹಾಕುತ್ತದೆ.

ವಿಡಿಯೊ ವೀಕ್ಷಿಸಿ: