ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru Dasara 2025: ಮೈಸೂರು ಅರಮನೆಯಲ್ಲಿ ‘ಆಯುಧ ಪೂಜೆ’ ನೆರವೇರಿಸಿದ ಯದುವೀರ್ ಒಡೆಯರ್

Ayudha Puja 2025: ಆಯುಧ ಪೂಜೆ ಹಿನ್ನೆಲೆಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಮಾಡಲಾಯಿತು. ಸಂಪ್ರದಾಯದಂತೆ ಯದುವೀರ್ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದರು.

ಮೈಸೂರು: ದಸರಾ ಮಹೋತ್ಸವ (Mysuru Dasara 2025) ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ಯದುವೀರ್ ಒಡೆಯರ್ (Ayudha Puja 2025) ಅವರು ಆಯುಧ ಪೂಜೆ ನೆರವೇರಿಸಿದರು. ಕರಿಕಲ್ಲು ತೊಟ್ಟಿಯಲ್ಲಿ ಯದುವೀರರು ಪೂಜೆ ಮಾಡಿದ್ದು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಮಾಡಲಾಯಿತು.

ಬೆಳಗ್ಗೆ 6 ಗಂಟೆಗೆ ಚಂಡಿಕಾ ಹೋಮ ನಡೆಸಲಾಯಿತು. ಬಳಿಕ 7:55ಕ್ಕೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಯಿತು. ಬಳಿಕ ಆಯುಧಗಳನ್ನು ಶುಚಿಗೊಳಿಸಿ ವಾಪಸ್ ಅರಮನೆಗೆ ರವಾನಿಸಲಾಯಿತು. ಅವುಗಳನ್ನು ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಮಾಡಿ, ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಮಾಡಲಾಯಿತು ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದರು.

_Ayudha Puja  (1)

32 ಆಯುಧಗಳಿಗೆ ಪೂಜೆ

ಅಯುಧ ಪೂಜೆಯಲ್ಲಿ 32 ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪಟ್ಟದ ಕತ್ತಿ ವಿಜಯನಗರ ಕಾಲದಿಂದ ಬಂದಿದೆ. ವಿಜಯ ನರಸಿಂಹ ಕತ್ತಿ, ರಣಧೀರ ಕಂಠೀರವರ ಕಾಲದ ಕತ್ತಿ, ಕೃಷ್ಣರಾಜ ಒಡೆಯರ್ ಕಾಲದ ಕತ್ತಿ ಮತ್ತು ಆಯುಧಗಳಿಗೆ ಪೂಜೆ ನಡೆದಿದೆ. ಮೃಷಂಡಿ, ಪರಶು, ಶತಗ್ನಿ, ವಜ್ರಮುಷ್ಠಿಗೆ ಬಳಸುವ ಆಯುಧಗಳಿಗೆ, ಬಳಿಕ ರಾಜಪೋಷಾಕಿನಲ್ಲಿ ರಾಜರು ಕಲ್ಯಾಣ ಮಂಟಪದ ಆವರಣದಲ್ಲಿ ಆಯುಧ ಪೂಜೆ ಸಲ್ಲಿಸಿದರು.

ದುರ್ಗಾದೇವಿ 18 ಕೈಗಳಲ್ಲಿ ಹಿಡಿದಿರುವ ಆಯುಧಗಳ ಪ್ರತೀಕವಾಗಿ 32 ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಆಯುಧಗಳಿಗೆ ಪೂಜೆ ಸಲ್ಲಿಸಿದರೆ ರಾಜನಿಗೆ ಬಲ ಸಿಗುತ್ತದೆ, ವಿಜಯ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆ ಇದೆ.



ಇಂದು ಸಂಜೆ ಅರಮನೆಯಲ್ಲಿ ಖಾಸಗಿ ದರ್ಬಾರ್

ಇಂದು ಸಂಜೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಬೆಳ್ಳಿದ್ವಾರದಿಂದ ರಾಜರ ಪ್ರವೇಶವಾಗುತ್ತದೆ. ಹಸ್ತಲಾಘವದ ಮೂಲಕ ಸಿಂಹಾಸನದ ಏಳು ಮೆಟ್ಟಿಲು ಏರುತ್ತಾರೆ. ಸಿಂಹಾಸನವೇರಿ ರಾಜರು ದರ್ಬಾರ್ ಮಾಡುತ್ತಾರೆ. ದರ್ಬಾರ್ ಬಳಿಕ ಸಂಸ್ಥಾನ ಗೀತೆ ಪೊಲೀಸ್ ಬ್ಯಾಂಡ್‌ನಲ್ಲಿ ನುಡಿಸಲಾಗುತ್ತದೆ. ಸಭಾಸದರು ರಾಜರಿಗೆ ಗೌರವ ಮತ್ತು ರಕ್ಷೆ ನೀಡುತ್ತಾರೆ.

ಈ ಸುದ್ದಿಯನ್ನೂ ಓದಿ | Dasara Fashion 2025: ದಸರಾ ಹಬ್ಬದ ಟ್ರೆಡಿಷನಲ್ ಲುಕ್‌ಗೆ ಇಲ್ಲಿದೆ ಒಂದಿಷ್ಟು ಐಡಿಯಾ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪರಾಕ್‌ಗಳನ್ನು ಕೂಗಲಾಗುತ್ತದೆ. ರಾಣಿಯವರು ಬಂದು ರಾಜರಿಗೆ ನಮಸ್ಕರಿಸುತ್ತಾರೆ. ನಂತರ ದರ್ಬಾರ್ ಮುಗಿಸಿ ಪೂಜೆ ನೆರವೇರಿಸಿ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ಕಂಕಣ ವಿಸರ್ಜನೆ ಬಳಿಕ ನವರಾತ್ರಿ ಪೂಜೆ ಸಂಪನ್ನವಾಗುತ್ತದೆ. ಈ ವೇಳೆ ರಾಣಿಯವರಿಂದ ಮಹಾರಾಜರ ಪಾದ ಪೂಜೆ ನೆರವೇರಿಸಿ ಆಯುಧ ಪೂಜೆ ದಿನದ ಎಲ್ಲಾ ಪೂಜೆ ಕೈಂಕರ್ಯಗಳು ಮುಗಿಯುತ್ತವೆ.