ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yathindra Siddaramaiah: ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ; ಸುಳಿವು ನೀಡಿದ ಯತೀಂದ್ರ

5 ವರ್ಷ ಪೂರ್ತಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರಬೇಕು. ಅವರೇ ಇದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ತಿಳಿಸಿದರು. ತಂದೆಯೇ ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ; ಸುಳಿವು ನೀಡಿದ ಯತೀಂದ್ರ

-

Ramesh B Ramesh B Oct 16, 2025 5:43 PM

ಮೈಸೂರು, ಅ. 16: ''5 ವರ್ಷ ಪೂರ್ತಿ ಸಿದ್ದರಾಮಯ್ಯ (CM Siddaramaiah) ಮುಖ್ಯಮಂತ್ರಿಯಾಗಿ ಇರಬೇಕು. ಅವರೇ ಇದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಸಿದ್ದರಾಮಯ್ಯ ಅವರೇ 5 ವರ್ಷವೂ ಸಿಎಂ ಆಗಿ ಇರುತ್ತಾರೆ'' ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ (Yathindra Siddaramaiah) ತಿಳಿಸಿದರು.

ಮೈಸೂರಿನಲ್ಲಿ ಗುರುವಾರ (ಅ. 16) ಮಾತನಾಡಿದ ಅವರು, ʼʼನನಗೆ ನವೆಂಬರ್ ಕ್ರಾಂತಿ ವಿಚಾರ ಗೊತ್ತಿಲ್ಲ. ತಂದೆ ಕೊಟ್ಟಿರುವ ಮಾಹಿತಿಯ ಪ್ರಕಾರ ಹೈಕಮಾಂಡ್ ಅಥವಾ ಬೇರೆ ನಾಯಕರಾಗಲಿ ಯಾರು ಕೂಡ ನವೆಂಬರ್ ಆದ ಮೇಲೆ ಅಧಿಕಾರ ಬಿಡಿ ಎಂದು ಹೇಳಿಲ್ಲ. ಹೀಗಾಗಿ ಇವರೆಲ್ಲ ಯಾವ ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲʼʼ ಎಂದು ಹೇಳಿದರು.

ʼʼರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಈಗಿನ ಪರಿಸ್ಥಿತಿ ನೋಡಿದರೆ ನಮ್ಮ ತಂದೆಯೇ 5 ವರ್ಷವೂ ಸಿಎಂ ಆಗಿ ಇರುತ್ತಾರೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ. ಇಲ್ಲವಾಗಿದ್ದರೆ ಶಾಸಕರು ಸುಮ್ಮನೆ ಇರುತ್ತಿದ್ದರಾ? ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತಿದ್ದರು'' ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ: Ban on RSS activities: ಆರ್‌ಎಸ್ಎಸ್‌ಗೆ ಅಂಕುಶ; ತಮಿಳುನಾಡು ಮಾದರಿ ಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ

ʼʼಸಂಪುಟ ಪುನಾರಚನೆ ಬಗ್ಗೆ ತಂದೆಯ ಜತೆ ಚರ್ಚೆ ಮಾಡಿಲ್ಲ. ತಂದೆಯೇ ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆʼʼ ಎಂದು ಡಾ. ಯತೀಂದ್ರ ಹೇಳಿದರು. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಎಂಎಲ್‌ಸಿ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ʼʼವಿಶ್ವನಾಥ್‌ ತಾನು ರಾಜಕೀಯದಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಾರೆ. ಅವರು ಪ್ರತಿಯೊಂದು ಪಕ್ಷಕ್ಕೂ ಹೋಗುತ್ತಾರೆ. ಅವರ ಕೆಲಸ ಆಗುವ ತನಕ ಸುಮ್ಮನಿರುತ್ತಾರೆ. ನಂತರ ಅವರ ವಿರುದ್ಧವೇ ಮಾತನಾಡುತ್ತಾರೆ. ನೌಕರರ ವರ್ಗಾವಣೆ ನಿಯಮ ಪ್ರಕಾರ ನಡೆಯುತ್ತಿದೆ. ಕೆಲವೊಮ್ಮೆ ಶಾಸಕರನ್ನು ಕೇಳಿಯೂ ವರ್ಗಾವಣೆ ಮಾಡುತ್ತಾರೆʼʼ ಎಂದರು.

ಆರೆಸ್‌ಎಸ್‌ ಬಗ್ಗೆ ಯಂತೀಂದ್ರ ಹೇಳಿದ್ದೇನು?

ಆರ್‌ಎಸ್‌ಎಸ್‌ ಚಟುವಟಿಕೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ʼʼಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಡೆಸದಂತೆ ಪತ್ರ ಬರೆದಿದ್ದಾರೆ. ಪ್ರಿಯಾಂಕ್‌ ಖರ್ಗೆ ಹೇಳಿರುವುದು ಸರಿ ಇದೆ. ಇಡೀ ದೇಶಕ್ಕೆ ಒಂದು ಕಾನೂನಾದರೆ ಆರ್‌ಎಸ್‌ಎಸ್‌ಗೆ ಒಂದು ಕಾನೂನು ಯಾಕೆ? ಕಾನೂನು ಎಲ್ಲರಿಗೂ ಒಂದೆʼʼ ಎಂದು ತಿಳಿಸಿದರು.

ಯಾರ ಹಕ್ಕನ್ನೂ ಕಿತ್ತುಕೊಳ್ಳುತ್ತಿಲ್ಲ

ಆರ್‌ಎಸ್‌ಎಸ್‌ ಬ್ಯಾನ್ ಮಾಡುವ ಬಗ್ಗೆ ಮುಖ್ಯಮಂತ್ರಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ʼʼನಾವು ಯಾರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ಅವರು ಅನುಮತಿ ಪಡೆದುಕೊಂಡು ಕಾರ್ಯಕ್ರಮ ಮಾಡಲಿ. ತಮಿಳುನಾಡಿನಲ್ಲಿ ಯಾವ ರೀತಿ ಕಾನೂನು ತಂದಿದ್ದಾರೆ ಅದನ್ನು ನೋಡಿಕೊಂಡು ನಾವು ಮಾಡುತ್ತೇವೆ. ಆರ್‌ಎಸ್‌ಎಸ್‌ ಬ್ಯಾನ್ ಆಗಿದ್ದ ಸಂಸ್ಥೆ. ನಾವು ಬ್ಯಾನ್ ಮಾಡಲಿಕ್ಕೆ ಹೊರಟಿಲ್ಲ. ಅನುಮತಿ ಇಲ್ಲದೆ ತಮಗೆ ಬೇಕಾದಂತೆ ಎಲ್ಲ ಕಡೆ ಕಾರ್ಯಚಟುವಟಿಕೆಗಳನ್ನು ಮಾಡಬಾರದು ಅಷ್ಟೇ. ನಾವು ಯಾರ ಹಕ್ಕನ್ನೂ ಕಿತ್ತುಕೊಳ್ಳುತ್ತಿಲ್ಲʼʼ ಎಂದು ಹೇಳಿದರು.